ADVERTISEMENT

ಪುಸ್ತಕ ಓದಿನಿಂದ ಜ್ಞಾನಾರ್ಜನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:27 IST
Last Updated 5 ಡಿಸೆಂಬರ್ 2020, 15:27 IST

ಕೋಲಾರ: ‘ಜೀವನದಲ್ಲಿ ಪ್ರತಿಯೊಬ್ಬರೂ ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ’ ಎಂದು ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಅಭಿಪ್ರಾಯಪಟ್ಟರು.

ನರಸಾಪುರ ಗ್ರಾ.ಪಂನಲ್ಲಿ ಇತ್ತೀಚೆಗೆ ನಡೆದ ‘ಓದುವ ಬೆಳಕು ಗ್ರಂಥಾಲಯ’ ಅಭಿಯಾನ ಮತ್ತು ಸದಸ್ಯತ್ವ ಆಂದೋಲನದಲ್ಲಿ ಮಾತನಾಡಿ, ‘ಕಾಲ, ದೇಶಗಳ ಮಿತಿಯಿಲ್ಲದೆ ಹಲವು ಅನುಭವಗಳ ಸಾರ ಪುಸ್ತಕಗಳಿಂದ ಸಿಗುತ್ತದೆ’ ಎಂದು ಹೇಳಿದರು.

‘ಪುಸ್ತಕ ಓದಿನಿಂದ ಜ್ಞಾನಾರ್ಜನೆಯಾಗಿ ಉನ್ನತ ಸ್ಥಾನಕ್ಕೆ ಏರಬಹುದು. ಪುಸ್ತಕಗಳು ಜ್ಞಾನ ಅಳಿಯದಂತೆ ರಕ್ಷಿಸಿ ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುತ್ತವೆ. ಪುಸ್ತಕ ಓದುವ ಕಾರ್ಯ ನಿರಂತರವಾಗಬೇಕು. ಇದಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಪೋಷಕರು ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕ ಓದುವ ಹವ್ಯಾಸ ನಶಿಸಿ ಹೋಗುತ್ತಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಓದಿನತ್ತ ಗಮನ ಹರಿಸಬೇಕು. ಪುಸ್ತಕದ ಜ್ಞಾನದಿಂದ ಜೀವನದ ಕಲಿಕೆ ಸಾಧ್ಯ. ಪುಸ್ತಕಗಳ ಓದಿನಿಂದ ಬೌದ್ಧಿಕ ಪ್ರಜ್ಞೆ ಬೆಳೆಯುತ್ತದೆ. ಪುಸ್ತಕ ಪ್ರೇಮಿಯಾದವರು ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ’ ಎಂದರು.

ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಗ್ರಂಥಾಲಯದ ಸದಸ್ಯತ್ವ ನೀಡಲಾಯಿತು. ಗ್ರಂಥಾಲಯ ಮೇಲ್ವಿಚಾರಕ ಎಂ.ಜಿ.ಮುನಿನರಸಿಂಹ, ಲೆಕ್ಕ ಸಹಾಯಕ ಮಂಜುನಾಥ್‌, ಸಹ ಶಿಕ್ಷಕ ಎನ್‌.ಮಂಜುನಾಥ್‌, ಕರ ವಸೂಲಿಗಾರ ಎನ್‌.ಡಿ.ನಾಗರಾಜ್‌, ಗ್ರಾ.ಪಂ ಮಾಜಿ ಸದಸ್ಯ ಟಿ.ಮಂಜುನಾಥ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.