ADVERTISEMENT

ಕೆಜಿಎಫ್‌ | ಮೈನಿಂಗ್ ಪ್ರದೇಶ: ಬಯಲು ಶೌಚಾಲಯವೇ ಗತಿ

ಸೌಕರ್ಯವಿಲ್ಲದ ಸಾರ್ವಜನಿಕ ಶೌಚಾಲಯ: ಅಶುದ್ಧ ನೀರು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:01 IST
Last Updated 29 ಡಿಸೆಂಬರ್ 2025, 7:01 IST
ಕೆಜಿಎಫ್‌ ಎನ್‌ಟಿ ಬ್ಲಾಕ್‌ನಲ್ಲಿರುವ ಸಾರ್ವಜನಿಕ ಶೌಚಾಲಯ ದುಸ್ಥಿತಿ
ಕೆಜಿಎಫ್‌ ಎನ್‌ಟಿ ಬ್ಲಾಕ್‌ನಲ್ಲಿರುವ ಸಾರ್ವಜನಿಕ ಶೌಚಾಲಯ ದುಸ್ಥಿತಿ   

ಕೆಜಿಎಫ್‌: ಕೋಲಾರ ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಿ ಒಂಬತ್ತು ವರ್ಷವಾದರೂ, ನಗರದ ಮೈನಿಂಗ್‌ ಪ್ರದೇಶದಲ್ಲಿ ಇಂದಿಗೂ ಬಹುತೇಕ ಮಂದಿ ಬಹಿರ್ದೆಸೆಗೆ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ.

ಬ್ರಿಟಿಷರು ಚಿನ್ನದ ಗಣಿ ಆರಂಭಿಸಿದಾಗ, ತಮಗೆ ಬೇಕಾದ ರೀತಿಯಲ್ಲಿ ಎಕರೆ ಗಟ್ಟಲೆ ಪ್ರದೇಶದಲ್ಲಿ ದೊಡ್ಡ ಬಂಗ್ಲೆ ಕಟ್ಟಿಕೊಂಡು ಐಶಾರಾಮಿ ಜೀವನ ನಡೆಸಿದರು. ಆದರೆ, ಅವರ ಬಳಿ ಕೆಲಸ ಮಾಡುತ್ತಿದ್ದ ಭಾರತೀಯ ಕೂಲಿ ಕಾರ್ಮಿಕರಿಗೆ ಸಣ್ಣ ಸಿಮೆಂಟ್‌ ಶೀಟ್‌ ಮನೆಗಳನ್ನು ವಾಸ ಮಾಡಲು ನಿರ್ಮಿಸಿಕೊಟ್ಟರು. 10ಕ್ಕೆ 15 ಅಡಿ ಇರುವ ಸಣ್ಣ ಮನೆಯಲ್ಲಿ ಕೂಡು ಕುಟುಂಬ ಒಟ್ಟಿಗೆ ಬಾಳುವುದೇ ಕಷ್ಟ. ಇಂತಹ ವ್ಯವಸ್ಥೆಯಲ್ಲಿ ಶೌಚಾಲಯ ನಿರ್ಮಾಣ ಎಲ್ಲಿ ಮಾಡುವುದು ಎಂಬ ಮನಸ್ಥಿತಿ ಮೊದಲಿನಿಂದಲೂ ನಡೆದುಕೊಂಡು ಬಂದಿತ್ತು. ಈಗ ಕಾಲ ಸುಧಾರಣೆಯಾಗಿದ್ದರೂ, ಮೈನಿಂಗ್‌ ಪ್ರದೇಶದ ಹಲವು ಮನೆಗಳಲ್ಲಿ ಸ್ವಂತ ಶೌಚಾಲಯ ಇಲ್ಲ. ಬಹುತೇಕ ಮಂದಿ ಮೈನಿಂಗ್‌ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಶೌಚಾಲಯ ಗಬ್ಬು ನಾತ ಬರುತ್ತಿರುವುದರಿಂದ ಅನಿವಾರ್ಯವಾಗಿ ಸೈನೈಡ್‌ ಗುಡ್ಡ ಇಲ್ಲವೇ ಅದರ ಬಳಿ ಇರುವ ಮುಳ್ಳುಪೊದೆಗಳು ಬಯಲು ಶೌಚಾಲಯವಾಗಿ ನಿರ್ಮಾಣವಾಗಿದೆ.

ಮೈನಿಂಗ್‌ ಪ್ರದೇಶದಲ್ಲಿ ಕಾರ್ಮಿಕರಿಗೆ ಸೇರಿದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮನೆಗಳಿವೆ. ಗಣಿ ಅಡಳಿತ ವರ್ಗದಿಂದ ಅನುಮತಿ ಪಡೆದ ಕೆಲ ಸ್ಥಿತಿವಂತರು ಇತ್ತೀಚಿನ ದಿನಗಳಲ್ಲಿ ವೈಯಕ್ತಿಕವಾಗಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಬಿಜಿಎಂಎಲ್‌ನಿಂದ ಹಕ್ಕು ಪತ್ರ ಪಡೆದಿದ್ದರೂ, ಅದಕ್ಕೆ ನಗರಸಭೆಯಿಂದ ಎನ್‌ಒಸಿ ಪಡೆಯದ ಬಹಳಷ್ಟು ಕುಟುಂಬಗಳು ಶೌಚಾಲಯ ನಿರ್ಮಾಣಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.

ADVERTISEMENT

ನಗರದಲ್ಲಿ ಎರಡು ವರ್ಷದ ಹಿಂದೆ ಶೌಚಾಲಯ ಇಲ್ಲದ ಮನೆಗಳಿಗಾಗಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಹನ್ನೆರಡು ಸಾವಿರ ರೂಪಾಯಿ ಸಹಾಯಧನ ನೀಡಲು ನಗರಸಭೆ ಯೋಜನೆ ರೂಪಿಸಿತ್ತು. ಅದಕ್ಕಾಗಿ 12,515 ಅರ್ಜಿಗಳನ್ನು ನಾಗರಿಕರಿಂದ ಸ್ವೀಕರಿಸಲಾಗಿತ್ತು. ಅವುಗಳ ಪೈಕಿ 7,279 ಮಂದಿಗೆ ಮಾತ್ರ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ನೀಡಲಾಯಿತು. ಆದರೆ, ಸಹಾಯಧನ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯಿತು. ಶೌಚಾಲಯ ಇದ್ದ ಮನೆಗಳಿಗೆ ಸಹಾಯಧನ ನೀಡಿದ್ದು, ಶೌಚಾಲಯವೇ ಇಲ್ಲದ ಮನೆಗಳಿಗೆ ಸಹಾಯಧನ ನಿರಾಕರಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಹೀಗೆ ನಿರಾಕರಿಸಲ್ಪಟ್ಟ 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಶೌಚಾಲಯ ಇದೆಯೇ ಇಲ್ಲವೇ ಎಂಬ ನಿಖರ ಮಾಹಿತಿ ನಗರಸಭೆ ಬಳಿ ಇಲ್ಲ.

ನಗರದಲ್ಲಿ ನಗರಸಭೆ ಮತ್ತು ಕೆಜಿಎಫ್‌ ನಗರಾಭಿವೃದ್ಧಿ ಪ್ರಾಧಿಕಾರ ಮೈನಿಂಗ್‌ ಪ್ರದೇಶದ ಹಲವೆಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಿಕೊಟ್ಟಿತು. ಆದರೆ, ಕಟ್ಟಡ ಕಾಮಗಾರಿ ಮುಗಿದಿದ್ದರೂ, ಅದಕ್ಕೆ ನೀರಿನ ವ್ಯವಸ್ಥೆ, ಶೌಚಾಲಯ ಸ್ವಚ್ಛತೆ ಬಗ್ಗೆ ಸಿಬ್ಬಂದಿ ನೇಮಕವಾಗದೆ ಇರುವುದರಿಂದ ಹಲವು ಶೌಚಾಲಯಗಳು ದಶಕಗಳು ಕಳೆದರೂ ಇಂದಿಗೂ ಉದ್ಘಾಟನೆಯೇ ಆಗಿಲ್ಲ.!. ಅವುಗಳ ತುಂಬಾ ಪೊದೆಗಳು ಬೆಳೆದು ನಿಂತಿವೆ.

ನಗರಸಭೆಯಲ್ಲಿ ಈಗ ಶೌಚಾಲಯ ಸ್ವಚ್ಚತಾ ಕಾರ್ಯಕ್ಕೆ ಸಿಬ್ಬಂದಿ ನೇಮಕ ಮಾಡುವುದಿಲ್ಲ. ಈ ಕಾರ್ಯಕ್ಕೆ ಪೌರಕಾರ್ಮಿಕರನ್ನು ಬಳಸಿಕೊಳ್ಳುವಂತಿಲ್ಲ. ಆಯಾ ಬಡಾವಣೆಯ ನಿವಾಸಿಗಳು ಒಟ್ಟಗೂಡಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ನೀರಿನ ವ್ಯವಸ್ಥೆಯನ್ನು ಮಾತ್ರ ನಗರಸಭೆಯಿಂದ ಮಾಡಲಾಗುವುದು ಎಂದು ನಗರಸಭೆ ಅಧಿಕಾರಿಗಳು ವಾದ ಮಂಡಿಸುತ್ತಿದ್ದಾರೆ.

ಸಾರ್ವಜನಿಕ ಶೌಚಾಲಯಕ್ಕೆ ಬಳಸುವ ಅಶುದ್ಧ ನೀರು
ಮುಂಜಾನೆ ಸೈನೈಡ್‌ ಗುಡ್ಡದ ಕಡೆ ಬಯಲು ಶೌಚಕ್ಕೆ ಹೋಗುತ್ತಿರುವ ನಿವಾಸಿ
ಎಸ್‌ಟಿ ಬ್ಲಾಕ್‌ ಬಳಿ ಇರುವ ಸಾರ್ವಜನಿಕ ಶೌಚಾಲಯ
ಮೈನಿಂಗ್‌ ನಡೆಯುತ್ತಿದ್ದಾಗ ನಮಗೆ ಸಮಸ್ಯೆ ಇರಲಿಲ್ಲ. ಈಗ ಸಾರ್ವಜನಿಕ ಶೌಚಾಲಯಕ್ಕೆ ನಗರಸಭೆಯಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ.
ಜೇಮ್ಸ್‌, ಕಾರ್ಮಿಕ ಕುಟುಂಬದ ನಿವಾಸಿ

ಸಾರ್ವಜನಿಕ ಶೌಚಾಲಯ ಕಟ್ಟಿಕೊಡಲಿ ಬಯಲು ಶೌಚಾಲಯಕ್ಕೆ ಹೋಗಲು ನಮಗೂ ಇಷ್ಟವಿಲ್ಲ. ಮಹಿಳೆಯರು ಬಹಳ ಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಶೌಚಾಲಯಕ್ಕೆ ಅರ್ಜಿ ಕೊಟ್ಟರೂ ನಗರಸಭೆಯಿಂದ ನಿರ್ಮಾಣ ಮಾಡಿಕೊಟ್ಟಿಲ್ಲ. ಮಹಿಳೆಯರು ಅದರಲ್ಲಿಯೂ ಹುಡುಗಿಯರ ಹಿತದೃಷ್ಟಿಯಿಂದಾದರೂ ಸಾರ್ವಜನಿಕ ಶೌಚಾಲಯ ಕಟ್ಟಿಕೊಡಲಿ ಇಲ್ಲವೇ ಮನೆಗೊಂದು ಶೌಚಾಲಯ ನಿರ್ಮಿಸಿಕೊಡಲಿ ಎಂಬುದು ಮೈನಿಂಗ್‌ ಪ್ರದೇಶದ ಮಹಿಳೆಯರ ಮನದಾಳದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.