ADVERTISEMENT

ರಾಮಸಾಗರ ಕೆರೆ ಒತ್ತುವರಿ ತೆರವಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:48 IST
Last Updated 25 ಡಿಸೆಂಬರ್ 2025, 7:48 IST
ಕೆಜಿಎಫ್ ತಾಲ್ಲೂಕಿನ ರಾಮಸಾಗರ ಕೆರೆ
ಕೆಜಿಎಫ್ ತಾಲ್ಲೂಕಿನ ರಾಮಸಾಗರ ಕೆರೆ   

ಕೆಜಿಎಫ್: ತಾಲ್ಲೂಕಿನ ರಾಮಸಾಗರ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡ ಜಮೀನನ್ನು ತೆರವುಗೊಳಿಸುವಂತೆ ಉಪ ವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್ ಮೈತ್ರಿ ಆದೇಶ ಹೊರಡಿಸಿದ್ದಾರೆ.

ಈ ಜಮೀನು ಮಾಜಿ ಶಾಸಕ ದೊರೆಸ್ವಾಮಿ ನಾಯ್ಡು ಕುಟುಂಬಕ್ಕೆ ಸೇರಿದ್ದಾಗಿದೆ. ಕೆರೆ ಒತ್ತುವರಿ ವಿರುದ್ಧ ರೈತ ಸಂಘದ ಹೋರಾಟಗಾರ್ತಿ ನಳನಿಗೌಡ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ರಾಮಸಾಗರ ಕೆರೆ ಒತ್ತುವರಿ ವಿಚಾರಣೆ ನಡೆಸಲಾಯಿತು. 

ಕೆರೆ ಜಮೀನು ಮತ್ತು ಗುಂಡು ತೋಪನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಸಾಧ್ಯವಿಲ್ಲ. ಆದರೂ, ಕಂದಾಯ ಇಲಾಖೆ ಅಧಿಕಾರಿಗಳು ಭೂ ಕಂದಾಯ ನಿಯಮಾವಳಿಗೆ ವಿರುದ್ಧವಾಗಿ ಮೂಲ ದಾಖಲೆಗಳನ್ನು ಪರಿಶೀಲಿಸದೆ ಒತ್ತುವರಿದಾರರಿಗೆ ಮ್ಯೂಟೇಶನ್ ಮಾಡಿದ್ದಾರೆ. ಹೊಸ ಸರ್ವೆ ನಂಬರ್ ನೀಡಲಾಗಿದೆ. ಇದಲ್ಲದೆ ರಾಮಸಾಗರ ಕೆರೆಗೆ ಸೇರಿದ ಸುಮಾರು ನೂರು ಎಕರೆ ಜಮೀನು ಒತ್ತುವರಿ ಆಗಿದೆ. ಅದರಲ್ಲಿ ದೊರೆಸ್ವಾಮಿ ನಾಯ್ಡು ಕುಟುಂಬಕ್ಕೆ 13 ಎಕರೆ ಸೇರಿದ್ದು, ಅದರ ಒತ್ತುವರಿ ತೆರೆವುಗೊಳಿಸುವಂತೆ ನಳಿನಿ ಗೌಡ ಕೋರಿದ್ದರು.

ADVERTISEMENT

ಮಾಜಿ ಶಾಸಕ ದೊರೆಸ್ವಾಮಿ ನಾಯ್ಡು ಅವರಿಗೆ 1949 ಮತ್ತು 1963ರಲ್ಲಿ ಗ್ರೂ ಮೋರ್ ಫುಡ್ ಯೋಜನೆ ಅಡಿ ಜಮೀನು ಮಂಜೂರಾಗಿದೆ. ಎಲ್ಲವೂ ಕಾನೂನು ಬದ್ಧವಾಗಿದೆ ಎಂಬುದು ಮಾಜಿ ಶಾಸಕರ ಕುಟುಂಬದ ವಾದ.

ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿಗಳು ಗ್ರೋ ಮೋರ್ ಫುಡ್ ಯೋಜನೆ ಅಡಿ ಮಂಜೂರಾದ ಭೂಮಿಯನ್ನು ಹೊರೆತುಪಡಿಸಿ ಸರ್ವೆ ನಂಬರ್ 52ರಲ್ಲಿ ಬರುವ ವಿಜಯಲಕ್ಷ್ಮಿ, ಕೆ.ಮುನಿರತ್ನಂ ನಾಯ್ಡು, ಕೆ.ನಳಿನಿ ರಾಮ, ಟಿ.ಕಿರಣ್ ಕುಮಾರ್ ಮತ್ತು ಎಂ.ಶಾಂತ ಅವರ ಹೆಸರನ್ನು ರದ್ದುಗೊಳಿಸಬೇಕೆಂದು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.