
ಕೆಜಿಎಫ್: ರಾಬರ್ಟಸನ್ ಪೇಟೆಯ ಹುಲ್ಲು ಮಾರುಕಟ್ಟೆಯಲ್ಲಿ ತೆರವು ಮಾಡಲಾಗಿರುವ 2.25 ಎಕರೆ ಜಮೀನಿನಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದ್ದು, ನಗರಕ್ಕೆ ಹೊಸ ರೂಪ ಸಿಗಲಿದೆ.
ನಗರದಲ್ಲಿ ಉಂಟಾಗಿರುವ ಪಾರ್ಕಿಂಗ್ ಸಮಸ್ಯೆ ನೀಗಿಸಲು ಸ್ಥಳ ಹುಡುಕಾಟ ನಡೆಸುತ್ತಿದ್ದ ನಗರಸಭೆ, ಹುಲ್ಲು ಮಾರುಕಟ್ಟೆಯಲ್ಲಿ ಅನುಪಯುಕ್ತವಾಗಿದ್ದ ಸ್ಥಳ ಮತ್ತು ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡ ತೆರವುಗೊಳಿಸಲು ಮುಂದಾಯಿತು. ಮೊದಲು ಪ್ರತಿರೋಧ ವ್ಯಕ್ತವಾದರೂ ನಂತರ ಅಲ್ಲಿದ್ದ ಅಂಗಡಿ ಮಾಲೀಕರಿಗೆ ನೂತನ ಮಾರುಕಟ್ಟೆಯಲ್ಲಿ ಅಂಗಡಿ ಮಂಜೂರು ಮಾಡಲು ಆದ್ಯತೆ ನೀಡುವುದಾಗಿ ಮನವೊಲಿಸಲಾಯಿತು. ಈ ಹಿನ್ನೆಲೆ ನಗರದ ಮಧ್ಯಭಾಗದಲ್ಲಿ 2.25 ಎಕರೆ ಜಮೀನು ಸದ್ಯಕ್ಕೆ ಸಿಕ್ಕಿದೆ. ಈ ಜಮೀನಿನ ಪಕ್ಕದಲ್ಲಿ ಇನ್ನೂ ಸರ್ಕಾರಿ ಜಾಗ ಇದ್ದು, ಅವುಗಳನ್ನು ಕೂಡ ಒತ್ತುವರಿ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಅವುಗಳನ್ನು ತೆರವುಗೊಳಿಸುವ ಯೋಚನೆ ಇಲ್ಲ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ನಗರಸಭೆಯು ಹಣಕಾಸಿನ ಅನುದಾನಕ್ಕಾಗಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಸಾಲ ಪಡೆಯಲು ಮುಂದಾಗಿದ್ದು, ಸಾಲ ಮಂಜೂರು ಮಾಡುವುದಾಗಿ ನಿಗಮದ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ. ಈ ಹಿನ್ನೆಲೆ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗುವ ಸೂಚನೆ ಇದ್ದು, ನಗರಸಭೆ ನೀಲನಕ್ಷೆಯನ್ನು ತಯಾರು ಮಾಡಲಾಗಿದೆ. ಅದಕ್ಕೆ ಆಡಳಿತಾತ್ಮಕ ಮಂಜೂರಾತಿ ಪಡೆಯಲು ಯತ್ನಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿ ಎಂ.ಆರ್.ರವಿ ಅವರು ಗುರುವಾರ ನಗರಸಭೆಗೆ ಭೇಟಿ ನೀಡಿ ಮಾರುಕಟ್ಟೆ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದರು.
ಮೊದಲ ಹಂತದಲ್ಲಿ ನಿರ್ಮಾಣವಾಗುವ ವಾಣಿಜ್ಯ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಸುಮಾರು ಒಂದು ಸಾವಿರ ಬೈಕ್ ಮತ್ತು 200 ಕಾರು ನಿಲ್ಲಿಸಲು ಸ್ಥಳಾವಕಾಶ ಇರಲಿದೆ. ನೆಲ ಅಂತಸ್ತಿನಲ್ಲಿ ಸುಮಾರು 108 ಅಂಗಡಿ ನಿರ್ಮಾಣವಾಗಲಿದೆ. ಕಟ್ಟಡ ಸುತ್ತಲೂ ರಸ್ತೆ ವ್ಯವಸ್ಥೆ ಇದ್ದು, ನಾಲ್ಕು ಬದಿಯಲ್ಲಿಯೂ ಕೂಡ ಪ್ರವೇಶಕ್ಕಾಗಿ ಗೇಟ್ ಅಳವಡಿಸಲಾಗುವುದು. ಒಂದನೇ ಮಹಡಿಯಲ್ಲಿ ಫುಡ್ ಕೋರ್ಟ್, ಪಿವಿಆರ್, ಸೂಪರ್ ಮಾರ್ಕೆಟ್ ಮತ್ತಿತರ ದೊಡ್ಡ ಪ್ರಮಾಣದ ವಾಣಿಜ್ಯ ಮಳಿಗೆಗಳು ಬರಲಿದೆ. ಒಂದು ಬದಿಯಲ್ಲಿ ಹಣ್ಣಿನ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ನಿರ್ಮಾಣವಾಗಲಿರುವ ವಾಣಿಜ್ಯ ಕಟ್ಟಡದ ಪಕ್ಕದಲ್ಲಿಯೇ ಹಾಲಿ ಇರುವ ದನದ ಮಾಂಸದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಯೋಜನೆ ಇದೆ. ಅದಕ್ಕಾಗಿ ನಗರದ ಹೊರವಲಯದಲ್ಲಿ ಮಾಂಸದ ವ್ಯಾಪಾರಿಗಳಿಗೆ ಅನುಕೂಲವಾಗಬಲ್ಲ ಸ್ಥಳ ಹುಡುಕಾಟ ನಡೆಸಲಾಗುತ್ತಿದೆ.
ಅಂಕೆಗೆ ಬಾರದ ಪಾರ್ಕಿಂಗ್ ವ್ಯವಸ್ಥೆ
ರಾಬರ್ಟಸನ್‌ಪೇಟೆಯಲ್ಲಿ ಪ್ರಸ್ತುತ ಪಾರ್ಕಿಂಗ್ ಸಮಸ್ಯೆ ಮಿತಿ ಮೀರಿದೆ. ನೋ ಪಾರ್ಕಿಂಗ್ ಜಾಗದಲ್ಲಿ ಕೂಡ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಇರುವುದರಿಂದ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳನ್ನು ನಿಯಂತ್ರಿಸಲು ಪೊಲೀಸರಿಗೆ ಕೂಡ ಕಷ್ಟವಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.