ಕೋಲಾರ: ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ 87.67 ಸಾಧನೆಯೊಂದಿಗೆ ಕೋಲಾರ ಜಿಲ್ಲೆಯು 2024–25ನೇ ಸಾಲಿನಲ್ಲಿ ದಾಖಲೆ ಬರೆದಿದೆ.
ಈವರೆಗೆ ಜಿಲ್ಲೆಯ ಪಂಚಾಯಿತಿಗಳಲ್ಲಿ ಒಟ್ಟು ತೆರಿಗೆ ಸಂಗ್ರಹವು ₹ 25 ಕೋಟಿ ಮೀರಿರುತ್ತಿರಲಿಲ್ಲ. ಜೊತೆಗೆ ಕರ ವಸೂಲಿಯೇ ಸವಾಲಾಗಿ ಪರಿಣಮಿಸಿತ್ತು. ಈ ಬಾರಿ ₹ 42.29 ಕೋಟಿ ಸಂಗ್ರಹಿಸಿ ಇತಿಹಾಸ ಬರೆದಿದ್ದು, ರಾಜ್ಯದಲ್ಲಿ 9ನೇ ಸ್ಥಾನ ಪಡೆದಿದೆ. ₹ 48.91 ಕೋಟಿ ಸಂಗ್ರಹದ ಬೇಡಿಕೆ ಇಟ್ಟುಕೊಂಡು ಸಮೀಪಕ್ಕೆ ಬಂದು ನಿಂತಿದೆ.
ಜಿಲ್ಲೆಯಲ್ಲಿ 154 ಗ್ರಾಮ ಪಂಚಾಯಿತಿಗಳಿದ್ದು, ಸುಮಾರು 1,550 ಗ್ರಾಮಗಳಿವೆ. ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ಹಾಗೂ ಉಪಕಾರ್ಯದರ್ಶಿ ಬಿ.ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಅಭಿಯಾನ ಹಾಗೂ ವೈಜ್ಞಾನಿಕ ವಿಧಾನದಲ್ಲಿ ತೆರಿಗೆ ಸಂಗ್ರಹ ಮೂಲಕ ಈ ಸಾಧನೆ ಮಾಡಲಾಗಿದೆ.
‘ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಯು ಇದೇ ಮೊದಲ ಬಾರಿ ಇಷ್ಟು ಸಾಧನೆ ಮಾಡಿದೆ. ಈ ಮೂಲಕ ದಾಖಲೆ ಸೃಷ್ಟಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಸಲಹೆ ಸೂಚನೆಗಳೊಂದಿಗೆ ಪಿಡಿಒಗಳು, ಸಿಬ್ಬಂದಿ ಶ್ರಮದಿಂದ ಕೊನೆಯ ಮೂರು ತಿಂಗಳಲ್ಲೇ ಶೇ 60ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ತೆರಿಗೆ ಹಣದಿಂದ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆ ರೂಪಿಸಿ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು, ಅಭಿವೃದ್ಧಿ ಕಾಮಗಾರಿಗಳಿಗೆ, ಕುಡಿಯುವ ನೀರಿಗೆ ಹಾಗೂ ಸಿಬ್ಬಂದಿ ವೇತನಕ್ಕೆ ಬಳಸಲು ಮುಕ್ತ ಅವಕಾಶ ಸಿಗಲಿದೆ. ಪಂಚಾಯಿತಿಗಳು ಆರ್ಥಿಕ ಅಭಿವೃದ್ಧಿ ಜೊತೆಗೆ ಸರ್ಕಾರದ ಮೇಲೆ ಅವಲಂಬನೆ ತಪ್ಪಲಿದೆ. ಸ್ಥಳೀಯ ಸಂಪನ್ಮೂಲಗಳಿಂದಲೇ ಪಂಚಾಯಿತಿಗಳು ನಡೆಯಬೇಕಿದ್ದು, ತೆರಿಗೆ ವಸೂಲಾತಿ ಬಹಳ ಮುಖ್ಯ’ ಎಂದರು.
ಈ ಬಾರಿಯ ಗ್ರಾಮ ಪಂಚಾಯಿತಿ ತೆರಿಗೆಯನ್ನು ಪರಿಷ್ಕರಣೆ ಮಾಡಿ ವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗಿದೆ. ಮನೆಮನೆಗೂ ತೆರಳಿ ಸಮೀಕ್ಷೆ ನಡೆಸುವುದರ ಜೊತೆಗೆ ಅಭಿಯಾನ ಕೈಗೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಟ್ಟಡ ತೆರಿಗೆ, ನಿವೇಶನ ತೆರಿಗೆ, ವಾಣಿಜ್ಯ ತೆರಿಗೆ, ಕೈಗಾರಿಕಾ ತೆರಿಗೆ, ಕುಡಿಯುವ ನೀರಿನ ಕಂದಾಯ ಹಾಗೂ ವಿವಿಧ ಸೆಸ್‌ಗಳನ್ನು ಸಂಗ್ರಹಿಸಲಾಗಿದೆ. ಹೀಗಾಗಿ, ಈ ಬಾರಿ ಹೆಚ್ಚಿನ ತೆರಿಗೆ ವಸೂಲಾತಿಯಾಗಿದೆ.
ಜಿಲ್ಲೆಯಲ್ಲಿ ಸುಮಾರು 42 ಸಾವಿರ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇನ್ನೂ ಹಲವು ಆಸ್ತಿಗಳು ಇದ್ದು, ಅವುಗಳಿಗಳಿಂದಲೂ ತೆರಿಗೆಯನ್ನು ಸಂಗ್ರಹಿಸುವ ಮೂಲಕ ₹ 50 ಕೋಟಿ ದಾಟುವ ಗುರಿ ಹೊಂದಲಾಗಿದೆ.
‘2025–26ನೇ ಸಾಲಿನಲ್ಲಿ ₹ 49.20 ಕೋಟಿ ಕರ ಬೇಡಿಕೆ ಇಟ್ಟುಕೊಳ್ಳಲಾಗಿದೆ. ಮೇ 14ರವರೆಗೆ ₹ 5.75 ಕೋಟಿ ಕರ ಸಂಗ್ರಹಿಸಲಾಗಿದೆ’ ಎಂದರು.
ಜಿಲ್ಲೆಯ ಗ್ರಾ. ಪಂಗಳಲ್ಲಿ ತೆರಿಗೆ ವಸೂಲಿ ಈ ವರೆಗೆ ₹ 25 ಕೋಟಿ ದಾಟಿರಲಿಲ್ಲ. ಈ ಬಾರಿ ₹ 42.29 ಕೋಟಿ ಸಂಗ್ರಹವಾಗಿದ್ದು ಪಂಚಾಯಿತಿಗಳು ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಇಟ್ಟಿವೆಬಿ.ಶಿವಕುಮಾರ್ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.