ADVERTISEMENT

ಕೋಲಾರ: ರಾಜ್ಯ ಕೊಕ್ಕೊ ತಂಡದಲ್ಲಿ ಎಳನೀರು ವ್ಯಾಪಾರಿ ಪುತ್ರ

ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಶ್ರೀನಿವಾಸ್‌ ಭಾಗಿ, ಭರವಸೆ ಮೂಡಿಸಿದ ಆಟಗಾರ

ಕೆ.ಓಂಕಾರ ಮೂರ್ತಿ
Published 23 ಜನವರಿ 2026, 7:14 IST
Last Updated 23 ಜನವರಿ 2026, 7:14 IST
ಕೊಕ್ಕೊ ಆಟದಲ್ಲಿ ನಿರತ ಶ್ರೀನಿವಾಸ್‌
ಕೊಕ್ಕೊ ಆಟದಲ್ಲಿ ನಿರತ ಶ್ರೀನಿವಾಸ್‌   

ಕೋಲಾರ: ತಂದೆ ಮುನಿರಾಜು ನಿತ್ಯ ಉಪ್ಪುಕುಂಟೆ ಗೇಟ್‌ನಲ್ಲಿ ಎಳನೀರು ಮಾರಾಟ ಮಾಡಿ ಕುಟುಂಬ ಮುನ್ನಡೆಸುತ್ತಿದ್ದಾರೆ. ಇತ್ತ ಪುತ್ರ ಶ್ರೀನಿವಾಸ್‌ ರಾಜ್ಯ ತಂಡದಲ್ಲಿ ಸ್ಥಾನ ಪಡೆದು ಸೀನಿಯರ್‌ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.

ಶ್ರಮಜೀವನದ ದಾರಿಯಲ್ಲಿ ಹೆಜ್ಜೆ ಇಡುತ್ತಿರುವ ಪೋಷಕರ ಮೊಗದಲ್ಲಿ ಈ ಮೂಲಕ ಖುಷಿ ಗೆರೆ ಮೂಡಿಸಿದ್ದಾರೆ, ಊರು ಹಾಗೂ ಜಿಲ್ಲೆಯ ಜನರು ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾರೆ.

ಕೋಲಾರ ತಾಲ್ಲೂಕಿನ ಹನುಮಂತಪುರ ಗ್ರಾಮದ ಶ್ರೀನಿವಾಸ್‌ ಕೆಲ ದಿನಗಳ ಹಿಂದೆಯಷ್ಟೇ ತೆಲಂಗಾಣ ರಾಜ್ಯದ ಖಾಜಿಪೇಟೆಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದು, ರಾಜ್ಯ ಕೊಕ್ಕೊ ತಂಡ ಮುಂಬರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.

ADVERTISEMENT

ಏಳು ವರ್ಷಗಳಿಂದ ಕೊಕ್ಕೊ ಆಟದಲ್ಲಿ ತೊಡಗಿರುವ 26 ವರ್ಷ ವಯಸ್ಸಿನ ಅವರು ಈ ಹಿಂದೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ತಂಡದ ನಾಯಕತ್ವ ವಹಿಸಿ ಮೂರು ಬಾರಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದಾರೆ. ಈಚೆಗೆ ತುಮಕೂರಿನಲ್ಲಿ ನಡೆದ ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಕ್ರೀಡಾಕೂಟದಲ್ಲಿ ಕೋಲಾರ ಜಿಲ್ಲಾ ತಂಡ ಪ್ರತಿನಿಧಿಸಿದ್ದರು.

ಪಿಯುಸಿಯಿಂದಲೇ ಕೊಕ್ಕೊ ಆಡುತ್ತಿದ್ದೇನೆ. ಮಧ್ಯದಲ್ಲಿ ಒಂದೆರಡು ವರ್ಷ ಆಡಿರಲಿಲ್ಲ. ಅಂತಿಮ ಪದವಿಗೆ ಬಂದ ಮೇಲೆ ಮತ್ತೆ ಆಟ ಶುರು ಮಾಡಿದ್ದು, ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ’ ಎಂದು ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮದು ಮಧ್ಯಮ ವರ್ಗ, ಕಷ್ಟದ ಜೀವನ. ಅಪ್ಪ ಮುನಿರಾಜು ಉಪ್ಪುಕುಂಟೆ ಗೇಟ್‌ನಲ್ಲಿ ಎಳನೀರು ಮಾರಾಟ ಮಾಡಿ ನಮ್ಮನ್ನೆಲ್ಲಾ ಸಾಕಿದ್ದಾರೆ. ಅಪ್ಪ ಬೇರೆ ಕಡೆ ಹೋದಾಗ ನಾನು ಕೂಡ ಎಳನೀರು ಮಾರಾಟ ಮಾಡುತ್ತೇನೆ. ತಾಯಿ ಈರಮ್ಮ ಗೃಹಿಣಿ. ಅವರ ಶ್ರಮದ ಜೀವನ ನನ್ನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಸ್ಫೂರ್ತಿ ತುಂಬಿದೆ’ ಎಂದು ನುಡಿದರು.

ಅವರು ಬಿ‍ಪಿಎಡ್‌ ಮುಗಿಸಿದ್ದು, ವಕ್ಕಲೇರಿ ಗ್ಯಾಲಕ್ಸಿ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ದೈಹಿಕ ಶಿಕ್ಷಕ ಶಿಕ್ಷಕರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಜಿಲ್ಲೆಯಿಂದ ರಾಜ್ಯ ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕೊಕ್ಕೊದಲ್ಲಿ ಮುಂದುವರಿದು ಉತ್ತಮ ಸಾಧನೆ ಮಾಡಬೇಕೆಂಬ ಆಸೆ ಹಾಗೂ ಕನಸು ಇದೆ ಎಂದು ಹೇಳಿದರು.

ಟ್ರೋಫಿಯೊಂದಿಗೆ ಶ್ರೀನಿವಾಸ್‌
ನನ್ನ ಕೋಚ್‌ ಆಗಿರುವ ಯೋಗೀಶ್‌ 17 ಸಲ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದಾರೆ. ಅವರ ಆಟ ನೋಡಿ ನನಗೂ ಆಸಕ್ತಿ ಬೆಳೆಯಿತು
ಶ್ರೀನಿವಾಸ್‌ ಕೊಕ್ಕೊ ಆಟಗಾರ
ಕೋಲಾರ ಜಿಲ್ಲೆಯಲ್ಲಿ ಪ್ರತಿಭಾವಂತ ಆಟಗಾರರು ಇದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಕೊಕ್ಕೊ ಆಟದ ಸಾಮರ್ಥ್ಯ ಅಡಗಿದ್ದು ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡುತ್ತಿದ್ದೇವೆ
ಆರ್.ಶ್ರೀಧರ್‌ ಅಧ್ಯಕ್ಷ ಕೋಲಾರ ಜಿಲ್ಲಾ ಕೊಕ್ಕೊ ಸಂಸ್ಥೆ

ಕೊಕ್ಕೊ ಆಟದಲ್ಲಿ ಜಿಲ್ಲೆಗೆ ದೊಡ್ಡ ಇತಿಹಾಸ

ಕೊಕ್ಕೊ ಆಟದಲ್ಲಿ ಜಿಲ್ಲೆಗೆ ದೊಡ್ಡ ಇತಿಹಾಸವೇ ಇದೆ. ಈ ಹಿಂದೆ ಆರ್‌.ಶ್ರೀಧರ್‌ ಮಧು ಯೋಗೇಶ್‌ ಪ್ರಕಾಶ್‌ ಪಿ.ಶ್ರೀಧರ್‌ ಸೇರಿದಂತೆ ಹಲವರು ವಿವಿಧ ಹಂತಗಳಲ್ಲಿ ಪ್ರತಿನಿಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿನಯ್‌ ಜೂನಿಯರ್‌ ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ಆಡಿದ್ದರು. ಪ್ರಕಾಶ್‌ ಅವರು 90ರ ದಶಕದಲ್ಲಿ ‘ವೀರ ಅಭಿಮನ್ಯು’ ಪ್ರಶಸ್ತಿಗೆ ಭಾಜನರಾಗಿದ್ದರು. ಕೋಲಾರದಲ್ಲಿ 2022ರಲ್ಲಿ ರಾಜ್ಯಮಟ್ಟದ ಕೊಕ್ಕೊ ಟೂರ್ನಿ ನಡೆದಿತ್ತು. ಶಾಲಾಮಟ್ಟದಲ್ಲಿ ಈಗಲೂ ಕೋಲಾರ ಜಿಲ್ಲೆಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಾವಳ್ಳಿ ಶಾಲೆ ಬಾಲಕಿಯರು ಶಿಳ್ಳಂಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಾಲಕರು ರಾಜ್ಯಮಟ್ಟದ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಕೋಲಾರ ಕೊಕ್ಕೊ ಕಬಡ್ಡಿ ಕ್ಲಬ್‌ ಕೂಡ ಇದ್ದು. ಮಿನಿ ಕ್ರೀಡಾಂಗಣದಲ್ಲಿ ತಾಲೀಮು ನಡೆಯುತ್ತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.