
ಕೋಲಾರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಕೋಲಾರ ಕ್ಷೇತ್ರದಲ್ಲಿ ₹ 1,041 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅನುಮಾನ ಇರುವವರು ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಶಾಸಕ ಕೊತ್ತೂರು ಮಂಜುನಾಥ್, ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಸವಾಲು ಹಾಕಿದರು.
ತಾಲ್ಲೂಕಿನ ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ವೇಳೆ ಅವರು ಮಾತನಾಡಿದರು.
ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲವೆಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡ ಹಸಾಳ ಹಾಗೂ ಚಿಕ್ಕ ಹಸಾಳ ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ₹60 ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಕೋಲಾರ ನಗರ ವ್ಯಾಪ್ತಿಗೆ ಸೇರಲಿದೆ. ಈ ಪಂಚಾಯಿತಿ ಮೂಲಕ ಹಾದು ಹೋಗುತ್ತಿರುವ ಬಂಗಾರಪೇಟೆ ರಸ್ತೆಯನ್ನು ಚತುಷ್ಪತ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ರಿಂಗ್ ರಸ್ತೆ ಸಹ ಪ್ರಾರಂಭವಾಗಲಿದ್ದು, ಅಭಿವೃದ್ಧಿಗೆ ವಿಫುಲ ಅವಕಾಶಗಳು ಇವೆ ಎಂದರು.
ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜ್ ಮಾತನಾಡಿ, ‘ಹಿಂದೆ ನರೇಗಾ ಎಂದರೆ ಹಣ ಲೂಟಿ ಮಾಡುವ ಯೋಜನೆ ಅಂದುಕೊಂಡಿದ್ದರು. ಇಂದು ನರೇಗಾ ಹಣವನ್ನು ಪಂಚಾಯಿತಿಯ ಆಡಳಿತ ಮಂಡಳಿ ಸದುಪಯೋಗಿಸಿಕೊಂಡು ಜನರಿಗೆ ಅಗತ್ಯವಾದ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಮೀಣ ಜನತೆಗೆ ಉದ್ಯೋಗ ನೀಡುವಲ್ಲಿಯೂ ಯಶಸ್ವಿಯಾಗಿದೆ’ ಎಂದು ಹೇಳಿದರು.
ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳು ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ವಿಧಾನ ಪರಿಷತ್ ಸದಸ್ಯರ ಅನುದಾನ ₹5 ಲಕ್ಷ ವೆಚ್ಚದಲ್ಲಿ ಹೈ ಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಹಾಗೂ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಪಂಚಾಯಿತಿಯಾಗಿ ಅಭಿವೃದ್ಧಿ ಹೊಂದಿದೆ. ಜಿಲ್ಲೆಯಲ್ಲಿ ಮೊದಲ ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಿದೆ. ಮೊದಲ ಹವಾನಿಯಂತ್ರಿತ ಕಚೇರಿ ಹೊಂದಿದೆ. ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿಯ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯರ ಅನುದಾನ ₹ 5 ಲಕ್ಷ ನೀಡಲಾಗುವುದು’ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಗಾಂಧೀಜಿ ಕನಸಿನಂತೆ ಗ್ರಾಮ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂಬ ಆಶಯವನ್ನು ಈಡೇರಿಸುವ ದಿಸೆಯಲ್ಲಿ ದೊಡ್ಡ ಹೊಸಳ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರ ಎಂದು ಹೇಳಲಾಗುತ್ತದೆ. ಪಂಚಾಯಿತಿಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಹೊಂದಲಿದೆ’ ಎಂದು ಅಭಿಪ್ರಾಯಪಟ್ಟರು.
ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಮಾಜಿ ಪಿಡಿಒ ಸಿ.ಆರ್.ಗೌಡ, ಜಿಲ್ಲಾ ಜಾಗೃತ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಜಮ್ಮ ಚೌಡಪ್ಪ ಅಧ್ಯಕ್ಷತೆ ವಹಿಸಿದ್ದರು.
ದೊಡ್ಡಹಸಾಳ ಗ್ರಾಮ ಪಂಚಾಯಿತಿಯಿಂದ ನರೇಗಾದಲ್ಲಿ ಚಿಕ್ಕಹಸಾಳ ಗ್ರಾಮದಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕ, ಅಂಗನವಾಡಿ ಕೇಂದ್ರ, ಶಾಲಾ ಕಟ್ಟಡ, ಗ್ರಾಮ ಪಂಚಾಯಿತಿ ಆವರಣದಲ್ಲಿ ಸಿಮೆಂಟ್ ನೆಲಹಾಸು ಕಾಮಗಾರಿ ಶಾಸಕರು ಉದ್ಘಾಟಿಸಿದರು. ಪಿಡಿಒ ಮೋಹನ್ ಕುಮಾರ್ ಸ್ವಾಗತಿಸಿ, ವಂದಿಸಿದರು.
ಪಂಚಾಯಿತಿ ಉಪಾಧ್ಯಕ್ಷ ಚಲಪತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾಂಗ್ರೆಸ್ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸೀಸಂದ್ರ ಗೋಪಾಲಗೌಡ, ರಾಜಣ್ಣ, ಚನ್ನಕೇಶವ, ರಾಜಗೋಪಾಲ್, ಶ್ರೀರಾಮರೆಡ್ಡಿ, ನಾಗರಾಜ್, ಅಶೋಕ್, ರವಿಕುಮಾರ್, ಛತ್ರಕೋಡಹಳ್ಳಿ ಮಂಜುನಾಥ್ ಇದ್ದರು.
‘ಅಂಬೇಡ್ಕರ್ ಆತ್ಮ ಭ್ರಷ್ಟರ ಕತ್ತು ಹಿಸುಕಲಿ’
ಡಿ.6 ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾಗಿದ್ದು ಅಭಿವೃದ್ಧಿ ಕೆಲಸಗಳನ್ನು ಪಂಚಾಯಿತಿಯಲ್ಲಿ ಹಮ್ಮಿಕೊಂಡಿರುವುದು ಶುಭ ಸೂಚಕ. ಅವರು ಸಮಾಜಕ್ಕೆ ಉತ್ತಮ ದಾರಿ ತೋರಿಸಿದ್ದಾರೆ. ಅವರ ಆಶಯದ ಹಾದಿಯಲ್ಲಿ ನಾವು ಸಾಗಬೇಕು ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು. ಒಂದು ವೇಳೆ ಯಾವುದೇ ವ್ಯಕ್ತಿ ಜನಪ್ರತಿನಿಧಿ ಅಧಿಕಾರಿ ಬಾಬಾ ಸಾಹೇಬರ ಸಿದ್ಧಾಂತದ ವಿರುದ್ಧವಾಗಿ ನಡೆದುಕೊಂಡರೆ ಭ್ರಷ್ಟಾಚಾರದಲ್ಲಿ ತೊಡಗಿದ್ಧರೆ ಅಂಥವರನ್ನು ಅಂಬೇಡ್ಕರ್ ಆತ್ಮ ಕತ್ತು ಹಿಸುಕಿ ಸಾಯಿಸಲೆಂದು ಪ್ರಾರ್ಥಿಸುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.