
ಕೋಲಾರ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೋಲಾರದ ನಸೀರ್ ಅಹ್ಮದ್ ಕಲಾಪದ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತು ಬಳಸಿದ ಪದಗಳು ಹಾಗೂ ನಿಂದನೆಗೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಧಾನಿ ಮೋದಿ ಅವರನ್ನು ‘ದೇಶದ್ರೋಹಿ’ ಎಂದು ಹೇಳಿರುವ ನಸೀರ್ ಅಹ್ಮದ್ ಹೇಳಿಕೆಯನ್ನು ನಾನು ತೀವ್ರವಾಗಿ ಹಾಗೂ ಸ್ಪಷ್ಟವಾಗಿ ಖಂಡಿಸುತ್ತೇನೆ. ಇಂತಹ ಹೇಳಿಕೆಗಳು ಕೇವಲ ಅಸಂಬದ್ಧವಲ್ಲ, ರಾಷ್ಟ್ರದ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದ್ದಾರೆ.
ನಸೀರ್ ಅವರ ಇತ್ತೀಚಿನ ನಡವಳಿಕೆಗಳು ಮತ್ತು ಹೇಳಿಕೆಗಳು ದೇಶದ ಏಕತೆ, ಸಮಗ್ರತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇದೇ ಕಾರಣದಿಂದಾಗಿ ಅವರು ಜನರಿಂದ ಸಾರಾಸಗಟಾಗಿ ತಿರಸ್ಕೃತರಾಗಿದ್ದು, ಚುನಾವಣೆಯಲ್ಲಿಯೂ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಈವರೆಗಿನ ಯಾವುದೇ ನೇರ ಚುನಾವಣೆಯಲ್ಲಿ ಜನರ ವಿಶ್ವಾಸ ಪಡೆದು ಗೆಲ್ಲಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿರುವ, ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಪ್ರಧಾನಿ ವಿರುದ್ಧ ಈ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ನಸೀರ್ ಅವರ ರಾಜಕೀಯ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ. ಜವಾಬ್ದಾರಿಯುತ ರಾಜಕೀಯ ನಾಯಕನಿಂದ ಇಂತಹ ಅಹಿತಕರ ಹಾಗೂ ರಾಷ್ಟ್ರವಿರೋಧಿ ಹೇಳಿಕೆಗಳನ್ನು ನಿರೀಕ್ಷಿಸಲಾರೆವು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇಂತಹ ರಾಷ್ಟ್ರವಿರೋಧಿ ಹಾಗೂ ಜನವಿರೋಧಿ ರಾಜಕೀಯ ಧೋರಣೆಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ಬಿಜೆಪಿ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಜನಜಾಗೃತಿ ಮತ್ತು ಸಂಘಟಿತ ಹೋರಾಟ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಪ್ರಧಾನಿ ಮೋದಿ ಕಳೆದ 11 ವರ್ಷಗಳಿಂದ ಯಾವುದೇ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸುತ್ತಿದ್ದಾರೆ. ಅಂಥವರಿಗೆ ನಸೀರ್ ಅಹ್ಮದ್ ‘ದೇಶದ್ರೋಹಿ’ ಎಂಬ ಪದ ಬಳಸಿದ್ದಾರೆ. ನಸೀರ್ ಅವರೇ ದೇಶದ್ರೋಹಿ’ ಎಂದು ತಿರುಗೇಟು ನೀಡಿದ್ದಾರೆ.
‘ನಸೀರ್ ಗುಜರಿ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದವರು. ರೈಲ್ವೆ ಆಸ್ತಿಯಲ್ಲಿ ಗಾರ್ಮೆಂಟ್ಸ್ ಕಟ್ಟಿಕೊಂಡಿದ್ದಾರೆ. ವಕ್ಫ್ ಬೋರ್ಡ್ ಹೆಸರಲ್ಲಿ ಮುಸ್ಲಿಮರಿಗೆ ಮೋಸ ಮಾಡಿ ಆಸ್ತಿ ಕಬಳಿಸಿದ್ದಾರೆ. ಅವರು ಮೋದಿ ಅವರ ಕಾಲಿನ ದೂಳಿಗೂ ಸಮ ಅಲ್ಲ. ಅವರನ್ನು ಕೂಡಲೇ ವಿಧಾನ ಪರಿಷತ್ತಿನಿಂದ ಅಮಾನತು ಮಾಡಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಮತ್ತೆ ಮೋದಿ ಕುರಿತು ಏನಾದರೂ ಮಾತನಾಡಿದರೆ ಯಾವ ರೀತಿ ಉತ್ತರ ಕೊಡಬೇಕೆಂಬುದು ನಮಗೆ ಗೊತ್ತಿದೆ. ಮನೆ ಬಿಟ್ಟು ಈಚೆ ಓಡಾಡಲು ಅವರು ನೂರು ಸಲ ಯೋಚಿಸಬೇಕಾಗುತ್ತದೆ. ದೇಶದಲ್ಲಿದ್ದು, ದೇಶದ ನೆಲ, ಜಲ ಅನುಭವಿಸಿ ಪಾಕಿಸ್ತಾನದ ಏಜೆಂಟ್‌ರಂತೆ ವರ್ತನೆ ಮಾಡುತ್ತಿದ್ದಾರೆ. ಅವರು ಒಂದು ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯರಾಗಿರುವುದಲ್ಲ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಆಗಿರಲು ಅವರು ನಾಲಾಯಕ್ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊ ಮೂಲಕ ಟೀಕಿಸಿದ್ದಾರೆ.
ಈ ಸಂಬಂಧ ಕಲಾಪದಲ್ಲೂ ಮಾತಿನ ಚಕಮಕಿ ನಡೆದಿದ್ದು, ಈಗಾಗಲೇ ನಸೀರ್ ಅಹ್ಮದ್ ಅವರು, ‘ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ತಿಳಿಸಿದ್ದಾರೆ.
ದೇಶದ ಹಿತಾಸಕ್ತಿಗಿಂತ ಮೇಲು ಯಾವುದೂ ಇಲ್ಲ. ರಾಷ್ಟ್ರವಿರೋಧಿ ಮನೋಭಾವ ಹೊಂದಿರುವವರಿಗೆ ಭಾರತೀಯ ಜನತೆ ಎಂದಿಗೂ ಬೆಂಬಲ ನೀಡಿಲ್ಲ ಮುಂದೆಯೂ ನೀಡುವುದಿಲ್ಲಓಂಶಕ್ತಿ ಚಲಪತಿ ಜಿಲ್ಲಾ ಬಿಜೆಪಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.