ಕೆಜಿಎಫ್: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಅಧಿಕ ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ.
ಮೊದಲು ಬೀದಿ ನಾಯಿಗಳನ್ನು ಕಾಡಿಗೆ ಬಿಡುವ ಕೆಲಸ ಮೊದಲು ಆಗುತ್ತಿತ್ತು. ಆದರೆ, ಪ್ರಾಣಿ ಪ್ರಿಯರ ಮತ್ತು ಮೂಕ ಪ್ರಾಣಿಗಳಿಗೆ ರಕ್ಷಣೆ ಒದಗಿಸುವ ಕಾನೂನು ಬಂದ ನಂತರ ನಾಯಿಗಳ ಮೇಲೆ ನಿಯಂತ್ರಣ ತಪ್ಪಿದೆ. ಈಚೆಗೆ ನಾಯಿಗಳನ್ನು ಹಿಡಿದು ಅದಕ್ಕೆ ರೇಬಿಸ್ ಹರಡದಂತೆ ಚುಚ್ಚುಮದ್ದು ನೀಡುವ ಕೆಲಸ ಆಗುತ್ತಿದೆ. ಗಂಡು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದರೂ, ಅದು ಯಶಸ್ವಿಯಾಗಿ ನಡೆಯುತ್ತಿಲ್ಲ. ಹೆಣ್ಣು ನಾಯಿಗಳಿಗೆ ಸಂತತಿ ಹರಣ ಕಾರ್ಯ ಚುರುಕಾಗಿ ನಡೆಯುತ್ತಿಲ್ಲ. ಇದರಿಂದಾಗಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ.
ನಗರದಿಂದ ಪ್ರತಿ ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅವರು ವಾಪಸ್ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಮೈನಿಂಗ್ ಪ್ರದೇಶದಲ್ಲಿ ವಿದ್ಯುತ್ ದೀಪಗಳ ಅವ್ಯವಸ್ಥೆಯಿಂದ ಕತ್ತಲಲ್ಲಿ ಬರುವ ಪ್ರಯಾಣಿಕರು ನಾಯಿಗಳ ವಕ್ರದೃಷ್ಟಿಗೆ ಬೀಳುತ್ತಿದ್ದಾರೆ. ಜೊತೆಗೆ ಮುಂಜಾನೆ ಬೈಕ್‌ಗಳಲ್ಲಿ ಸಂಚರಿಸುವವರನ್ನು ಅಟ್ಟಿಸಿಕೊಂಡು ಹೋಗಲಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.
ರಾಬರ್ಟಸನ್‌ಪೇಟೆಯಲ್ಲಿ ಬಹಳಷ್ಟು ಕಡೆ ಮಾಂಸದಂಗಡಿಗಳು ತಲೆ ಎತ್ತಿವೆ. ಈ ಸ್ಥಳಗಳು ನಾಯಿಗಳಿಗೆ ಆಶ್ರಯ ತಾಣವಾಗಿವೆ. ಮಾಂಸದ ರುಚಿ ನೋಡುವ ನಾಯಿಗಳು ವ್ಯಗ್ರವಾಗಿರುತ್ತವೆ. ಶಾಲಾ ಮಕ್ಕಳು ಮತ್ತು ವೃದ್ಧರು ಅವುಗಳ ಹಿಂಡನ್ನು ನೋಡಿ ಭಯಬೀಳುವಂತಾಗಿದೆ. ಬೀದಿ ನಾಯಿಗಳಿಂದ ಕಡಿಸಿಕೊಂಡು ಚಿಕಿತ್ಸೆ ಪಡೆದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ರಾಬರ್ಟಸನ್‌ಪೇಟೆ ನಗರ ವ್ಯಾಪ್ತಿಯಲ್ಲಿ ಸುಮಾರು 3000ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಅವುಗಳನ್ನು ಹಿಡಿಯುವುದು ಬಹಳ ಕಷ್ಟ. ಅದನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಹೋದರೆ ಅವುಗಳು ಕೈಗೆ ಸಿಗುವುದಿಲ್ಲ. ಒಂದು ನಾಯಿಯನ್ನು ಹಿಡಿದರೆ, ಉಳಿದ ನಾಯಿಗಳು ಎಚ್ಚರಗೊಂಡು ದೂರದ ಪ್ರದೇಶಕ್ಕೆ ಓಡಿಹೋಗುತ್ತವೆ. ನಾಯಿ ಹಿಡಿಯುವವರನ್ನು ತಮ್ಮ ವಾಸನೆಯಲ್ಲಿ ಕಂಡು ಹಿಡಿದು ಪರಾರಿಯಾಗುತ್ತವೆ ಎಂದು ಪಶು ವೈದ್ಯ ಇಲಾಖೆಯ ಹಿರಿಯ ಉಪ ನಿರ್ದೇಶಕ ತ್ರಿಮೂರ್ತಿ ನಾಯಕ್ ಮಾಹಿತಿ ನೀಡಿದರು.
ಬೀದಿ ನಾಯಿಗಳ ಉಪಟಳ ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗುತ್ತಿದೆ.ತ್ರಿಮೂರ್ತಿ ನಾಯಕ್ ಪಶು ವೈದ್ಯ ಇಲಾಖೆಯ ಹಿರಿಯ ಉಪ ನಿರ್ದೇಶಕ
ನಾಯಿಗಳನ್ನು ಹಿಡಿದು ರೇಬಿಸ್ ಚುಚ್ಚುಮದ್ದು ನೀಡುವ ಕೆಲಸವಾಗುತ್ತಿದೆ. ನಾಯಿಗಳ ಹಾವಳಿ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ.ಆಂಜನೇಯಲು ನಗರಸಭೆ ಆಯುಕ್ತ
ರೇಬಿಸ್ ಪ್ರಕರಣ ಪತ್ತೆಯಾಗಿಲ್ಲ:
ಪ್ರತಿ ತಿಂಗಳು ಬೀದಿ ನಾಯಿಗಳ ಕಡಿತದಿಂದ ಸುಮಾರು ಐನೂರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ರೇಬಿಸ್ ಪ್ರತಿರೋಧಕ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಆದರೆ ರೇಬಿಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಕುಮಾರ್ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.