ADVERTISEMENT

ರೈತರ ಬಳಿಗೆ ಹೋಗಿ ರಾಗಿ ಖರೀದಿಸಿ: ಅಧಿಕಾರಿಗಳಿಗೆ ಶಾಸಕ ರೂಪಕಲಾ ಶಶಿಧರ್ ತಾಕೀತು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 7:03 IST
Last Updated 15 ಫೆಬ್ರುವರಿ 2026, 7:03 IST
ಕೆಜಿಎಫ್‌  ರಾಬರ್ಟಸನ್‌ಪೇಟೆಯಲ್ಲಿ ಶನಿವಾರ ರೈತರಿಂದ ರಾಗಿ ಖರೀದಿ ಮಾಡುವ ಕಾರ್ಯಕ್ರಮಕ್ಕೆ ಶಾಸಕಿ ಎಂ.ರೂಪಕಲಾ ಚಾಲನೆ ನೀಡಿದರು. ರೈತರು ಮತ್ತು ಅಧಿಕಾರಿಗಳು ಹಾಜರಿದ್ದರು.
ಕೆಜಿಎಫ್‌  ರಾಬರ್ಟಸನ್‌ಪೇಟೆಯಲ್ಲಿ ಶನಿವಾರ ರೈತರಿಂದ ರಾಗಿ ಖರೀದಿ ಮಾಡುವ ಕಾರ್ಯಕ್ರಮಕ್ಕೆ ಶಾಸಕಿ ಎಂ.ರೂಪಕಲಾ ಚಾಲನೆ ನೀಡಿದರು. ರೈತರು ಮತ್ತು ಅಧಿಕಾರಿಗಳು ಹಾಜರಿದ್ದರು.   

ಕೆಜಿಎಫ್‌: ಇಲ್ಲಿನ ರಾಬರ್ಟ್‌ಸನ್‌ಪೇಟೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಗೋದಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಶಾಸಕಿ ರೂಪಕಲಾ ಶಶಿಧರ್ ಅವರು ಶನಿವಾರ ಚಾಲನೆ ನೀಡಿದರು. 

ಈ ವೇಳೆ ಮಾತನಾಡಿದ ಅವರು, ‘ರೈತರು ಕಷ್ಟಪಟ್ಟು ಬೆಳೆದ ಬೆಳೆಯು ದಲ್ಲಾಳಿಗಳ ಪಾಲಾಗುತ್ತಿದೆ. ತಮ್ಮ ಬೆಳೆಯ ಲಾಭವನ್ನು ದಲ್ಲಾಳಿಗಳು ತಿನ್ನುತ್ತಿದ್ದಾರೆ. ಇದನ್ನು ತಪ್ಪಿಸಿ ರೈತರಿಗೆ ಸಹಾಯ ಹಸ್ತ ಚಾಚಿದ ಸರ್ಕಾರವು ಬೆಂಬಲ ಬೆಲೆಯೊಂದಿಗೆ ರೈತರಿಂದಲೇ ನೇರವಾಗಿ ರಾಗಿಯನ್ನು ಖರೀದಿಸುತ್ತಿದೆ’ ಎಂದು ಹೇಳಿದರು. 

ಪ್ರತಿ ಕ್ವಿಂಟಲ್ ರಾಗಿಗೆ ಸರ್ಕಾರವು ₹4,886 ನಿಗದಿಪಡಿಸಿದೆ. ಸರ್ಕಾರದ ಈ ಯೋಜನೆಯಿಂದ ರೈತರ ರಾಗಿಗೆ ಉತ್ತಮ ಬೆಲೆ ಸಿಗಲಿದೆ. ಸಂಪೂರ್ಣ ಲಾಭಾಂಶವು ರೈತರಿಗೆ ಸಿಗಲಿದೆ. ಒಬ್ಬ ರೈತನಿಂದ ಗರಿಷ್ಠ 50 ಕ್ವಿಂಟಲ್‌ವರೆಗೆ ರಾಗಿ ಖರೀದಿಸಲಾಗುವುದು. ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದರು. 

ADVERTISEMENT

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಇಲಾಖೆಯೇ ರೈತರ ಮನೆ ಬಾಗಿಲಿಗೆ ಹೋಗಬೇಕು. ಇದರಿಂದ ರೈತರು ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಲು ತಗುಲುವ ಸಾಗಾಣಿಕೆ ವೆಚ್ಚ ಉಳಿತಾಯವಾಗಲಿದೆ. ರೈತರಿಂದ ಖರೀದಿಸಲಾಗುವ ರಾಗಿಯನ್ನು ಮುಂದಿನ ದಿನಗಳಲ್ಲಿ ಪಡಿತರ ವಿತರಣೆಗೆ ಬಳಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. 

ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ರಘು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.