ADVERTISEMENT

ಕೋಲಾರ | ಅವ್ಯವಸ್ಥೆಯ ಅಗರ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:28 IST
Last Updated 17 ಸೆಪ್ಟೆಂಬರ್ 2025, 5:28 IST
ಕೆಜಿಎಫ್‌ ಕೋರಮಂಡಲ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು
ಕೆಜಿಎಫ್‌ ಕೋರಮಂಡಲ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು   

ಕೆಜಿಎಫ್‌: ಸ್ವಚ್ಛತೆ ಇಲ್ಲದ ತರಗತಿಗಳು, ಸಗಣಿಯಿಂದ ತುಂಬಿದ ಕಾರಿಡಾರ್, ಸ್ಚಚ್ಛಂದವಾಗಿ ತಿರುಗಾಡುವ ನಾಯಿಗಳು, ದುರ್ವಾಸನೆ ಬೀರುವ ಶೌಚಾಲಯ.

ಇದು ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಸ್ಥಿತಿ. 

ಕೋರಮಂಡಲದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಐದು ವಿಭಾಗದಲ್ಲಿ ತರಗತಿಗಳು ನಡೆಯುತ್ತಿವೆ. ಮೈನಿಂಗ್‌ ವಿಭಾಗಕ್ಕೆ ಅತ್ಯಂತ ಬೇಡಿಕೆ ಇದೆ. ಉತ್ತರ ಕರ್ನಾಟಕದ ಬಹುತೇಕ ವಿದ್ಯಾರ್ಥಿಗಳು ಗಣಿ ಶಿಕ್ಷಣ ತರಬೇತಿಗಾಗಿ ಕಾಲೇಜಿಗೆ ದಾಖಲಾಗಿದ್ದಾರೆ. ಇಂತಹ ವಿದ್ಯಾಕೇಂದ್ರದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ADVERTISEMENT

ಸುಮಾರು ಐನೂರು ವಿದ್ಯಾರ್ಥಿಗಳಿರುವ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ದುರ್ವಾಸನೆ ಬೀರುವ ಶೌಚಾಲಯವನ್ನು ವಿದ್ಯಾರ್ಥಿನಿಯರು ವಿಧಿಯಿಲ್ಲದೆ ಉಪಯೋಗಿಸಬೇಕಾಗಿದೆ. ಆದರೆ, ಬಾಲಕರಿಗೆ ಕಾಲೇಜು ಸಮೀಪದ ಪೊದೆಗಳ ಸಂಧಿಯೇ ಶೌಚಾಲಯವಾಗಿ ಪರಿವರ್ತನೆಯಾಗಿದೆ. 

ವಿದ್ಯಾರ್ಥಿಗಳು ಆರೋಪಿಸಿರುವಂತೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಾದರೂ ಕಡ್ಡಾಯವಾಗಿ ಸಮವಸ್ತ್ರ ಖರೀದಿಗೆ ಮೂರು ಸಾವಿರ ಕೊಡಬೇಕು. ಬ್ಲೂಬುಕ್‌ ಬೆಲೆ ಮಾರುಕಟ್ಟೆಯಲ್ಲಿ ಹತ್ತು ರೂಪಾಯಿ, ಆದರೆ, ಕಾಲೇಜಿನ ಸಿಬ್ಬಂದಿ ಇಪ್ಪತ್ತು ರೂಪಾಯಿಗೆ ಮಾರಾಟ ಮಾಡುತ್ತಾರೆ. ಎರಡು ಪೀರಿಯಡ್‌ ಪಾಠ ಮಾಡಬೇಕಾದ ಪ್ರಾಂಶುಪಾಲರು ಕಾಲೇಜಿಗೆ ಬರುವುದೇ ಅಪರೂಪ. ಬಂದರೂ ತರಗತಿಗೆ ಬರುವುದಿಲ್ಲ. ಉಪನ್ಯಾಸಕರ ಹುಟ್ಟುಹಬ್ಬದ ಪಾರ್ಟಿಗಳು ತರಗತಿಯಲ್ಲಿಯೇ ನಡೆಯುತ್ತವೆ. ಕೇಕ್‌ ಮತ್ತಿತರ ವಸ್ತುಗಳನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ಕೂಡ ವಿದ್ಯಾರ್ಥಿಗಳದ್ದೇ. ಶಾಲಾ ಅವಧಿಯಲ್ಲಿ ಅಂಗಡಿಗೆ ಹೋಗಿ ಪಾರ್ಟಿಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಬೇಕೆಂದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುತ್ತಿರುವ ಹಲವು ಅವಾಂತರಗಳನ್ನು ಸಾಕ್ಷಿ ಸಮೇತ ವಿವರಿಸುತ್ತಾರೆ.

ವಿದ್ಯಾರ್ಥಿಗಳ ಗುರುತಿನ ಚೀಟಿಗೆ ಫೋಟೊ ತೆಗೆದುಕೊಂಡು ತಲಾ ಐವತ್ತು ರೂಪಾಯಿ ವಸೂಲಿ ಮಾಡಲಾಗಿದೆ. ಎರಡು ವರ್ಷದಿಂದ ಐಡಿ ಕಾರ್ಡ್‌ ಕೊಟ್ಟೇ ಇಲ್ಲ ಎಂದು ವಿದ್ಯಾರ್ಥಿಗಳು ನೇರವಾಗಿ ಆರೋಪಿಸಿದ್ದಾರೆ. 

ಅತ್ಯಂತ ಶಿಸ್ತುಬದ್ಧವಾಗಿರಬೇಕಾದ ಸಂಸ್ಥೆಯಲ್ಲಿ ಅಶಿಸ್ತು ಎದ್ದು ಕಾಣುತ್ತಿದೆ. ಬೈಕ್‌ನಲ್ಲಿ ಹೆಲ್ಮೆಟ್‌ ಇಲ್ಲದೆ ಮೂರು ನಾಲ್ಕು ವಿದ್ಯಾರ್ಥಿಗಳು ಬರುವುದು ಸಾಮಾನ್ಯ ಸಂಗತಿಯಾಗಿದೆ. ಇದುವರೆವಿಗೂ ಅವರಿಗೆ ಕಾಲೇಜಿನ ಸಿಬ್ಬಂದಿ ಸಂಚಾರ ನಿಯಮದ ಪಾಠ ಹೇಳಿಲ್ಲ. ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ನೂರಾರು ಕಿ.ಮೀ ದೂರದಿಂದ ವಿದ್ಯಾಭ್ಯಾಸಕ್ಕೆಂದು ಕೆಜಿಎಫ್‌ಗೆ ಕಳಿಹಿಸಿರುವ ಪೋಷಕರು ಕಾಲೇಜಿನ ಅವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ ಹಾಗೂ ಅಶಿಸ್ತನ್ನು ಕಂಡು  ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆತಂಕಗೊಂಡಿದ್ದಾರೆ.

ಸಗಣಿ ತುಂಬಿದ ಕಾರಿಡಾರ್‌
ಶೌಚಕ್ಕಾಗಿ ಪೊದೆಗಳತ್ತ ಹೋಗುತ್ತಿರುವ ವಿದ್ಯಾರ್ಥಿಗಳು
ಕಾಲೇಜು ಸಮಸ್ಯೆ ಪರಿಕಾರಕ್ಕೆ ಶಾಸಕಿಗೆ ಮನವಿ ಕಾಲೇಜಿನಲ್ಲಿ ತರಗತಿ ಕೋಣೆಗಳು ಡಿ ಗ್ರೂಪ್‌ ಸಿಬ್ಬಂದಿ ಮತ್ತು ಇನ್‌ಸ್ಟ್ರಕ್ಟರ್‌ ಕೊರತೆ ಇದೆ. ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣ ತುರ್ತಾಗಿ ಆಗಬೇಕಾಗಿದೆ. ಎರಡು ಬಾರಿ ಕಾಲೇಜಿಗೆ ಆಗಮಿಸಿದ್ದ ಶಾಸಕಿ ರೂಪಕಲಾ ಅವರಿಗೆ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿಸಿ ಪರಿಹಾರ ಒದಗಿಸುವಂತೆ ಕೋರಲಾಗಿದೆ. ಸಮವಸ್ತ್ರ ವೆಂಡರ್‌ ಕಾಲೇಜಿಗೆ ಬರುತ್ತಾರೆ. ಇಷ್ಟವಿದ್ದ ವಿದ್ಯಾರ್ಥಿಗಳು ಅವರಿಂದ ಖರೀದಿ ಮಾಡಬಹುದು.
ಗೀತಾಂಜಲಿ ಪ್ರಾಂಶುಪಾಲೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.