ADVERTISEMENT

ಕೋಲಾರ | ಶೇ 78ರಷ್ಟು ಆರ್ಥಿಕ ಪ್ರಗತಿ ಸಾಧನೆ: ಎಂ.ಆರ್.ರವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:30 IST
Last Updated 1 ಮಾರ್ಚ್ 2026, 6:30 IST
ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಇಲಾಖಾವಾರು ಸಾಧನೆಯನ್ನು ಪರಾಮರ್ಶಿಸಿ ಮಾತನಾಡಿದರು
ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಇಲಾಖಾವಾರು ಸಾಧನೆಯನ್ನು ಪರಾಮರ್ಶಿಸಿ ಮಾತನಾಡಿದರು   

ಕೋಲಾರ: ಜಿಲ್ಲೆಯಲ್ಲಿ 2025-26ನೇ ಸಾಲಿನ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ?ಒ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ (ಟಿಎಸ್‌ಪಿ) ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಆಶಾದಾಯಕ ಪ್ರಗತಿ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.

ಜಿಲ್ಲಾಡಳಿತ ಭವನದ ‌ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖಾವಾರು ಸಾಧನೆಯನ್ನು ಪರಾಮರ್ಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈ ಸಾಲಿಗೆ ಒಟ್ಟು ₹ 56,885 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ ಜನವರಿ ಅಂತ್ಯಕ್ಕೆ ₹ 10,186 ಲಕ್ಷಗಳು ವೆಚ್ಚವಾಗುವ ಮೂಲಕ ಶೇ 78ರಷ್ಟು ಪ್ರಗತಿ ದಾಖಲಾಗಿದೆ. ಎಸ್‌ಸಿಪಿ ಯೋಜನೆಯಲ್ಲಿ ₹ 48,424 ಲಕ್ಷ ಹಂಚಿಕೆಯಲ್ಲಿ ₹ 8,552 ಲಕ್ಷ ವೆಚ್ಚವಾಗಿದ್ದು, ಶೇ 76 ಪ್ರಗತಿ ಆಗಿದೆ. ಟಿಎಸ್‌‍ಪಿ ಯೋಜನೆಯಲ್ಲಿ ₹ 8,461 ಲಕ್ಷಗಳ ಹಂಚಿಕೆಯಲ್ಲಿ ₹ 1,634 ಲಕ್ಷ ವೆಚ್ಚವಾಗಿದ್ದು, ಶೇ 92 ಪ್ರಗತಿ ಆಗಿದೆ ಎಂದರು.

ADVERTISEMENT

ಕೃಷಿ ಇಲಾಖೆಯಲ್ಲಿ ₹ 842.15 ಲಕ್ಷಗಳ ಹಂಚಿಕೆಯಲ್ಲಿ ₹ 488.33 ಲಕ್ಷ ವೆಚ್ಚವಾಗಿದ್ದು, ಶೇ 85ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ₹ 10,901 ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ₹ 1,070.57 ಲಕ್ಷಗಳ ಗುರಿಯಲ್ಲಿ ₹ 589.42 ಲಕ್ಷ ವೆಚ್ಚವಾಗಿ ಶೇ 88ರಷ್ಟು ಪ್ರಗತಿ ಕಂಡಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಹಂಚಿಕೆಯಾದ ₹ 3,050 ಲಕ್ಷಗಳಲ್ಲಿ ₹ 2,629.64 ಲಕ್ಷಗಳನ್ನು ವೆಚ್ಚ ಮಾಡುವ ಮೂಲಕ ಶೇ 100ರಷ್ಟು ಸಾಧನೆ ಮಾಡಲಾಗಿದೆ. ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ₹ 41,071.36 ಲಕ್ಷಗಳ ಬೃಹತ್ ಹಂಚಿಕೆಯಲ್ಲಿ ಪ್ರಗತಿ ಚಾಲನೆಯಲ್ಲಿದ್ದು, ಆಯ್ದ ವಿಭಾಗಗಳಲ್ಲಿ ಶೇ 100ರಷ್ಟು ವೆಚ್ಚ ದಾಖಲಾಗಿದೆ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ₹ 1,669.15 ಲಕ್ಷಗಳ ಹಂಚಿಕೆಯಲ್ಲಿ ₹ 1,582.46 ಲಕ್ಷ ವೆಚ್ಚವಾಗಿ ಶೇ 96ರಷ್ಟು ಪ್ರಗತಿ ಸಾಧಿಸಿದೆ ಎಂದು ಪ್ರಶಂಸಿಸಿದರು.

ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಎಲ್ಲಾ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಶೇ 100ರಷ್ಟು ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಶೇಷವಾಗಿ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡಬಾರದೆಂದು ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.