
ಕೆಜಿಎಫ್: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸರ್ಕಾರ ಸಾಕಷ್ಟು ಕಾಯಿದೆಗಳನ್ನು ಜಾರಿಗೆ ತಂದಿವೆ. ಅವುಗಳ ಸಮರ್ಪಕ ಅನುಷ್ಠಾನವಾಗಬೇಕಾದರೆ ಈ ಕಾಯಿದೆಗಳನ್ನು ಮಹಿಳೆಯರು ಸಂಪೂರ್ಣವಾಗಿ ಅರಿತುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.
ನಗರದ ವಿವೇಕ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಮಹಿಳೆಯರಿಗೆ ಕಾನೂನು ಅರಿವು ಶಿಬಿರದಲ್ಲಿ ಮಾತನಾಡಿ, ಪೊಲೀಸರು ಸದಾ ಸಾರ್ವಜನಿಕರ ಸೇವೆಯಲ್ಲಿ ಇರುತ್ತಾರೆ. ಅದಕ್ಕೆ ಪೂರಕವಾಗಿ ಮಹಿಳೆಯರು ತಮ್ಮ ಸುತ್ತ ಮುತ್ತ ನಡೆಯುವ ವಿದ್ಯಾಮಾನಗಳ ಬಗ್ಗೆ ಜಾಗೃತಿ ವಹಿಸಬೇಕು. ಅನುಮಾನಾಸ್ಪದ ವಿಷಯಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಈಗ ಮನೆ ಬಾಗಿಲಿಗೆ ಅಕ್ಕ ಸೇವೆ ಕೂಡ ಬಂದಿದೆ. ಅದರ ಉಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಪೋಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳು ಅತಿಯಾಗಿ ತೊಡಗದಂತೆ ಎಚ್ಚರ ವಹಿಸಬೇಕು. ಮಕ್ಕಳ ಜೊತೆ ಉತ್ತಮ ಸಂವಹನ ಇಟ್ಟುಕೊಳ್ಳಬೇಕು. ಅವರನ್ನು ಸ್ನೇಹಿತರಂತೆ ನೋಡಬೇಕು. ಮಹಿಳೆಯರು ಕೂಡ ಸೈಬರ್ ಅಪರಾಧಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸೈಬರ್ ಅಪರಾಧದಿಂದ ಹಣ ಕಳೆದುಕೊಂಡರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಿ. ಅವರು ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಪ್ರಯತ್ನ ಮಾಡಬಹುದು ಎಂದು ಮಾಹಿತಿ ನೀಡಿದರು.
ಡಿವೈಎಸ್‌ಪಿ ಲಕ್ಷ್ಮಯ್ಯ ಮಾತನಾಡಿ, ಮಕ್ಕಳು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯಸನಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದರು.
ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಪೋಕ್ಸೊ, ಲಕ್ಷ್ಮಿನಾರಾಯಣ ಸೈಬರ್ ಅಪರಾಧ, ಸಬ್ ಇನ್‌ಸ್ಪೆಕ್ಟರ್ ಪರಿಮಳ ಅಕ್ಕ ಪಡೆಯ ಕಾರ್ಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ರವಿರೆಡ್ಡಿ, ವಕೀಲೆ ಕಲೈಸೆಲ್ವಿ, ಯೋಜನಾಧಿಕಾರಿ ಮಹದೇವನಾಯಕ್ ಮತ್ತು ಸಂಪನ್ಮೂಲ ವ್ಯಕ್ತಿ ಗೋವಿಂದ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.