ADVERTISEMENT

ಕೋಲಾರ | ತಂತ್ರಜ್ಞಾನ ಯುಗದಲ್ಲಿ ಜಾಗರೂಕತೆಯಿಂದ ವ್ಯವಹರಿಸಬೇಕು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:03 IST
Last Updated 6 ಜನವರಿ 2026, 7:03 IST
ಕೋಲಾರದಲ್ಲಿ ಸೋಮವಾರ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು
ಕೋಲಾರದಲ್ಲಿ ಸೋಮವಾರ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು   

ಕೋಲಾರ: ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವು ನಮ್ಮನ್ನು ಆವರಿಸಿಕೊಂಡಿದೆ. ನಾವು ತಂತ್ರಜ್ಞಾನಕ್ಕೆ ಗುಲಾಮರಾಗದೆ ಹತೋಟಿಯಲ್ಲಿಟ್ಟುಕೊಂಡು ಜಾಗೃತ ಗ್ರಾಹಕರಾಗಿ ವ್ಯವಹರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ವ್ಯವಹಾರದಲ್ಲೂ ತಂತ್ರಜ್ಞಾನ ನುಸುಳಿದೆ. ಕೃತಕ ಬುದ್ಧಿಮತ್ತೆ (ಎಐ) ಎಷ್ಟೇ ಮುಂದುವರಿದರೂ ಅದು ಮಾನವ ಬುದ್ಧಿಮತ್ತೆಯನ್ನು ಮೀರಿಸಲು ಸಾಧ್ಯವಿಲ್ಲ. ತಂತ್ರಜ್ಞಾನದ ಅತಿಯಾದ ಬಳಕೆಯಿಂದ ನಾವು ನಿಸರ್ಗ ಮತ್ತು ಮಾನವೀಯ ಸಂಬಂಧಗಳಿಂದ ದೂರವಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ತಮಗೆ ಈ ಹಿಂದೆ ಆದ ಸೈಬರ್ ವಂಚನೆಯ ಅನುಭವವನ್ನು ಹಂಚಿಕೊಂಡ ಅವರು, ಜಾರ್ಖಂಡ್‌ನ 'ಜಾಮ್ತಾರಾ' ಅಂತಹ ಪ್ರದೇಶಗಳಿಂದ ನಡೆಯುವ ವ್ಯವಸ್ಥಿತ ಡಿಜಿಟಲ್ ವಂಚನೆಗಳ ಬಗ್ಗೆ ಜನರು ಜಾಗರೂಕರಾಗಿರಬೇಕು. ಬ್ಯಾಂಕ್ ಖಾತೆಗಳ ನಿರ್ವಹಣೆ ಮತ್ತು ಓಟಿಪಿ ಹಂಚಿಕೊಳ್ಳುವಾಗ ಹೆಚ್ಚಿನ ನಿಗಾ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಗುಣಮಟ್ಟದ ಸೇವೆ ಪಡೆಯುವುದು ಗ್ರಾಹಕರ ಮೂಲಭೂತ ಹಕ್ಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನಿಸುವ ಮೂಲಕ ಜ್ಞಾನಾರ್ಜನೆ ಮಾಡಬೇಕು. ಇಂದಿನ ಪೋಷಕರು ಮಕ್ಕಳಿಗೆ ಬೆಲೆಬಾಳುವ ಗ್ಯಾಜೆಟ್‍ಗಳನ್ನು ನೀಡುವ ಬದಲು ಅವರೊಂದಿಗೆ 'ಗುಣಮಟ್ಟದ ಸಮಯ' ಕಳೆಯಬೇಕು ಎಂದು ಅವರು ಸಲಹೆ ನೀಡಿದರು.

ಆಹಾರ ಇಲಾಖೆಯ ಉಪನಿರ್ದೇಶಕಿ ಲತಾ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗ್ರಾಹಕರು ಮಾರುಕಟ್ಟೆಯಲ್ಲಿ ತಮಗಾಗುವ ವಂಚನೆಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಉತ್ಪನ್ನಗಳನ್ನು ಪಡೆಯಲು ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗೃತಿ ಹೊಂದಿರಬೇಕು’ ಎಂದರು.

ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಗ್ರಾಹಕರಿಗೆ ಒಟ್ಟು ಆರು ಹಕ್ಕುಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು ಮತ್ತು ಪರಿಹಾರ ಪಡೆಯುವ ಹಕ್ಕುಗಳು ಸೇರಿವೆ. ಗ್ರಾಹಕರು ತಮಗಾದ ಅನ್ಯಾಯದ ವಿರುದ್ಧ ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರೀಯ ಗ್ರಾಹಕ ಆಯೋಗಗಳ ಮೂಲಕ ಸೂಕ್ತ ಪರಿಹಾರವನ್ನು ಕಡಿಮೆ ಅವಧಿಯಲ್ಲಿ ಪಡೆಯಲು ಅವಕಾಶವಿದೆ ಎಂದು ವಿವರಿಸಿದರು.

ಗ್ರಾಹಕರ ಹಕ್ಕುಗಳ ರಕ್ಷಣೆ ಮತ್ತು ಡಿಜಿಟಲ್ ನ್ಯಾಯದ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವೈ.ಎಸ್.ತಮ್ಮಣ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ನಟೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಕಾನೂನು ಮಾಪನ ಶಾಸ್ತ್ರದ ಎಂ.ಪಿ.ಪ್ರಭುದೇವ್, ಗ್ರಾಹಕ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎಸ್.ರಾಜು ಇದ್ದರು.

ಪ್ರತಿಯೊಬ್ಬರು ಯಾವುದಾದರೂ ರೀತಿಯಲ್ಲಿ ಗ್ರಾಹಕರೇ ಆಗಿರುತ್ತಾರೆ. ತೂಕ ಅಳತೆಯಲ್ಲಿ ವ್ಯತ್ಯಾಸವಾದರೆ ಸೇವೆಯಲ್ಲಿ ಲೋಪವಾದರೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು
ಎಂ.ಆರ್.ರವಿ ಜಿಲ್ಲಾಧಿಕಾರಿ

ಗ್ರಾಹಕರ ರಕ್ಷಣೆಯೇ ಕಾಯ್ದೆ ಉದ್ದೇಶ

ಪ್ರತಿ ವರ್ಷ ಡಿಸೆಂಬರ್ 24ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. 1986ರಲ್ಲಿ ಇದೇ ದಿನ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರ ಸವಿನೆನಪಿಗಾಗಿ ಈ ಆಚರಣೆ ನಡೆಯುತ್ತಿದೆ. 2025ನೇ ಸಾಲಿನ ರಾಷ್ಟ್ರೀಯ ಗ್ರಾಹಕ ದಿನಾಚರಣೆಯನ್ನು ‘ಡಿಜಿಟಲ್ ನ್ಯಾಯದ ಮೂಲಕ ತ್ವರಿತ ಹಾಗೂ ಪರಿಣಾಮಕಾರಿ ವಿಲೇವಾರಿ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅಸುರಕ್ಷಿತ ಉತ್ಪನ್ನಗಳಿಂದ ಗ್ರಾಹಕರನ್ನು ರಕ್ಷಿಸುವುದು ಈ ದಿನದ ಮೂಲ ಉದ್ದೇಶವಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಲತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.