ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಗೌರಿ ಹಬ್ಬದ ಸಡಗರದ ಜೊತೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಂತಿಮ ಸಿದ್ಧತೆಯಲ್ಲಿ ಜನತೆ ತೊಡಗಿದ್ದರು. ಯುವಕರಂತೂ ಗಣಪನನನ್ನು ಸ್ವಾಗತಿಸಲು ಬಡಾವಣೆಯ ಗಲ್ಲಿ ಗಲ್ಲಿಯಲ್ಲಿ ಮಂಟಪ ನಿರ್ಮಿಸಿಕೊಂಡು ಸಜ್ಜಾಗಿದ್ದಾರೆ. ಅವರ ಸಂಭ್ರಮ, ಸಡಗರ, ಹುರುಪು ಮತ್ತಷ್ಟು ಜೋರಾಗಿದೆ.
ಬುಧವಾರ ನಡೆಯುವ ಗಣೇಶನ ಹಬ್ಬಕ್ಕೆ ಗಣೇಶ ಮೂರ್ತಿ ಖರೀದಿಯಲ್ಲಿ ತೊಡಗಿದ್ದರು. ಪ್ರತಿಷ್ಠಾಪನೆಗೆ ಬೇಕಾದ ಅಲಂಕಾರಿಕಾ ವಸ್ತುಗಳು, ವಿದ್ಯುತ್ ದೀಪಗಳು, ಬಂಟಿಂಗ್ಸ್‌ಗಳು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಯುವಕರು ತೊಡಗಿದ್ದರು.
ಗಣೇಶ ಮೂರ್ತಿ ಮಾರಾಟಕ್ಕೆ ಈ ಬಾರಿಯೂ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ವಿವಿಧ ಬಡಾವಣೆಗಳ ಮುಖ್ಯರಸ್ತೆಗಳು, ನಗರದ ಬಸ್ ನಿಲ್ದಾಣದ ಪಕ್ಕದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗ, ಟೇಕಲ್ ರಸ್ತೆಯಲ್ಲೂ ಗಣಪನ ಮೂರ್ತಿ ಮಾರಾಟ ಜೋರಾಗಿ ನಡೆದಿದೆ.
ಪರಿಸರ ರಕ್ಷಣೆಗೆ ಜನರು ಒತ್ತು ನೀಡಿದ್ದು, ಪರಿಸರ ಸ್ನೇಹಿ ಗಣಪನನ್ನೇ ಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದು ಕಂಡುಬಂತು. ಪಿಒಪಿಯಿಂದ ವಿಗ್ರಹ ತಯಾರಿಸಲಾಗಿದೆಯೇ, ಜೇಡಿ ಮಣ್ಣು ಅಥವಾ ಪೇಪರ್‌ನಲ್ಲಿ ತಯಾರಿಸಲಾಗಿದೆ ಎಂಬುದನ್ನು ಜನರು ವಿಚಾರಿಸುತ್ತಿದ್ದರು.
ಹೀಗಾಗಿ, ಜೇಡಿ ಮಣ್ಣಿನಿಂದ ಮಾಡಿದ ಮತ್ತು ಬಣ್ಣ ಲೇಪಿತ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂತು.
₹ 200 ರಿಂದ 40 ಸಾವಿರದವರೆಗಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಣ್ಣಿನ ಗಣಪತಿಯ ಸಣ್ಣ ಪ್ರತಿಮೆಗಳಿಗೆ ₹ 200ರಿಂದ ಆರಂಭವಾಗಿ 12 ಅಡಿ ಎತ್ತದ ಅಲಂಕಾರಿಕ ಮೂರ್ತಿಗಳು ₹ 40 ಸಾವಿರವರೆಗೆ ಮಾರಾಟವಾಗುತ್ತಿವೆ. ಮೂರ್ತಿ ತಯಾರಕರು, ಕಾರ್ಮಿಕರ ವೆಚ್ಚ ಹೆಚ್ಚಳ ಕಾರಣದಿಂದ ಮೂರ್ತಿಗಳ ಬೆಲೆಯು ಗಗನಕ್ಕೇರಿದೆ ಎನ್ನುತ್ತಾರೆ.
ನಗರದಲ್ಲಿ ಕೆಲವೆಡೆ ಗುಪ್ತವಾಗಿ ಪಿಒಪಿ ಮೂರ್ತಿಗಳು ಮಾರಾಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗಣೇಶ ಮೂರ್ತಿಗಳನ್ನು ಪರಿಶೀಲಿಸಲಾಗಿದೆ. ಅದೇ ಕೆಲಸ ಇನ್ನುಳಿದ ಕಡೆ ನಡೆದಿಲ್ಲ ಎಂಬುದು ಜೂನಿಯರ್ ಕಾಲೇಜು ಮೈದಾನದಲ್ಲಿನ ವ್ಯಾಪಾರಿಗಳ ದೂರು.
ನಗರಸಭೆ ಅಧಿಕಾರಿಗಳು ಶಿಕ್ಷಣ ಇಲಾಖೆಯ ಮೈದಾನದ ಆವರಣದಲ್ಲಿ ಮೂರ್ತಿಗಳ ಮಾರಾಟಕ್ಕೆ ಸ್ಥಳ ಬಾಡಿಗೆಯಂತೆ ಪ್ರತಿ ಅರ್ಜಿದಾರರಿಂದ ₹ 2,500 ಶುಲ್ಕ ಪಡೆದಿದೆ.
‘ನಾವು ಸುಮಾರು 30 ವರ್ಷಗಳಿಂದ ಗಣಪತಿ ವಿಗ್ರಹ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿದ್ದೇವೆ. ಆದರೆ, ಈ ಬಾರಿ ವಿಗ್ರಹಗಳ ದರ ಹೆಚ್ಚಿದೆ. ಕಾರಣ ಕಾರ್ಮಿಕರ ಕೂಲಿ. ತರೇವಾರಿ ವಿಗ್ರಹಗಳು ನಮ್ಮಲ್ಲಿವೆ. ನಮಗೆ ಗಣೇಶನ ವಿಗ್ರಹಗಳೇ ಬದುಕು ಕಲ್ಪಿಸಿಕೊಟ್ಟಿವೆ’ ಎಂದು ವ್ಯಾಪಾರಿಗಳು ಹೇಳಿದರು.
ಪೂಜೆ ಸಲ್ಲಿಕೆ; ಬಾಗಿನ ಅರ್ಪಣೆ:
ನಗರದ ಮನೆಗಳಲ್ಲಿ ಮಂಗಳವಾರ ಗೌರಿ ಹಬ್ಬದ ಸಂಭ್ರಮ ನೆಲೆಸಿತ್ತು. ಮಹಿಳೆಯರು ಬೆಳಿಗ್ಗೆಯಿಂದಲೇ ಮನೆಗಳಲ್ಲಿ ಗೌರಿ ವಿಗ್ರಹ ಇಟ್ಟು ಪೂಜೆ ಮಾಡಿ ನೆರೆಹೊರೆಯ ಮಹಿಳೆಯರನ್ನು ಆಹ್ವಾನಿಸಿ ಬಾಗಿನ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾಮೂಹಿಕವಾಗಿ ಸ್ವರ್ಣಗೌರಿ ವ್ರತ ಆಚರಿಸಿದರು. ಕೆಲ ದೇಗುಲಗಳಲ್ಲಿಯೂ ಗೌರಿ ಮೂರ್ತಿ ಇಟ್ಟು ಶೃಂಗರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.