ADVERTISEMENT

ಕೋಚಿಮುಲ್‌ ನೇಮಕಾತಿ | ಪ್ರತಿ ಹುದ್ದೆ ₹30 ಲಕ್ಷಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 23:30 IST
Last Updated 11 ಜನವರಿ 2024, 23:30 IST
ಕೋಚಿಮುಲ್ ಆಡಳಿತ ಮಂಡಳಿ ಕಚೇರಿ 
ಕೋಚಿಮುಲ್ ಆಡಳಿತ ಮಂಡಳಿ ಕಚೇರಿ    

ಕೋಲಾರ: ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷರಾಗಿರುವ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟದಲ್ಲಿ (ಕೋಚಿಮುಲ್‌) ಈಚೆಗೆ ನಡೆದ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರವನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

40 ತಾಸುಗಳ ದಾಖಲೆ ಪರಿಶೀಲನೆ ಕೊನೆಗೊಂಡ ನಂತರ ಜಾರಿ ನಿರ್ದೇಶನಾಲಯವು ಗುರುವಾರ ಈ ಸಂಬಂಧ ಪ್ರಕಟಣೆ ಹೊರಡಿಸಿದೆ. ‘ಪ್ರತಿ ಹುದ್ದೆ ₹20 ಲಕ್ಷದಿಂದ ₹30 ಲಕ್ಷಕ್ಕೆ ಮಾರಾಟವಾಗಿರುವ ಕುರಿತು ಕೋಚಿಮುಲ್‌ ನಿರ್ದೇಶಕರು ಮತ್ತು ನೇಮಕಾತಿ ಸಮಿತಿಯ ಸದಸ್ಯರು ಶೋಧ ಹಾಗೂ ಜಪ್ತಿ ಪ್ರಕ್ರಿಯೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿಯಲ್ಲಿರುವ ನಂಜೇಗೌಡ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ 14 ಕಡೆ ಈಚೆಗೆ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ADVERTISEMENT

ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿರುವ ಕೋಚಿಮುಲ್‌ ಮುಖ್ಯ ಕಚೇರಿ ಮೇಲೂ ದಾಳಿ ನಡೆಸಿದ್ದರು. ಅಧಿಕಾರಿಗಳು ಹಾಗೂ ಕೆಲ ನಿರ್ದೇಶಕರನ್ನು ಕಚೇರಿಗೆ ಕರೆಸಿಕೊಂಡು ತನಿಖೆ ನಡೆಸಿದ್ದರು. ಕಂಪ್ಯೂಟರ್‌ ಸೇರಿದಂತೆ ವಿವಿಧ ದಾಖಲೆ ವಶಕ್ಕೆ ಪಡೆದಿದ್ದರು.

ಪ್ರಕ್ರಿಯೆ ತಿರುಚಲಾಗಿದೆ:

‘ಅಭ್ಯರ್ಥಿಗಳ ನೇಮಕಾತಿ ಸಮಿತಿಯು ಇಡೀ ಸಂದರ್ಶನ ಪ್ರಕ್ರಿಯೆಯನ್ನೇ ತಿರುಚಿದೆ. ಅಂತಿಮ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮುನ್ನವೇ ಮಂಡಳಿ ತೀರ್ಮಾನದಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ತರಬೇತಿಗೆ ಕಳುಹಿಸಲಾಗಿದೆ. ಕೆಲ ರಾಜಕಾರಣಿಗಳು ಅಭ್ಯರ್ಥಿಗಳ ಆಯ್ಕೆಗೆ ಶಿಫಾರಸು ಮಾಡಿದ್ದಾರೆ. ಅವರು ಶೀಫಾರಸು ಮಾಡಿದ 30 ಅಭ್ಯರ್ಥಿಗಳಿಗೆ ಹುದ್ದೆ ಲಭಿಸಿದೆ. ಹುದ್ದೆಗಳ ಮಾರಾಟದಲ್ಲಿ ಕೋಚಿಮುಲ್‌ ಅಧ್ಯಕ್ಷ ‌ನಂಜೇಗೌಡ ನೇರವಾಗಿ ಭಾಗಿ ಆಗಿದ್ದು, ಸಂದರ್ಶನದ ಅಂಕ ಬದಲಾವಣೆಯಲ್ಲಿ ಕೈಚಳಕ ಪ್ರದರ್ಶಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಶೋಧಕ್ಕೆ ಮೂಲ ಕಾರಣ:

‘ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು ₹150 ಕೋಟಿ ಮೌಲ್ಯದ 80 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002 (ಪಿಎಂಎಲ್‌ಎ) ಪ್ರಕಾರ ನಂಜೇಗೌಡ ಹಾಗೂ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಗಳಲ್ಲಿ ಶೋಧ ನಡೆಸಿ ಜಪ್ತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ’ ಎಂದು ಇ.ಡಿ ತಿಳಿಸಿದೆ.

‘ಸಮಿತಿ ಅಧ್ಯಕ್ಷರಾಗಿದ್ದ ನಂಜೇಗೌಡ, ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳು ಕೇವಲ ಒಂದು ತಿಂಗಳಲ್ಲಿ ನಾಲ್ಕು ಸಭೆ ನಡೆಸಿ ₹150 ಕೋಟಿ ಮೌಲ್ಯದ 80 ಎಕರೆ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅದನ್ನು ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಿ ಅಧಿಕಾರ ದುರುಪಯೋಗಿಸಿಕೊಂಡಿದ್ದಾರೆ. ಪ್ರಾದೇಶಿಕ ಆಯುಕ್ತರ ಪರಿಶೀಲನಾ ವರದಿ ಆಧಾರದ ಮೇಲೆ ಆ ಮಂಜೂರಾತಿ ರದ್ದಾಗಿದೆ. ಮಾರ್ಗಸೂಚಿಯನ್ನು ಉಲ್ಲಂಘಿಸಿ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಜಮೀನನ್ನು ಮಂಜೂರಾತಿ ಮಾಡಿರುವುದು ಶೋಧದ ವೇಳೆ ಪತ್ತೆಯಾಗಿದೆ. ಎಲ್ಲಾ ವಿಚಾರಗಳಲ್ಲಿ ತನಿಖೆ ಮುಂದುವರಿದಿದೆ’ ಎಂದೂ ಪ್ರಕಟಣೆ ತಿಳಿಸಿದೆ.

₹50 ಕೋಟಿ ಮೌಲ್ಯದ ಆಸ್ತಿ ದಾಖಲೆ ವಶ

‘ನಂಜೇಗೌಡ ಅವರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ₹25 ಲಕ್ಷ ನಗದು ₹50 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಗೆ ಸಂಬಂಧಿಸಿದವಿವಿಧ ದಾಖಲೆ ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.  

ಎಫ್‌ಐಆರ್‌ ಆಧಾರದಲ್ಲಿ ತನಿಖೆ

‘ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ಮಾಲೂರು ಠಾಣೆಯಲ್ಲಿ ಶಾಸಕ ನಂಜೇಗೌಡ ಹಾಗೂ ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ನಂಜೇಗೌಡ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದರೆ ಅಂದಿನ ಮಾಲೂರು ತಹಶೀಲ್ದಾರ್ ವಿ.ನಾಗರಾಜ್‌ ಹಾಗೂ ಇತರ ಆರೋಪಿಗಳು ಸದಸ್ಯರಾಗಿದ್ದರು’ ಎಂದು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ.

ಘೋಷಣೆಗೆ ಮುನ್ನವೇ ಜಾಲತಾಣದಲ್ಲಿ ಪಟ್ಟಿ

ಕೋಚಿಮುಲ್‌ನ 75 ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಘೋಷಣೆಗೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಹರಿದಾಡಿತ್ತು. ಅಭ್ಯರ್ಥಿಗಳ ಹೆಸರಿನ ಮುಂದೆ ಶಿಫಾರಸು ಮಾಡಿದವರು ಹೆಸರೂ ಇತ್ತು. ಮಾಹಿತಿ ಹೊರಹಾಕಿದ್ದ ನಾಗೇಶ್ ಎಂಬ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಜಾಲತಾಣದಲ್ಲಿ ಹರಿದಾಡಿದ್ದ ಪಟ್ಟಿಯಲ್ಲಿದ್ದ ಹಲವರು ಹೆಸರು ಕೋಚಿಮುಲ್‌ ಅಧ್ಯಕ್ಷ ನಂಜೇಗೌಡರು ಓದಿ ಹೇಳಿದ ಅಂತಿಮ ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು.

ಕೆ.ವೈ.ನಂಜೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.