ಕೋಲಾರ: ಕೋಲಾರ ಜಿಲ್ಲಾ ಹಾಲು ಒಕ್ಕೂಟ (ಕೋಮುಲ್) ವ್ಯಾಪ್ತಿಯಲ್ಲಿ 30 ನಂದಿನಿ ಮಳಿಗೆಗಳು (ಪಾರ್ಲರ್) ಸೇರಿದಂತೆ ಕೆಎಂಎಫ್‌ನಿಂದ ಒಟ್ಟು 500 ಮಳಿಗೆಗಳಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯಿಂದ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದರು.
ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ತಾಲ್ಲೂಕಿನ ರಾಮಸಂದ್ರ ಗಡಿಭಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಲ್ಲಿಯೂ ಒಂದು ಮಳಿಗೆಯನ್ನು ಉದ್ಘಾಟನೆ ಮಾಡಲಾಯಿತು. ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಪರದೆ ಅಳವಡಿಸಿ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ವರ್ಚುವಲ್ ವೇದಿಕೆ ಮೂಲಕ ಮಾತನಾಡಿದ ಸಿದ್ದರಾಮಯ್ಯ, ‘ಹಾಲು ಉತ್ಪಾದನೆ ಮಾಡುವುದು ಎಷ್ಟು ಮುಖ್ಯವೋ ಮಾರಾಟ ವಿಸ್ತರಣೆ ಮಾಡುವುದೂ ಅಷ್ಟೇ ಮುಖ್ಯ’ ಎಂದರು.
‘ರಾಜ್ಯದಲ್ಲಿ 17 ಒಕ್ಕೂಟಗಳಿದ್ದು, ನಿತ್ಯ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಾನು ಹಿಂದೆ ಪಶು ಸಂಗೋಪನೆ ಸಚಿವನಾಗಿದ್ದೆ. ಆಗ ಹಲವಾರು ಸುಧಾರಣೆ ತಂದಿದ್ದೆ, ಡೇರಿಗಳನ್ನು ಒಕ್ಕೂಟಕ್ಕೆ ವರ್ಗಾವಣೆ ಮಾಡಿದ್ದೆ. ಮುಖ್ಯಮಂತ್ರಿ ಆದ ಮೇಲೆ ಲೀಟರ್ ಹಾಲಿಗೆ ರೈತರಿಗೆ ₹ 5 ಪ್ರೋತ್ಸಾಹಧನ ಕೊಡಲು ಆರಂಭಿಸಿದೆ. ಪ್ರತಿ ತಿಂಗಳಿಗೆ ₹ 150 ಕೋಟಿ ನೀಡಲಾಗುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದಡಿ ಹಾಲು ಕೊಡಲಾಗುತ್ತಿದೆ’ ಎಂದು ಹೇಳಿದರು.
‘ಒಕ್ಕೂಟಗಳು ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.
ಇದಕ್ಕೂ ಮೊದಲು ನಂಜೇಗೌಡ ಮಾತನಾಡಿ, ಕೋಮುಲ್ ಒಕ್ಕೂಟದಿಂದ ಕೈಗೊಳ್ಳಲಾಗಿರುವ ಕೆಲಸ ಕಾರ್ಯಗಳು, ರಾಜ್ಯದಲ್ಲಿ ಕೆಎಂಎಫ್‌ನಿಂದ ನಡೆದಿರುವ ಕೆಲಸ ಕಾರ್ಯಗಳು ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗೆ ವಿವರಿಸಿದರು.
ಸರ್ಕಾರಿ ಕಚೇರಿಗಳಲ್ಲೂ ನಂದಿನಿ ಪಾರ್ಲರ್ ಸ್ಥಾಪಿಸಬೇಕು. ಉತ್ಪನ್ನಗಳ ಮಾರಾಟ ವ್ಯಾಪ್ತಿ ವಿಸ್ತರಿಸಬೇಕು. ಎಲ್ಲಾ ಕಡೆ ಕೆಎಂಎಫ್ ಉತ್ಪನ್ನ ಸಿಗುವಂತಾಗಬೇಕು. ಆಗ ಅಮುಲ್‌ಗೆ ಕೆಎಂಎಫ್ ಸವಾಲು ಕೊಡಬಹುದು. ಇದಕ್ಕೆ ನಮ್ಮ ಆಡಳಿತ ಮಂಡಳಿ ಸಹಕಾರವಿದೆ ಎಂದರು.
‘ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುತ್ತಿದೆ, ಕಾಮನ್ ಸಾಫ್ಟ್‌ವೇರ್ ಜಾರಿಗೆ ತರಲಾಗುತ್ತಿದೆ. ಇದರಿಂದ ಹಾಲಿನ ಗುಣಮಟ್ಟ ಹೆಚ್ವಳವಾಗುತ್ತಿದೆ. ಜೊತೆಗೆ ನಂದಿನಿ ಮಳಿಗೆಗಳನ್ನು ಮತ್ತಷ್ಟು ಹೆಚ್ಚಿಸಲು ಸಮೀಕ್ಷೆ ಮಾಡಲು ಸೂಚಿಸಿದ್ದೇನೆ’ ಎಂದು ಹೇಳಿದರು.
ಕೋಮುಲ್ ನಿರ್ದೇಶಕರಾದ ಚಲುವನಹಳ್ಳಿ ನಾಗರಾಜಪ್ಪ, ಎಂ.ಎನ್.ಶ್ರೀನಿವಾಸ್, ಮಹಾಲಕ್ಷ್ಮಿ ಪ್ರಸಾದ್‌ಬಾಬು, ಎನ್.ಹನುಮೇಶ್, ಶಂಶೀರ್, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಆಡಳಿತ ವ್ಯವಸ್ಥಾಪಕ ನಾಗೇಶ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಕಲಬುರಗಿಯಿಂದ ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಿದ ಸಿದ್ದರಾಮಯ್ಯ ರಾಮಸಂದ್ರ ಗಡಿಭಾಗದಲ್ಲಿ ಮಳಿಗೆಗೆ ನಂಜೇಗೌಡ ಚಾಲನೆ ಕೆಎಂಎಫ್ ನಂಬರ್ 1 ಆಗಬೇಕು: ಸಿ.ಎಂ ನಿರ್ದೇಶನ
ಕೆಎಂಎಫ್ ಸದ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತಿನ ಅಮುಲ್ ಮೊದಲ ಸ್ಥಾನದಲ್ಲಿದೆ. ನಾವು ಮೊದಲ ಸ್ಥಾನಕ್ಕೆ ಬರಬೇಕು. ಅದಕ್ಕೆ ಮಾರುಕಟ್ಟೆಯನ್ನು ಹೆಚ್ಚು ವಿಸ್ತರಿಸಬೇಕುಸಿದ್ದರಾಮಯ್ಯ ಮುಖ್ಯಮಂತ್ರಿ
ಸರ್ಕಾರಿ ಕಚೇರಿಗಳಲ್ಲೂ ನಂದಿನಿ ಪಾರ್ಲರ್ ಸ್ಥಾಪಿಸಬೇಕು. ಎಲ್ಲಾ ಕಡೆ ಕೆಎಂಎಫ್ ಉತ್ಪನ್ನ ಸಿಗುವಂತಾಗಬೇಕು. ಆಗ ಅಮುಲ್‌ಗೆ ಕೆಎಂಎಫ್ ಸವಾಲು ಕೊಡಬಹುದುಕೆ.ವೈ.ನಂಜೇಗೌಡ ಕೋಮುಲ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.