ADVERTISEMENT

ಕೋಲಾರ: ಎಲ್ಲೆಡೆ ಕ್ರಿಸ್‌ಮಸ್‌, ಮೇಳೈಸಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:14 IST
Last Updated 26 ಡಿಸೆಂಬರ್ 2025, 6:14 IST
ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಧರ್ಮಗುರುಗಳಿಂದ ಶುಭಾಶಯ ವಿನಿಮಯ
ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಧರ್ಮಗುರುಗಳಿಂದ ಶುಭಾಶಯ ವಿನಿಮಯ   

ಕೋಲಾರ: ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ ಮೇಳೈಸಿತು. ಚರ್ಚ್‌ಗಳು ಹಾಗೂ ಮನೆಗಳಲ್ಲಿ ಕ್ರೈಸ್ತ ಧರ್ಮೀಯರು ಹಬ್ಬದ ಸಡಗರ ಜೋರಾಗಿತ್ತು. ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಏಸು ಕ್ರಿಸ್ತನನ್ನು ಆರಾಧಿಸಿ ಸ್ಮರಿಸಿದರು.

ಬುಧವಾರ ರಾತ್ರಿ ಕ್ರಿಸ್‌ಮಸ್‌ ಕ್ಯಾರಲ್ಸ್‌ನಿಂದ ಆರಂಭವಾಗಿದ್ದ ಹಬ್ಬಕ್ಕೆ ಗುರುವಾರ ಇಡೀ ದಿನ ನಡೆದ ವಿವಿಧ ಕಾರ್ಯಕ್ರಮಗಳು ಮೆರುಗು ತುಂಬಿದವು.

ಬೆಳಿಗ್ಗೆ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆ, ಪೂಜೆಗಳಲ್ಲಿ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಧರ್ಮಗುರುಗಳು ಕ್ರಿಸ್‌ಮಸ್‌ ಸಂದೇಶ ನೀಡಿದರು.

ADVERTISEMENT

ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಂತಾಗಲಿ, ಪ್ರತಿಯೊಬ್ಬರಲ್ಲೂ ಪರಸ್ಪರ, ಪ್ರೀತಿ, ವಿಶ್ವಾಸ ಸಹಬಾಳ್ವೆಯಲ್ಲಿ ಬದುಕಲಿ ಎಂದರು. ಚರ್ಚ್‌ಗಳಿಗೆ ಭೇಟಿ ನೀಡಿದ್ದ ಭಕ್ತರು‌ ಬಂಧು- ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಮೇರಿ ಚರ್ಚ್‌, ಮೆಥೋಡಿಸ್ಟ್‌ ಚರ್ಚ್‌, ಬೆತ್ತನಿ ಚರ್ಚ್, ಚಿಕ್ಕಬಳ್ಳಾಪುರ ರಸ್ತೆಯ ಈಲಂ ಚರ್ಚ್‌, ಮಂಗಸಂದ್ರ, ನಡುಪಲ್ಲಿ, ಚಿನ್ನಾಪುರ, ವೇಮಗಲ್‌, ವಕ್ಕಲೇರಿ ಸೇರಿದಂತೆ ವಿವಿಧೆಡೆ ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆಯಿತು. ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಧರ್ಮಗುರು ಶಾಂತಕುಮಾರ್‌ ಸಂದೇಶ ನೀಡಿದರು.

ಚರ್ಚ್‌ಗಳ ಆವರಣದಲ್ಲಿ ನಿರ್ಮಿಸಿದ್ದ ಏಸು ಕ್ರಿಸ್ತನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಳಿ ಪ್ರಮುಖ ಆಕರ್ಷಣೆಯಾಗಿದ್ದವು. ಬಣ್ಣ ಬಣ್ಣದ ನಕ್ಷತ್ರಗಳು, ಆಕಾಶ ಬುಟ್ಟಿಗಳು, ಕ್ರಿಸ್‌ಮಸ್‌ ಟ್ರೀಗಳು ಚರ್ಚ್‌, ಪ್ರಾರ್ಥನಾ ಮಂದಿರಗಳ ಮಹಡಿಯನ್ನು ಅಲಂಕರಿಸಿದ್ದವು. ಚರ್ಚ್‌ಗೆ ಭೇಟಿ ನೀಡಿದವರು ಮೇಣದ ಬತ್ತಿ ಬೆಳಗಿ ಮೇರಿ ಮಾತೆ, ಏಸು ಕ್ರಿಸ್ತನನ್ನು ಬೇಡಿಕೊಂಡರು. ಪ್ರಾರ್ಥನೆಗೆ ಬಂದವರಿಗೆ ಕೇಕ್‌, ಚಾಕೊಲೆಟ್‌ ವಿತರಿಸಲಾಯಿತು.

ಗೋದಲಿ, ಕ್ರಿಸ್‌ಮಸ್‌ ಟ್ರೀ ಎದುರು ಜನ ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ದಿನವಿಡೀ ಗೆಳೆಯರೊಂದಿಗೆ ಚರ್ಚ್‌ ಆವರಣದಲ್ಲಿ ಸುತ್ತಾಡಿ ಸಂಭ್ರಮಿಸಿದರು. ಯುವಕ, ಯುವತಿಯರು ಕ್ರಿಸ್ತನ ಗುಣಗಾನ ಮಾಡುವ ಹಾಡುಗಳನ್ನು ಹಾಡಿದರು. ಚರ್ಚ್‌ ಆವರಣದಲ್ಲಿ ಜಾತ್ರೆಯ ವಾತಾವರಣ ಇತ್ತು.

ಕ್ರೈಸ್ತ ಧರ್ಮೀಯರ ಮನೆಗಳಲ್ಲಿ ಕೇಕ್‌ ಕತ್ತರಿಸಿ, ಬಂಧು ಬಾಂಧವರು, ಸ್ನೇಹಿತರನ್ನು ಕರೆದು, ಕೇಕ್‌, ಸಿಹಿ ತಿನಿಸು ಉಣಬಡಿಸಿ ಸೌಹಾರ್ದ ಮೆರೆದರು. ಕೆಲವರು ಬಡವರಿಗೆ ಸಹಾಯ ಮಾಡಿದರು.

ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದ ಚರ್ಚ್‌ಗಳು ರಾತ್ರಿ ವೇಳೆ ಝಗಮಗಿಸುತ್ತಿದ್ದರೆ, ‌ ಕ್ರೈಸ್ತರ ನಿವಾಸದ ಎದುರು ಅಲಂಕೃತ 'ಕ್ರಿಸ್‌ಮಸ್ ಟ್ರಿ’ ಸ್ವಾಗತಿಸಿದವು. ಪುಟ್ಟ ಮಕ್ಕಳು ಸಾಂಟಾಕ್ಲಾಸ್ ವೇಷ ಧರಿಸಿ ಗಮನ ಸೆಳೆದರು.