ADVERTISEMENT

ಅರಣ್ಯಾಧಿಕಾರಿ ಮೇಲೆ ಮುಗಿಬಿದ್ದ ಶಾಸಕರು

ಅಭಿವೃದ್ಧಿ ಕೆಲಸದಲ್ಲಿ ಉದಾಸೀನ ತೋರಿದರೆ ಕ್ರಮ: ಅಧಿಕಾರಿಗಳಿಗೆ ಸಂಸದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:09 IST
Last Updated 14 ನವೆಂಬರ್ 2025, 5:09 IST
ಕೋಲಾರದಲ್ಲಿ ಗುರುವಾರ ಸಂಸದ ಎಂ.ಮಲ್ಲೇಶ್‌ ಬಾಬು ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್‌ ಅರಣ್ಯಾಧಿಕಾರಿ ಮೇಲೆ ಮುಗಿಬಿದ್ದರು
ಕೋಲಾರದಲ್ಲಿ ಗುರುವಾರ ಸಂಸದ ಎಂ.ಮಲ್ಲೇಶ್‌ ಬಾಬು ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್‌ ಅರಣ್ಯಾಧಿಕಾರಿ ಮೇಲೆ ಮುಗಿಬಿದ್ದರು    

ಕೋಲಾರ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಸದ ಎಂ.ಮಲ್ಲೇಶ್‌ ಬಾಬು ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕರು ಅರಣ್ಯಾಧಿಕಾರಿ ಮೇಲೆ ಮುಗಿಬಿದ್ದ ಪ್ರಸಂಗ ನಡೆಯಿತು. ಈ ಮೂಲಕ ಕಳೆದ ದಿಶಾ ಸಭೆಯ ಮುಂದುವರಿದ ಭಾಗದಂತೆ ಭಾಸವಾಯಿತು.

ಅರಣ್ಯ ಇಲಾಖೆ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನುಬಾಹಿರವಾಗಿದೆ ಎಂದು ಹಿಂದಿನ ಸಭೆಯಲ್ಲಿ ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ಮೇಲೆ ಕೆಲ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗಿನ ಸಭೆಯಲ್ಲಿ ಸರೀನಾ ಪಾಲ್ಗೊಂಡಿರಲಿಲ್ಲ. ಆದರೆ, ಅವರ ಬದಲು ಪಾಲ್ಗೊಂಡಿದ್ದ ಆರ್‌ಎಫ್‌ಒ ರಘು ವಿರುದ್ಧ ಹರಿಹಾಯ್ದರು.

ತಾಲ್ಲೂಕಿನ ಹಾಲಹಳ್ಳಿ ವ್ಯಾಪ್ತಿಯ ರಸ್ತೆ, ಮಣಿನಹಳ್ಳಿ, ದೇವರಹಳ್ಳಿ, ಶೆಟ್ಟಿ ಮಾದಮಂಗಲ ರಸ್ತೆ ವಿಸ್ತೀರ್ಣ‌ ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಗಿಡ ಕತ್ತರಿಸಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವ ಕಾರಣ ಶಾಸಕ ಕೊತ್ತೂರು ಮಂಜುನಾಥ್‌ ಸಭೆಯಲ್ಲಿ ಸಿಡಿದೆದ್ದರು.

ADVERTISEMENT

‘ಇದು ಲೋಕೋಪಯೋಗಿ ಇಲಾಖೆಯ ರಸ್ತೆ. ರಸ್ತೆ ಅಭಿವೃದ್ಧಿಗೆ ಹಣ ತರಲು ನಾವು ಒದ್ದಾಡುತ್ತಿದ್ದೇವೆ. ಆದರೆ, ಇಲ್ಲಿ ನಡೆಯುತ್ತಿರುವ ಕಾಮಗಾರಿ ತಡೆಯಲು‌ ನೀವು ಯಾರು? ನಿಮಗೆ ‌ಅಧಿಕಾರ ಕೊಟ್ಟುವರು ಯಾರು? ನಾವು ನಿಮ್ಮ ಸಹವಾಸಕ್ಕೆ ಬಂದಿಲ್ಲ. ಆದರೆ, ಕಾಮಗಾರಿ ತಡೆಯಲು ಅರಣ್ಯ ಇಲಾಖೆಯ 30 ಸಿಬ್ಬಂದಿ ಬಂದಿದ್ದಾರೆ. ನಿಮ್ಮ ಮೇಲೆ ಕೇಸ್ ಹಾಕಿಸಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯವರು ಅಭಿವೃದ್ಧಿಗೆ ತಡೆ‌ಯೊಡ್ಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಇಂಚರ ಗೋವಿಂದರಾಜು ಕೂಡ ದನಿಗೂಡಿಸಿದರು. ರಸ್ತೆ ವಿಸ್ತರಣೆಗೆ ಏನೆಲ್ಲಾ ಅಡ್ಡಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ರಾಮಮೂರ್ತಿ ವಿವರಿಸಿದರು.

ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದ ಮಲ್ಲೇಶ್‌ ಬಾಬು, ‘ಸಾರ್ವಜನಿಕರಿಗೆ ತೊಂದರೆ ‌ಕೊಡಬೇಡಿ. ಜನರಿಗೆ ‌ಸಹಾಯವಾಗುವಂಥ ಕೆಲಸ ‌ಮಾಡಿ. ‌ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅರಣ್ಯ ಅಧಿಕಾರಿಗೆ ಪತ್ರ ಬರೆದು ಅನುಮತಿ ಕೇಳಿ. ಕೊಡದಿದ್ದರೆ ತಮ್ಮ ಕೆಲಸ ಮುಂದುವರಿಸಿ’ ಎಂದರು.

‘ಅಧಿಕಾರಿಗಳು ಸಾರ್ವಜನಿಕರ ಸೇವಕರಿದ್ದಂತೆ. ಇಲಾಖಾಧಿಕಾರಿಗಳು ಸಮನ್ವಯತೆಯಿಂದ ತಂಡವಾಗಿ ಕೆಲಸ ಮಾಡಬೇಕು. ಅದು ಬಿಟ್ಟು ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಉದಾಸೀನ ತೋರಿದರೆ ತಕ್ಕ ಬೆಲೆ ತೆರೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣ ಆಗಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಕೂಡಲೇ ಸರಿಪಡಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮೀಣ ಭಾಗದ ರಸ್ತೆಗಳ ಪಕ್ಕದಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು. ತಿರುವುಗಳಲ್ಲಿ ಹೆಚ್ಚಾಗಿ ಗಿಡಗಳು ಬೆಳೆದುಕೊಂಡಿದ್ದು, ಅಪಘಾತಕ್ಕೆ ಆಹ್ವಾನಿಸುತ್ತಿವೆ’ ಎಂದರು.

ಜಿಲ್ಲಾಧಿಕಾರಿ ಎಂ.ಆರ್‌.ರವಿ ಮಾತನಾಡಿ, ‘ರಸ್ತೆ ತಿರುವುಗಳಲ್ಲಿ ಬೆಳೆದಿರುವ ಗಿಡ, ರಸ್ತೆಗಳಲ್ಲಿ ನಿರ್ಮಾಣ ಆಗಿರುವ ಗುಂಡಿಗಳ ಬಗ್ಗೆ ಜನರು ಗಮನಕ್ಕೆ ತರುತ್ತಿದ್ದಾರೆ. ಗುಂಡಿ ಮುಚ್ಚಲು ಮೊದಲು ಕ್ರಿಯಾಯೋಜನೆ ಮಾಡಿಕೊಳ್ಳಲಿ. ಅದಕ್ಕೆ ಮೇಲಧಿಕಾರಿಗಳಿಂದ ಅನುಮೋದನೆ ಪಡೆದು ಕೆಲಸ ಮಾಡಿಸಬೇಕು, ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರಮೇಶ್‌, ಜಿಲ್ಲೆಯಲ್ಲಿ ದನದ ಕೊಟ್ಟಿಗೆ ಬೇಡಿಕೆಯಿಲ್ಲ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಗರಂ ಆದ ಸಂಸದರು, ಈ ಬಗ್ಗೆ ಜಾಹೀರಾತು ಹಾಕಿಸೋಣವೇ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಉತ್ತರಿಸಿ, ‘ಭೋವಿ ನಿಗಮ ಸೇರಿದಂತೆ ವಿವಿಧ ನಿಗಮಗಳಿಂದ ಹಸು ಖರೀದಿಗೆ ಸಾಲ ನೀಡಲಾಗುತ್ತಿದೆ. ಅದನ್ನು ಸಾಕಲು ಕೊಟ್ಟಿಗೆ ಇಲ್ಲ ಎಂದು ಹೇಳುತ್ತಿದ್ದಾರೆ. ಬೇಡಿಕೆ ಇದ್ದರೂ ಜನರಿಗೆ ತಲುಪಿಸುವಲ್ಲಿ ವಿಫಲವಾಗಿ ಈ ರೀತಿ ಉಡಾಫೆ ಉತ್ತರ ಕೊಡುವುದು ಸರಿಯಲ್ಲ’ ಎಂದು ಗದರಿದರು.

ಜನರಿಗೆ ಉಪಯೋಗುವ ಆಗುವಂತಹ ಕೆಲಸಗಳನ್ನು ನರೇಗಾದಿಂದ ಕೈಗೆತ್ತಿಕೊಳ್ಳಬೇಕು. ಇತ್ತೀಚಿಗೆ ನರೇಗಾ ಸಹವಾಸ ಬೇಡವೆಂದು ಭಯಪಡುತ್ತಿದ್ದಾರೆ ಎಂದು ಮಲ್ಲೇಶ್‌ ಬಾಬು ಹೇಳಿದರು.

ಇದಕ್ಕೆ ಉತ್ತರಿಸಿದ ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌, ‘ಸ್ಥಳದಲ್ಲೇ ಡಿಜಿಟಲ್‌ ಹಾಜರಾತಿ ಆಗಿರುವುದರಿಂದ ಜನ ಮುಂದಾಗುತ್ತಿಲ್ಲ. ಸಮುದಾಯ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಕಾಮಗಾರಿ ಪೂರ್ಣ ಆಗುವುದು ತಡವಾಗುತ್ತಿದೆ’ ಎಂದರು.

ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ, ‘ಜಲಕಾಯಗಳ ಕಡೆ ಹೆಚ್ಚು ಗಮನ ನೀಡಬೇಕಾಗಿದೆ. ಪ್ರತಿ ತಾಲ್ಲೂಕಿನಲ್ಲೂ ತಲಾ ಐದು ಕಲ್ಯಾಣಿ ಪುನಶ್ಚೇತನ ಮಾಡಿದರೆ ಅನುಕೂಲವಾಗುತ್ತದೆ. ಇದನ್ನು ಇಒಗಳು ಅಭಿಯಾನ ರೀತಿ ಮಾಡಬೇಕು’ ಎಂದು ಸೂಚಿಸಿದರು.

ಕೊತ್ತೂರು ಮಂಜುನಾಥ್‌ ಮಾತನಾಡಿ, ‘ರಸಗೊಬ್ಬರ ಸಮಸ್ಯೆ ನೀಗಿಸಲು ನಾವು ಪ್ರಯತ್ನ ಮಾಡಬೇಕಾಯಿತು. ಸಂಬಂಧಪಟ್ಟ ಇಲಾಖಾಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಮಳೆಗಾಲದಲ್ಲಿ ರಸಗೊಬ್ಬರ ಇರಲಿಲ್ಲ, ತಾಲ್ಲೂಕು ಸೊಸೈಟಿಯಲ್ಲಿ ಗೊಬ್ಬರ ಖಾಲಿಯಾದರೆ ಖಾಸಗಿ ಅಂಗಡಿಗಳಲ್ಲಿ ಚೀಲದ ಮೇಲೆ ₹ 600 ಹೆಚ್ಚಾಗುತ್ತದೆ. ಡಿಎಪಿ, ಯೂರಿಯಾ ಜತೆಗೆ ಬೇರೆ ಗೊಬ್ಬರ ತೆಗೆದುಕೊಳ್ಳಲು ಒತ್ತಡ ಹಾಕುತ್ತಾರೆ. ಇದು ಅಧಿಕಾರಿಗಳ ಗಮನಕ್ಕೆ ಇದ್ದರೂ ಏಕೆ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಕೇಳಿದರು.

ರಸಗೊಬ್ಬರ ದಸ್ತಾನು ಎಷ್ಟಿದೆ, ಮಾರಾಟ ಎಷ್ಟಾಗಿದೆ, ರಸೀದಿ ನೀಡುತ್ತಿದ್ದಾರೆಯೇ ಎಂಬುದನ್ನು ನೋಡುತ್ತಿಲ್ಲ. ರಸಗೊಬ್ಬರ, ಔಷಧ ಕಂಪನಿಗಳು ರೈತರನ್ನು ವಂಚಿಸಲಾಗುತ್ತಿದೆ. ಅವರೆಲ್ಲಾ ಬ್ಲೇಡ್‌ ಕಂಪನಿಗಳು ಇದ್ದಂತೆ ಎಂದು ದೂರಿದರು.

ಎಂ.ಆರ್‌.ರವಿ ಮಾತನಾಡಿ, ‘ಹೋಬಳಿವಾರು ಅಗ್ರೋ ಕ್ಲಿನಿಕ್‌ ತೆರದು ತರಬೇತಿ ನೀಡಿದರೆ ಕ್ರಾಂತಿ ಮಾಡಬಹುದು. ಇದರಿಂದ ರೈತರಿಗೆ ವ್ಯವಸ್ಥಿತ ಕ್ರಮಗಳ ಬಗ್ಗೆ ಅರಿವು ಸಿಕ್ಕಂತಾಗುತ್ತದೆ. ಆಹಾರ ಸಂಸ್ಕರಣ ಘಟಕ ತೆರೆಯಲು ಸೆಪೆಸ್ಟ್‌ ಮುಂದೆ ಬಂದಿದೆ. ಕೋಲಾರ, ಮುಳಬಾಗಿಲು, ಶ್ರೀನಿವಾಸಪುರದಲ್ಲಿ ತೆರೆಯಲು ಮುಂದಾಗಿದೆ, 100 ಎಕರೆ ಜಾಗವನ್ನು ಕೆಐಎಡಿಬಿಯಿಂದ ಕಲ್ಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಮಲ್ಲೇಶ್‌ ಬಾಬು ಮಾತನಾಡಿ, ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಅಗತ್ಯ ಪ್ರಮಾಣಕ್ಕೆ ಅನುಗುಣವಾಗಿ ವಿತರಿಸಲು ಕೃಷಿ ಇಲಾಖೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರೈಲ್ವೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವ ಬಗ್ಗೆ ಅವರು ಸಭೆಯಲ್ಲಿದ್ದ ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಮುಂದಿನ ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹವಾಮಾನ ವೈಪರೀತ್ಯ ಕಾರಣ ಬೆಳೆ ವಿಮೆಯತ್ತ ಕೃಷಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಪೊಲೀಸ್‌ ವರಿಷ್ಠಾಧಿಕಾರಿಗಳಾದ ನಿಖಿಲ್‌ ಬಿ., ಶಿವಾಂಶು ಇದ್ದರು.

ದಿಶಾ ಸಭೆಯಲ್ಲಿ ಅರಣ್ಯ ಅಧಿಕಾರಿಯು ಉತ್ತರಿಸಿದ ಸಂದರ್ಭ
ಅಧಿಕಾರಿಗಳು ಬೆಂಗಳೂರು ಕಡೆ ಮುಖ ಮಾಡಿಕೊಂಡಿದ್ದರೆ ಕೆಲಸ ಆಗಲ್ಲ. ತಮ್ಮನ್ನು ಸಭೆಗಳಲ್ಲಿ ನೋಡುವುದೇ ಆಗಿದೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಸಮಸ್ಯೆ ಏನೆಂದು ಗೊತ್ತಾಗುತ್ತದೆ
ಎಂ.ಆರ್‌.ರವಿ ಜಿಲ್ಲಾಧಿಕಾರಿ

ನೀವೇನು ಹುಲಿಗಳಾ? ನಾವೇನು ಗೂಬೆಗಳಾ?

ಗಿಡ‌ಮರ ಬೆಳೆಸಬೇಕೆಂಬ ಕಾಳಜಿ ಎಲ್ಲರಿಗೂ ಇದೆ; ತಮಗೆ ‌ಮಾತ್ರ ಅಲ್ಲ. ಲೋಕೋಪಯೋಗಿ ಇಲಾಖೆ ಅನುಮತಿ ಇಲ್ಲದೆ ಹಿಂದೆ ಹೇಗೆ ಗಿಡ ಹಾಕಿದಿರಿ? ನೀವೇನು ಹುಲಿಗಳಾ? ನಾವೇನು ಗೂಬೆಗಳಾ? ಉತ್ತರ ಕೊಡದಿದ್ದರೆ‌ ಆಚೆ ಹೋಗು. ಸುಮ್ಮನೆ ಬಿಟ್ಟರೆ ನೀವು ಆಟವಾಡುತ್ತೀರಿ‌. ಇನ್ನು ನಾವು ಆಟವಾಡುತ್ತೇವೆ. ಅರಣ್ಯ‌ ಇಲಾಖೆಯವರೇನು ಬೇರೆ‌ ದೇಶದಿಂದ ಬಂದಿದ್ದಾರೆಯೇ? ಗೆರೆ‌ ದಾಟಿದರೆ‌ ಹುಷಾರ್ ಎಂದು ಶಾಸಕ ಕೊತ್ತೂರು ಮಂಜುನಾಥ್‌. ಅರಣ್ಯ ಅಧಿಕಾರಿ ಮೇಲೆ ಗದರಿದರು. ನಾವು ರಸ್ತೆಗೆ ಇಳಿದು ರೈತರನ್ನು ಎತ್ತಿಕಟ್ಟಿದರೆ ಇಡೀ ಅರಣ್ಯ ಇಲಾಖೆಯೆ ಖಾಲಿಯಾಗುತ್ತದೆ ಎಂದು ಎಚ್ಚರಿಸಿದರು.

ರೀಲ್ಸ್‌ ನೋಡುತ್ತಿದ್ದ ಕುಳಿತ ಅಧಿಕಾರಿಗಳು

ಸಂಸದ ಮಲ್ಲೇಶ್‌ ಬಾಬು ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತಿದ್ದ ದೃಶ್ಯ ಕಂಡುಬಂತು. ಕೆಲ ಅಧಿಕಾರಿಗಳು ತೂಕಡಿಸುತ್ತಿದ್ದರು. ಸಭೆಯಲ್ಲಿ ಕೆಲವೇ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಇನ್ನು ಕೆಲವರಿಂದ ಯಾವುದೇ ಮಾಹಿತಿ ಪಡೆಯಲಿಲ್ಲ. ಅಧಿಕಾರಿಗಳು ಸುಮ್ಮನೇ ಕುಳಿತು ಎದ್ದು ಹೋದರು.

ನರೇಗಾ: ಪಿಡಿಒಗಳೇ ಗುತ್ತಿಗೆದಾರರು! ‘

ನರೇಗಾ ವಿಚಾರದಲ್ಲಿ ಪಂಚಾಯಿತಿ ಪಿಡಿಒಗಳೇ ಗುತ್ತಿಗೆದಾರರು ಆಗಿದ್ದಾರೆ. ಏನು ಕೆಲಸ ಆಗಿದೆ ಯಾರು ಕಾಮಗಾರಿ ಮಾಡಬೇಕು. ಎಷ್ಟು ಬಿಲ್‌ ಮಾಡಬೇಕು ಎಂದು ಅವರಿಗೆ ಅವರೇ ಡ್ರಾ ಮಾಡಿಕೊಳ್ಳುತ್ತಾರೆ’ ಎಂದು ಕೊತ್ತೂರು ಮಂಜುನಾಥ್‌ ಹೇಳಿದರು. ಆಗ ಶಾಸಕ ವೆಂಕಟಶಿವಾರೆಡ್ಡಿ ಕಂಪ್ಯೂಟರ್‌ ಆಪರೇಟರ್‌ಗಳೇ ಕೋಟ್ಯಧಿಪತಿಗಳಾಗಿದ್ದಾರೆ. ಸಿಇಒ ಇದರತ್ತ ಗಮನ ಹರಿಸಬೇಕು ಎಂದು ಹೇಳಿದರು.

ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ

ಅರಣ್ಯ ಒತ್ತುವರಿ ನೆಪದಲ್ಲಿ ಬಡವರ ಜಮೀನಿಗೆ ಹೋಗಿ ಒಕ್ಕಲೆಬ್ಬಿಸಿ ಗಲಾಟೆ ಮಾಡುತ್ತಿದ್ದಾರೆ. ಕೂಡಲೇ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ ಜಂಟಿ ಸರ್ವೇ ನಡೆಸಿ ನಂತರ ಮುಂದುವರಿಯಲು ಆದೇಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು. ಆಗ ಅರಣ್ಯಾಧಿಕಾರಿಯು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸುಪ್ರೀಂ ಕೋರ್ಟ್ ಆದೇಶದಂತೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದರು. ಆಗ ಮಲ್ಲೇಶ್‌ ಬಾಬು ಜಂಟಿ ಸರ್ವೆ ಮುಗಿಯುವವರೆಗೆ ಒಕ್ಕಲೆಬ್ಬಿಸದಂತೆ ತೆರವು ಕಾರ್ಯಾಚರಣೆ ನಡೆಸದಂತೆ ಕಳೆದ ದಿಶಾ ಸಭೆಯಲ್ಲಿ ಸೂಚಿಸಲಾಗಿದೆ. ಅದರಂತೆ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ನೀವು ಯಾರು? ನೀವು ಬಂದಿದ್ದೇ ಗೊತ್ತಿಲ್ಲ

‘ನೀವು ಯಾರು? ನೀವು ಜಿಲ್ಲೆಗೆ ಬಂದಿದ್ದೇ ಗೊತ್ತಿಲ್ಲ. ನೀವು ಬಂದು ಎಷ್ಟು ದಿನ ಆಗಿದೆ? ನಮ್ಮನ್ನು ಭೇಟಿಯಾಗಿ ಚರ್ಚಿಸಬೇಕಲ್ಲವೇ? ಕನಿಷ್ಠ ದೂರವಾಣಿ ಮೂಲಕವಾದೂ ಪರಿಚಯಿಸಬೇಕಲ್ಲವೇ? ಇದೊಂದು ಕೆಟ್ಟ ನಡುವಳಿಕೆ’ ಎಂದು ಶಾಸಕರು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.