ಕೋಲಾರ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕಟ್ಟಡ, ಕೊಳವೆಬಾವಿಗಳಿಗೆ ವಿದ್ಯುತ್ ಮೀಟರ್ ಅಳವಡಿಕೆಗೆ ಸಬೂಬು ಹೇಳುತ್ತಿದ್ದ ಬೆಸ್ಕಾಂ ಎಂಜನಿಯರ್‌ಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಈಗಾಗಲೇ ಸ್ಥಗಿತಗೊಂಡಿರುವ ಆರ್‌ಆರ್ ಸಂಖ್ಯೆ ರದ್ದುಪಡಿಸಬೇಕು, ಸಕಾಲಕ್ಕೆ ಪಂಚಾಯಿತಿಗೆ ಬಿಲ್ ಕೊಟ್ಟು ಮೊತ್ತ ಪಡೆಯಬೇಕು ಎಂದು ಸೂಚಿಸಿದರು.
ಕುಸಮ್ ಯೋಜನೆಯಡಿ ಕೆಲವು ಕಡೆ ಜಾಗ ಕೇಳಲಾಗಿದೆ, ಸರ್ಕಾರಿ ಜಾಗ ಲಭ್ಯವಾಗದ ಕಡೆಗಳಲ್ಲಿ ಕೆರೆ ಅಂಗಳದಲ್ಲಿ ಜಾಗ ಗುರುತಿಸಿ ಕೊಡಬಹುದು ಎಂದು ಉಪವಿಭಾಗದ ಎಂಜಿನಿಯರಿಂಗ್ ಸಭೆಗೆ ಮಾಹಿತಿ ನೀಡಿದರು.
ಮಧ್ಯೆ ಪ್ರವೇಶಿಸಿದ ಕೆಲ ಪಿಡಿಒಗಳು, ಬೆಸ್ಕಾಂ ಸಿಬ್ಬಂದಿ ಸಮರ್ಪಕವಾಗಿ ಪಂಚಾಯಿತಿಗೆ ಬಿಲ್ ಸಲ್ಲಿಸುತ್ತಿಲ್ಲ. ಐದಾರು ತಿಂಗಳಿಗೆ ಒಮ್ಮೆ ಬಿಲ್ ಕಟ್ಟಿ ಎಂದು ಬರುತ್ತಾರೆ ಎಂದು ದೂರಿದರು.
ವಡಗೂರು ಪಿಡಿಒ ರಮೇಶ್ ಮಾತನಾಡಿ, ‘ವಡಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆದ್ದಾರಿ ಸಮೀಪದಲ್ಲೆ ಜಾಗವಿದೆ. ಅದು ಬೆಸ್ಕಾಂ ಉಪಘಟಕಕ್ಕೂ ಸಮೀಪವಿದೆ. ಕುಸುಮ್ ಯೋಜನೆಯಡಿ ಸೋಲಾರ ಘಟಕ ಸ್ಥಾಪನೆ ಮಾಡಿದರೆ ಉತ್ತಮ ಆದಾಯ ಬರುತ್ತದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಂಜಿನಿಯರ್, ಈಗಾಗಲೇ ಮೂರು ಹಂತದಲ್ಲಿ ಜಾಗಗಳನ್ನು ಕೇಳಲಾಗಿದೆ. ಏನಿದ್ದರೂ ಕೆಪಿಟಿಸಿಎಲ್ ಬೋರ್ಡ್ ಸಭೆಯಲ್ಲಿ ಇತ್ಯರ್ಥವಾಗಿ ಎಲ್ಲಿ ಜಾಗ ಬೇಕು ಎಂಬುದರ ಬಗ್ಗೆ ತೀರ್ಮಾನ ಆಗಬೇಕು. ಜಾಗ ಅಂತಿಮವಾದರೆ ಕಾರ್ಪೊರೇಟ್ ಹಂತದಲ್ಲಿ ಟೆಂಡರ್ ಆಗುತ್ತದೆ ಎಂದು ತಿಳಿಸಿದರು.
ಇದಕ್ಕೆ ಗರಂ ಆದ ಪ್ರವೀಣ್ ಪಿ.ಬಾಗೇವಾಡಿ, ‘ನೀವು ಇಲಾಖೆಯ ಅಧಿಕಾರಿ ಅಷ್ಟೇ; ಪ್ರತ್ಯೇಕ ಸಾಮ್ರಾಜ್ಯವಲ್ಲ. ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಕೆಲಸ ಮಾಡಿ. ಬಿಲ್ ಏನು ಪಿಡಿಒಗಳ ಸ್ವಂತದಲ್ಲ, ಬಿಲ್ ಸಿಕ್ಕಿತು ಎಂದರೆ ಬಾಕಿ ಬಿಲ್ ಪಾವತಿ ಮಾಡದೆ ಇಟ್ಟುಕೊಳ್ಳಲು ಸ್ವಂತ ಮನೆದಲ್ಲ. ಮಾಡುವ ಕೆಲಸದಲ್ಲಿ ಜವಾಬ್ದಾರಿ ಇರಬೇಕು ಎಂದರು.
ಜಿಲ್ಲೆಯಲ್ಲಿ ಅಧಿಕಾರಿಗಳ ವರ್ತನೆಯೇ ಸರಿಯಿಲ್ಲ, ಎಲ್ಲಾ ಇಲಾಖೆಯ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿದಾಗ ಪ್ರಗತಿ ಕಾಣಲು ಸಾಧ್ಯ ಎಂದು ತಾಕೀತು ಮಾಡಿದರು.
ಪಿಡಿಒಗಳು ಸಹ ಪ್ರತಿದಿನ ಕಚೇರಿಗೆ ಬಂದು ಚೆಕ್ ಸಹಿ ಮಾಡುವಾಗ ಯಾವುದರ ವೆಚ್ಚಕ್ಕೆ ಪರಿಶೀಲನೆ ಮಾಡಕ್ಕೆ ಅಗಲ್ಲವೇ, ನಾವು ಮೇಲಧಿಕಾರಿಗಳಿಗೆ ಉತ್ತರ ಕೊಡಬೇಕು, ದಪ್ಪ ಚರ್ಮದವರಾದರೆ ಬೈಸಿಕೊಂಡು ಕೂತುಕೊಳ್ಳುತ್ತಾರೆ. ಆದರೆ, ನಾವು ನಮ್ಮ ಸಾಧನೆ ತೋರಿಸಬೇಕು. ನಿರ್ಲಕ್ಷ್ಯ ಮುಂದುವರಿದರೆ ಶಿಸ್ತು ಕ್ರಮಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನರೇಗಾದಡಿಯಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಕೂಸಿನ ಮನೆಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಬಹುತೇಕ ಕಡೆ ಮಕ್ಕಳ ಸಂಖ್ಯೆ ಕಡಿಮೆಯಿದೆ. ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಣೆ ಆಗುತ್ತಿದೆಯೋ ಇಲ್ಲವೊ ಎಂಬುದರ ಬಗ್ಗೆ ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಕಾಲಕ್ಕೆ ಪಂಚಾಯಿತಿಗೆ ಬಿಲ್ ಕೊಟ್ಟು ಮೊತ್ತ ಪಡೆಯಿರಿ ನೀವು ಇಲಾಖೆಯ ಅಧಿಕಾರಿ ಅಷ್ಟೇ; ಪ್ರತ್ಯೇಕ ಸಾಮ್ರಾಜ್ಯವಲ್ಲ: ಸಿಇಒ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಕೆಲಸ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.