ADVERTISEMENT

ಮಕ್ಕಳ ಮನೆಗಳಿಗೆ ಡಿಡಿಪಿಐ ಭೇಟಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ, ಪೋಷಕರಿಗೆ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:17 IST
Last Updated 7 ಜನವರಿ 2026, 6:17 IST
ಕೋಲಾರದ ರಹಮತ್ ನಗರ ವ್ಯಾಪ್ತಿಯ ಹಲವು ಮಕ್ಕಳ ಮನೆಗಳಿಗೆ ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಭೇಟಿ ನೀಡಿ ಕಲಿಕೆ ಮಟ್ಟ ಪರಿಶೀಲಿಸಿದರು
ಕೋಲಾರದ ರಹಮತ್ ನಗರ ವ್ಯಾಪ್ತಿಯ ಹಲವು ಮಕ್ಕಳ ಮನೆಗಳಿಗೆ ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಭೇಟಿ ನೀಡಿ ಕಲಿಕೆ ಮಟ್ಟ ಪರಿಶೀಲಿಸಿದರು    

ಕೋಲಾರ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಸವಾಲಾಗಿ ಸ್ವೀಕರಿಸಿರುವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಡಿಡಿಪಿಐ) ಅಲ್ಮಾಸ್ ಫರ್ವೀನ್ ತಾಜ್, ಶಾಲೆಗೆ ಗೈರಾಗುವ ಮಕ್ಕಳ ಮನೆಗಳಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ರಾತ್ರಿ ವೇಳೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಮನೆಯಲ್ಲಿ ವಿದ್ಯಾರ್ಥಿಗಳ ಕಲಿಗೆ ರೀತಿ, ಪೋಷಕರ ಮಾರ್ಗದರ್ಶದ ರೀತಿ ರಿವಾಜುಗಳನ್ನು ಪರಿಶೀಲಿಸಿದರು. ಮಕ್ಕಳು ಕಲಿಕಾ ಚಟುವಟಿಕೆಗಳಲ್ಲಿ ನಿರತಾಗಿರುವಂತೆ ಮಾಡಲು ಪೋಷಕರಲ್ಲಿ ಜಾಗೃತಿ ಮೂಡಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲಾಗಿದ್ದು, ಶಾಲೆಗೆ ಗೈರಾಗುವ, ನಿಧಾನ ಕಲಿಕೆ, ಕಲಿಕೆಯಲ್ಲಿ ಹಿಂದುಳಿದಿರುವಿಕೆಯ ಸಂಬಂಧ ರಹಮತ್ ನಗರ ವ್ಯಾಪ್ತಿಯ ಹಲವು ಮಕ್ಕಳ ಮನೆಗಳಿಗೆ ಭೇಟಿ ನೀಡಿದರು. ಮಕ್ಕಳೊಂದಿಗೆ ಕುಳಿತು ಅವರ ಕಲಿಕೆ ಮಟ್ಟ ಪರಿಶೀಲಿಸಿದರು.

ADVERTISEMENT

ಶಾಲೆಯಿಂದ ಮನೆಗೆ ಹೋಗುವ ಮಕ್ಕಳು, ರಾತ್ರಿ ಸರಿಯಾಗಿಯೇ ಓದುತ್ತಿದ್ದಾರೆಯೇ ಎಂಬುದನ್ನು ಶಿಕ್ಷಕರು ಪರಿಶೀಲಿಸಲು ಮನೆ ಭೇಟಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳನ್ನು ಇಲಾಖೆ ನಡೆಸಲಿದೆ ಎಂದರು.

ಪೋಷಕರ ಸಹಕಾರವಿಲ್ಲದೇ ಶೈಕ್ಷಣಿಕ ಪ್ರಗತಿ ಅಸಾಧ್ಯ. ಶಿಕ್ಷಕರ ಪ್ರಯತ್ನಕ್ಕೆ ತಾವು ಕೈಜೋಡಿಸಬೇಕು. ಶಾಲೆಯಿಂದ ಮನೆಗೆ ಬಂದ ಮಕ್ಕಳು ಮನೆಯಲ್ಲಿ ಕುಳಿತು ಓದಲು ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ತಪ್ಪು ಹಾದಿ ತುಳಿಯುತ್ತಿದ್ದಾರೆಯೇ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆಯೇ ಎಂಬುದರ ಕುರಿತೂ ಗಮನಹರಿಸಬೇಕು. ಓದುವ ಸಂದರ್ಭದಲ್ಲಿ ಮಕ್ಕಳನ್ನು ಸಂಪಾದನೆ, ದುಡಿಮೆಗೆ ಕಳುಹಿಸುವುದು ಸರಿಯಲ್ಲ. ಇದು ಕಾನೂನು ರೀತಿಯಲ್ಲೂ ಅಪರಾಧ ಎಂದು ಎಚ್ಚರಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಕೇವಲ 72 ದಿನಗಳಿವೆ. ಇಂತಹ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಗೈರಾದರೆ ಅವರ ಕಲಿಕೆಯ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂಬುದನ್ನು ಅರಿತು ಅವರಿಗೆ ಮಾರ್ಗದರ್ಶನ ನೀಡಿ ಎಂದರು.

ಯಾವುದೇ ಮಗು ಶಾಲೆಗೆ ಗೈರಾದರೆ ಶಾಲೆಯ ಮೊದಲ ಅವಧಿ ಮುಗಿಯುತ್ತಿದ್ದಂತೆ ಅವರ ಪೋಷಕರಿಗೆ ತರಗತಿಯ ಶಿಕ್ಷಕರು ದೂರವಾಣಿ ಕರೆ ಮಾಡಿ ಕಾರಣ ತಿಳಿದುಕೊಳ್ಳಬೇಕು. ಆ ಮಗುವನ್ನು ಶಾಲೆಗೆ ಕಳುಹಿಸಲು ಒತ್ತಡ ಹಾಕಬೇಕು ಎಂದು ಸೂಚನೆ ನೀಡಿದರು.

ಜೂನಿಯರ್ ಕಾಲೇಜುಗಳ ಕಳಪೆ ಫಲಿತಾಂಶವೇ ಜಿಲ್ಲೆಯ ಗುಣಮಟ್ಟದ ಫಲಿತಾಂಶಕ್ಕೆ ಪೆಟ್ಟು ನೀಡುತ್ತಿದೆ. ತಾವು ಉತ್ತಮ ಫಲಿತಾಂಶ ತರಲು ನಿರಂತರ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.

ಮನೆ ಭೇಟಿ ಸಂದರ್ಭದಲ್ಲಿ ಡಿಡಿಪಿಐ ಅವರೊಂದಿಗೆ ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿ ರಾಜೇಶ್ವರಿ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಉಪಪ್ರಾಂಶುಪಾಲೆ ರಾಧಮ್ಮ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಕಚೇರಿಯ ತಾಂತ್ರಜ್ಞ ಶರಣಪ್ಪ ಜಮಾದಾರ್, ಸಿಆರ್‍ಪಿ ಮುಜಾಹಿದ್ ಪಾಷಾ, ಪೋಷಕರು, ವಿದ್ಯಾರ್ಥಿಗಳು ಇದ್ದರು.

ಜಿಲ್ಲೆಯಾದ್ಯಂತ ಮಕ್ಕಳ ಮನೆಗೆ ಭೇಟಿ

ಶಾಲೆಗೆ ಗೈರಾಗುವ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಪೋಷಕರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದು ಇಡೀ ಜಿಲ್ಲೆಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದರು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸುವ ಪ್ರಯತ್ನ ಮಾತ್ರವಲ್ಲ; ಶಾಲೆಯಿಂದ ದೂರವುಳಿಯುವುದನ್ನು ತಪ್ಪಿಸುವ ಸದುದ್ದೇಶವೂ ಆಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.