ADVERTISEMENT

ಕೋಲಾರ | ಕುಡಿಯುವ ನೀರು: ₹ 13.24 ಕೋಟಿ ಕ್ರಿಯಾ ಯೋಜನೆ

ಅಭಿವೃದ್ಧಿ ಕಾಮಗಾರಿಗಳ ವೇಗವರ್ಧನೆಗೆ ‌ಜಿ.ಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:47 IST
Last Updated 21 ಫೆಬ್ರುವರಿ 2026, 7:47 IST
ಕೋಲಾರದಲ್ಲಿ ಶುಕ್ರವಾರ ನಡೆದ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶುಕ್ರವಾರ ನಡೆದ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು   

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಗೆ ₹ 13.24 ಕೋಟಿ ಅಂದಾಜು ಮೊತ್ತದ ಕ್ರಿಯಾ ಯೋಜನೆ ರೂಪಿಸಿದ್ದು, ಮುಂಬರುವ ಬೇಸಿಗೆ ಗಮನದಲ್ಲಿಟ್ಟುಕೊಂಡು ಒಟ್ಟು 273 ಕಾಮಗಾರಿ ಗುರುತಿಸಲಾಗಿದೆ. ‌1,239 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 1,095 ಘಟಕ ಸುಸ್ಥಿತಿಯಲ್ಲಿದ್ದು, ಬಾಕಿ ಇರುವ ಘಟಕಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಾಮರ್ಶಿಸಿದ ಅವರು, ಬಾಕಿ ಇರುವ ಕೆಲಸಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲೆಯ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿ, ಕುಡಿಯುವ ನೀರಿನ ನಿರ್ವಹಣೆ ಹಾಗೂ ವಿವಿಧ ಜನ ಕಲ್ಯಾಣ ಯೋಜನೆಗಳ ವೇಗವರ್ಧನೆ ಮಾಡುವಂತೆ ತಾಕೀತು ಮಾಡಿದರು.

ADVERTISEMENT

2025-26ನೇ ಸಾಲಿನ ಕಂದಾಯ ವಸೂಲಾತಿಯಲ್ಲಿ ಕೋಲಾರ ತಾಲ್ಲೂಕು ಹಿಂದೆ ಉಳಿದಿದ್ದು, ಈ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದು ತಾಕೀತು ಮಾಡಿದರು.

ಮನರೇಗಾ ಯೋಜನೆಯಡಿ ಜಿಲ್ಲೆಯು ವಾರ್ಷಿಕ ಗುರಿಯ ಶೇ 104.32 ರಷ್ಟು ಸಾಧನೆ ಮಾಡಲಾಗಿದೆ. ವಾರ್ಷಿಕ ₹ 53 ಲಕ್ಷ ಮಾನವ ದಿನಗಳ ಗುರಿಯ ಎದುರು ಈಗಾಗಲೇ 55.29 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 68,074 ಕಾಮಗಾರಿಗಳ ಪೈಕಿ 55,749 ಪೂರ್ಣಗೊಂಡಿದ್ದು, ಬಾಕಿ ಇರುವ 12,325 ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಲು ಆದೇಶಿಸಿದರು.

ಗ್ರಾಮ ಪಂಚಾಯಿತಿಗಳಿಂದ ಸರ್ಕಾರಕ್ಕೆ ಜಮೆಯಾಗಬೇಕಾದ ₹ 2.13 ಕೋಟಿ ಮೊತ್ತದ ಭಿಕ್ಷುಕರ ಕರವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಯಾವುದೇ ಲೋಪವಾಗಬಾರದು. ವಿಶೇಷವಾಗಿ ಸೈನಿಕರಿಗೆ ನಿವೇಶನ ನೀಡುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಯೋಜನಾ ನಿರ್ದೇಶಕ ರವಿಚಂದ್ರನ್‌, ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ಪಿ ಡಿ ಓ ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳು ಇದ್ದರು.

ಬೀದಿನಾಯಿ ಹಾವಳಿ ತಡೆಗೆ ₹ 6 ಕೋಟಿ

ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ₹ 1 ಕೋಟಿಯಂತೆ ಜಿಲ್ಲೆಯ 6 ತಾಲ್ಲೂಕುಗಳಿಗೆ ಒಟ್ಟು ₹ 6 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 910 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಕೆ.ಜಿ.ಎಫ್ ಮತ್ತು ಮಾಲೂರುಗಳಲ್ಲಿ ಆಶ್ರಯ ತಾಣಗಳಿಗಾಗಿ ಜಾಗ ಗುರುತಿಸಲಾಗಿದೆ ಎಂದು ಡಾ.ಪ್ರವೀಣ್‌ ಪಿ.ಬಾಗೇವಾಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.