
ಕೋಲಾರ: ಬಹಳ ದಿನಗಳ ಬೇಡಿಕೆ ಆಗಿರುವ ಜಿಲ್ಲಾ ಕೇಂದ್ರ ಕೋಲಾರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ಯೋಜನೆ ಜಾರಿಗೆ ಸರ್ವ ರೀತಿಯಲ್ಲೂ ಪ್ರಯತ್ನ ಹಾಕುವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಮಾಲೂರು ತಾಲ್ಲೂಕಿನ ಟೇಕಲ್ ಲೆವೆಲ್ ಕ್ರಾಸಿಂಗ್‌ನಲ್ಲಿ ಭಾನುವಾರ ರೈಲ್ವೆ ಇಲಾಖೆ ಹಮ್ಮಿಕೊಂಡಿದ್ದ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂಬಂಧ ಸದ್ಯದಲ್ಲೇ ಬೆಂಗಳೂರಿನಲ್ಲಿ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ವಹಿಸುವೆ ಎಂದರು.
ಬಹಳ ಹಿಂದೆ ಸರ್ವೆ ಆಗಿರುವುದು ತಿಳಿದಿದೆ. ಈ ಭಾಗದಲ್ಲಿ ರೈಲು ಹಳಿ ಅಳವಡಿಕೆ ಅಗತ್ಯವಾಗಿದ್ದು, ಜಾಗ ಹಾಗೂ ಇನ್ನಿತರ ವಿಚಾರಗಳ ಸಂಬಂಧ ಸದ್ಯದ ಪರಿಸ್ಥಿತಿಯ ವರದಿ ತರಿಸಿಕೊಳ್ಳುವೆ ಎಂದು ಅವರು ಸ್ಥಳದಲ್ಲೇ ಬೆಂಗಳೂರು ವಿಭಾಗದ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಅಶುತೋಷ್ ಕುಮಾರ್ ಸಿಂಗ್ ಅವರಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಸುಮಾರು ₹ 2 ಸಾವಿರ ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆಯಿಂದ ಕಾಮಗಾರಿಗಳು ನಡೆಯುತ್ತಿವೆ. ರೈಲ್ವೆ ಕಾಮಗಾರಿಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮಪಾಲು ಇದೆ. ಆದರೆ, ರಾಜ್ಯ ಸರ್ಕಾರದಿಂದ ಕೇಂದ್ರದ ಯೋಜನೆಗಳಿಗೆ ಪಾಲು ಪಡೆಯುವುದು ಕಷ್ಟದ ಕೆಲಸ. ಈಗ ಮಾತ್ರವಲ್ಲ; ಯಾವುದೇ ಸರ್ಕಾರ ಇದ್ದರೂ ಕಷ್ಟ. ಹೀಗಾಗಿ, ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸೇತುವೆಗಳ ನಿರ್ಮಾಣ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ವೆಚ್ಚದಿಂದಲೇ ಕೈಗೊಳ್ಳಲಾಗುವುದು. ಆದರೆ, ಸಂಪರ್ಕ ಮಾರ್ಗಕ್ಕೆ ಜಮೀನು ಬೇಕಾಗುತ್ತದೆ ಎಂದರು.
ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಸುಮಾರು ₹ 22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಹೊಸ ಎರಡನೇ ಪ್ರವೇಶ ದ್ವಾರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ವರ್ಷ ಉದ್ಘಾಟನೆ ಮಾಡಲಾಗುವುದು. ಮಾಲೂರು ರೈಲು ನಿಲ್ದಾಣವನ್ನು ₹ 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಾರಿಕುಪ್ಪಂ–ಕುಪ್ಪಂ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ. ಬಂಗಾರಪೇಟೆಯಲ್ಲಿ ವಂದೇ ಭಾರತ್ ರೈಲುಗಳ ನಿಲುಗಡೆ ನೀಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ಹಿಂದೆ ಲೋಕಸಭಾ ಸದಸ್ಯರಾಗಿದ್ದ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಳಷ್ಟು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ದೇವನಹಳ್ಳಿ-ಬಂಗಾರಪೇಟೆ-ಕೋಲಾರ ಮಾರ್ಗವನ್ನು ಡಬ್ಲಿಂಗ್ ಮಾಡಲಾಗುವುದು. ಮೆಮೊ ರೈಲು ಓಡಿಸಲು ಪ್ರಯತ್ನಿಸಲಾಗುವುದು. ಈಗಾಗಲೇ ವಿದ್ಯುದೀಕರಣ ಸೇರಿದಂತೆ ರೈಲ್ವೆ ಆಧುನಿಕರಣ, ರೈಲ್ವೆ ರಕ್ಷಾ ಕವಚಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ಸಂಸದನಾದ ಮೇಲೆ ನಾನು ಮಾಡಿದ ಮೊದಲ ಕೆಲಸ ರೈಲ್ವೆಯದ್ದು. ಈ ಮೇಲ್ಸೇತುವೆಗೆ ಮಾಜಿ ಸಂಸದ ಮುನಿಸ್ವಾಮಿ ಭೂಮಿಪೂಜೆ ಮಾಡಿದ್ದರು. ₹ 23 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಿಸಲಾಗಿದೆ. ಈ ಲೆವೆಲ್ ಕ್ರಾಸಿಂಗ್‌ನಲ್ಲಿ ನಾನೇ ಅರ್ಧ ಗಂಟೆ ನಿಂತಿದ್ದೆ’ ಎಂದರು.
ಕೋಲಾರದಿಂದ ಬೆಂಗಳೂರು (ವೈಟ್ ಪೀಲ್ಡ್) ನೇರ ಮಾರ್ಗ ನಿರ್ಮಾಣ ಕ್ಕೆ 2012–13ರಲ್ಲಿಯೇ ಸರ್ವೆ ಆಗಿದೆ. ಆದರೆ, ಆ ಬಳಿಕ ಯಾವುದೇ ಪ್ರಗತಿ ಆಗಿಲ್ಲ. ಈ ವಿಚಾರವನ್ನು ಆದ್ಯತೆಯಾಗಿ ತೆಗೆದುಕೊಂಡು ಕೆಲಸ ಮಾಡಿಕೊಡಬೇಕು ಎಂದು ವಿನಂತಿಸಿದರು.
ಮಾಲೂರು ತಾಲ್ಲೂಕಿನ ಮರಳಹಳ್ಳಿಯಲ್ಲಿ ರೈಲು ನಿಲುಗಡೆ ಮಾಡಬೇಕು. ಕೋವಿಡ್ ಬಳಿಕ ನಿಂತು ಹೋಗಿದೆ. ಮಾಲೂರು ಹಾಗೂ ಹೊಸೂರು ಮಾರ್ಗದ ಮೇಲ್ಸೇತುವೆ ಕಿರಿದಾಗಿದ್ದು, ವಿಸ್ತರಿಸಬೇಕು ಎಂದು ಕೋರಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ‘ಸಚಿವ ಸೋಮಣ್ಣ ತಮ್ಮದೇ ಆದ ಇತಿಹಾಸ ಸೃಷ್ಟಿಸಿದ್ದಾರೆ. ಮನುಷ್ಯನ ಒಳ್ಳೆಯತನಕ್ಕೆ ಉತ್ತಮ ಅವಕಾಶ ಸಿಗುತ್ತದೆ. ಅವರು ಸ್ಪಂದಿಸುವ ರೀತಿಯನ್ನು ಇನ್ನುಳಿದ ಸಚಿವರಲ್ಲಿ ನಾನು ಕಂಡಿಲ್ಲ’ ಎಂದು ಹೇಳಿದರು.
ಟೇಕಲ್ ಮಾರ್ಗವು ಹೆಚ್ಚು ರೈಲುಗಳು ಓಡಾಡುವ ಮಾರ್ಗ. ಲೆವೆಲ್ ಕ್ರಾಸಿಂಗ್‌ನಲ್ಲಿ ಒಮ್ಮೆ ಗೇಟ್ ಹಾಕಿದ್ದರೆ 20 ನಿಮಿಷ ಕಾಯಬೇಕಿತ್ತು. ಈಗ ಸಮಸ್ಯೆಗೆ ಮುಕ್ತಿ ಸಿಕ್ಕಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಡಿಆರ್‌ಎಂ ಅಶುತೋಷ್ ಕುಮಾರ್ ಸಿಂಗ್, ಎಡಿಆರ್‌ಎಂ ಪರೀಕ್ಷಿತ್, ಮುಖ್ಯ ಎಂಜಿನಿಯರ್ ಪ್ರೇಮ್ ನಾರಾಯಣ, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿ.ಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿ ನಿಖಿಲ್ ಬಿ, ತಹಶೀಲ್ದಾರ್ ರೂಪಾ, ರೈಲ್ವೆ ಇಲಾಖೆ ಅಧಿಕಾರಿಗಳು, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸ್ಥಳೀಯ ಮುಖಂಡರು ಇದ್ದರು.
ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಬೇಡ. ಚುನಾವಣೆ ವೇಳೆ ರಾಜಕೀಯ ಮಾಡೋಣ. ಬದುಕಿದ್ದಾಗ ಏನಾದರೂ ಕೆಲಸ ಮಾಡಿ ಚುಕ್ಕೆ ಗುರುತು ಬಿಟ್ಟು ಹೋಗಬೇಕುವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ
ಇನ್‌ಸ್ಪೆಕ್ಷನ್ ರೈಲಿನಲ್ಲಿ ಸುತ್ತಾಟ
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೇಕಲ್ ಉರಿಗಾಂ ಕೋರಮಂಡಲ್ ಬಂಗಾರಪೇಟೆ ಹಾಗೂ ಕೋಲಾರ ರೈಲ್ವೆ ನಿಲ್ದಾಣಕ್ಕೆ ಇನ್‌ಸ್ಪೆಕ್ಷನ್ ರೈಲಿನಲ್ಲಿಯೇ ಸುತ್ತಾಡಿದರು. ಅವರ ಜೊತೆಗೆ ಸಂಸದ ಎಂ.ಮಲ್ಲೇಶ್ ಬಾಬು ಎಂಎಲ್‌ಸಿ ಇಂಚರ ಗೋವಿಂದರಾಜು ಹಾಗೂ ಅಧಿಕಾರಿಗಳು ಇದ್ದರು. ಈ ಸಂದರ್ಭದಲ್ಲಿ ಸಮಸ್ಯೆಗಳನ್ನು ಅವರ ಗಮನಕ್ಕೆ ಜನಪ್ರತಿನಿಧಿಗಳು ತಂದರು.
ಐದು ಕಡೆ ರೈಲ್ವೆ ಸೇತುವೆ
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರದಲ್ಲಿ ರೈಲ್ವೆ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಆಗಿದೆ. ಬಂಗಾರಪೇಟೆ ನವೀಕೃತ ನಿಲ್ದಾಣ ಉದ್ಘಾಟನೆಗೆ ತಾವು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಬರಬೇಕಾಗುತ್ತದೆ. ಆಗ ಕಾಮಸಮುದ್ರ ಸೇತುವೆಗೆ ಶಂಕುಸ್ಥಾಪನೆ ಮಾಡಬೇಕು. ದೇಶಹಳ್ಳಿ ಎಸ್.ಎನ್.ರೆಸಾರ್ಟ್ ಕೋಲಾರ ನಗರ ಬಳಿಯ ಸ್ಯಾನಿಟೋರಿಯಂ ಹಾಗೂ ಟೇಕಲ್ ರಸ್ತೆಯಲ್ಲಿ ಸೇತುವೆ ನಿರ್ಮಿಸಬೇಕಿದ್ದು ಬೇಗನೇ ಕೆಲಸ ಮಾಡಿಸಿಕೊಡಿ ಎಂದು ಎಂ.ಮಲ್ಲೇಶ್ ಬಾಬು ಮನವಿ ಮಾಡಿದರು. ನಿತ್ಯ ಬೆಳಿಗ್ಗೆ ಕೆಜಿಎಫ್ ಬಂಗಾರಪೇಟೆಯಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಸುಮಾರು 25 ಸಾವಿರ ಜನ ಪ್ರಯಾಣಿಸುತ್ತಾರೆ. ಬಹಳ ಸಮಸ್ಯೆ ಆಗಿದ್ದು ಹೆಚ್ಚುವರಿ ಬೋಗಿ ಅಳವಡಿಸಬೇಕು ಎಂದು ಕೋರಿದರು.
ಮುನಿಸ್ವಾಮಿ ಶ್ಲಾಘಿಸಿದ ನಂಜೇಗೌಡ
ರೈಲ್ವೆ ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ಮಾಜಿ ಸಂಸದ ಮುನಿಸ್ವಾಮಿ ಅವರ ಪಾತ್ರವೂ ದೊಡ್ಡದಿದೆ. ಅನೇಕ ಯೋಜನೆಗಳಿಗೆ ಬಹಳ ಪ್ರಯತ್ನ ಮಾಡಿದ್ದರು. ಅವರನ್ನು ನೆನಪಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಪಾತ್ರವೂ ಹೆಚ್ಚಿದೆ. ಟೇಕಲ್ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಹಿಂದೆ ಕೆ.ಎಚ್.ಮುನಿಯಪ್ಪ ಅವರ ಕಾಲದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಮರಳಹಳ್ಳಿಯಲ್ಲೂ ಸಮಸ್ಯೆ ಇದ್ದು ಸಚಿವ ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ನುಡಿದರು.
ಸಚಿವ ಸೋಮಣ್ಣ ಉದ್ಘಾಟಿಸಿದ ಕಾಮಗಾರಿ ವೀಕ್ಷಣೆ
* ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ (ಆರ್‌ಒಬಿ) ಉದ್ಘಾಟನೆ
* ಕೆಜಿಎಫ್‌ನ ಊರಿಗಾಂ ಮತ್ತು ಕೋರಮಂಡಲ್ ರೈಲು ನಿಲ್ದಾಣಗಳಲ್ಲಿ ಹೊಸದಾಗಿ ನಿರ್ಮಿಸಿರುವ ನಿಲ್ದಾಣ ಕಟ್ಟಡ ಲೋಕಾರ್ಪಣೆ
* ಬಂಗಾರಪೇಟೆ ರೈಲು ನಿಲ್ದಾಣ ಕೋಲಾರ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಣೆ
* ಬಂಗಾರಪೇಟೆ ರೈಲು ನಿಲ್ದಾಣದ ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮಕ್ಕೆ ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.