
ಕೋಲಾರದಲ್ಲಿ ಶನಿವಾರ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎನ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಪಾಲ್ಗೊಂಡಿದ್ದರು
ಕೋಲಾರ: ಎಲ್ಲಿ ನೋಡಿದರಲ್ಲಿ ಭಗವಧ್ವಜಗಳ ಹಾರಾಟ, ಕೇಸರಿ ಬಂಟಿಂಗ್ಸ್, ನಗರವಿಡೀ ಕೇಸರಿಮಯ ವಾತಾವರಣ. ಜೊತೆಗೆ ವಂದೇ ಮಾತರಂ, ಜೈ ಭಾರತ ಮಾತಕೀ ಜೈ ಘೋಷಣೆ.
ನಗರದಲ್ಲಿ ಹಿಂದೂ ಸಮಾಜೋತ್ಸವ ಪ್ರಯುಕ್ತ ಶನಿವಾರ ನಡೆದ ಶೋಭಾಯಾತ್ರೆಯಲ್ಲಿ ಕಂಡುಬಂದ ದೃಶ್ಯಗಳಿವು.
ನಗರದ ವಿವಿಧ ರಸ್ತೆಗಳಲ್ಲಿ ಸಾಗಿ ಬಂದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಿಡಿದ ಯುವಕರ ಉತ್ಸಾಹಕ್ಕೆ ನೂರಾರು ತಮಟೆ ಕಲಾವಿದರು, ಭಜನೆ, ನೃತ್ಯ ಕಲಾವರಿದರು ಜೊತೆ ನೀಡಿದರು.
ನಗರದ ಜೂನಿಯರ್ ಕಾಲೇಜು ಮೈದಾನದ ಮುಂಭಾಗ ಆರಂಭಗೊಂಡ ಈ ಭವ್ಯ ಮತ್ತು ಬೃಹತ್ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.
ಸಾಂದೀಪನಿ ಆಶ್ರಯದ ದತ್ತಪಾದಾನಂದ ಶ್ರೀ, ನಾಗಲಾಪುರ ಮಠದ ಶ್ರೀಗಳು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.
'ಹಿಂದೂ ನಾವೆಲ್ಲಾ ಒಂದು' ಎಂಬ ಜಯಘೋಷ ಮುಗಿಲು ಮುಟ್ಟಿತ್ತಲ್ಲದೇ; ಕೇಸರಿ ಧ್ವಜಗಳು ಮೆರವಣಿಗೆಯಲ್ಲಿ ಹಾರಾಡಿದವು.
ವಾಲ್ಮೀಕಿ ವೃತ್ತದ ಮೂಲಕ ಹಾದು ಹೊರಟ ಶೋಭಾಯಾತ್ರೆ, ಮೆಕ್ಕೆ ವೃತ್ತ, ನಲ್ಲಗಂಗಮ್ಮ ದೇವಾಲಯ ವೃತ್ತ, ಕಾಳಮ್ಮಗುಡಿ ರಸ್ತೆ, ಹೊಸ ಬಸ್ ನಿಲ್ದಾಣ, ಶಾರದ ಚಿತ್ರಮಂದಿರ, ದೊಡ್ಡಪೇಟೆ ರಸ್ತೆ, ಚಂಪಕ್ ವೃತ್ತ, ಎಂ.ಜಿ ರಸ್ತೆ ಮೂಲಕ ಹಾದು ಸಮಾಜೋತ್ಸವದ ವೇದಿಕೆ ಕಾರ್ಯಕ್ರಮ ನಡೆದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು.
ಮೆರವಣಿಗೆಗೆ ದಾರಿಯುದ್ದಕ್ಕೂ ಹೂಮಳೆ ಸುರಿಸುವ ಮೂಲಕ ನಾಗರಿಕರು ಬೆಂಬಲ ಸೂಚಿಸಿದರು. ನಗರದ ಪ್ರತಿಯೊಂದು ರಸ್ತೆಯನ್ನು ಕೇಸರಿ ಬಂಟಂಗ್‌ಗಳಿಂದ ಅಲಂಕರಿಸಲಾಗಿತ್ತು. ಪ್ರತಿ ಮುಖ್ಯ ರಸ್ತೆಯ ಆರಂಭದಲ್ಲೂ ಬೃಹತ್ ಮಹಾದ್ವಾರ ನಿರ್ಮಿಸಿ ಸ್ವಾಗತ ಕೋರಲಾಯಿತು.
ಸಾಗರೋಪಾದಿಯಲ್ಲಿ ಸಾಗಿ ಬಂದ ಮೆರವಣಿಗೆಯಲ್ಲಿ ನೂರಾರು ಮಂದಿ ತಮಟೆ ಕಲಾವಿದರು ತಮ್ಮ ಕಲಾ ಪ್ರೌಢಿಮೆ ಪ್ರದರ್ಶಿಸಿದ್ದು, ಮೆರವಣಿಗೆಯಲ್ಲಿದ್ದವರು ಕುಣಿದು ಕುಪ್ಪಳಿಸಲು ಕಾರಣವಾಯಿತು.
ಇದರ ಜತೆಗೆ ಗಾರುಡಿ ಗೊಂಬೆ, ಕೋಲು ಕುಣಿತರ, ವಿವಿಧ ವೇಷಧಾರಿ ಚಿಣ್ಣರು, ಸೈನಿಕ ವೇಷಧಾರಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ-100 ವರ್ಷಗಳ ಸಂಭ್ರಮದ ಸ್ತಬ್ಧಚಿತ್ರ ಸಾಗಿ ಬಂದವು.
ಮಂಗಳೂರಿನ ಅಶೋಕ್ ನಾಯಕ್ ನೇತೃತ್ವದ ಪುಟ್ಟ ಮಕ್ಕಳ ಭಜನಾ ನೃತ್ಯ ತಂಡ ಮನಮುಟ್ಟುವಂತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು, ಜನತೆ ಪುಷ್ಪವೃಷ್ಟಿಯೊಂದಿಗೆ ಸ್ವಾಗತ ಕೋರಿ ತಮ್ಮ ಬೆಂಬಲ ಸೂಚಿಸಿದರು.
ಶೋಭಾಯಾತ್ರೆಯಲ್ಲಿ ತಾಯಿ ಭಾರತಮಾತೆ ಹಾಗೂ ಅಲಂಕೃತ ಜೋಡೆತ್ತಿನ ಗಾಡಿ ಎಲ್ಲರ ಗಮನ ಸೆಳೆಯಿತು. ಇದರ ನಡುವೆ ಮುನೇಶ್ವರ ನಗರದ ನಗರಸಭಾ ಸದಸ್ಯ ಗುಣಶೇಖರ್ ಅವರು ತಯಾರಿಸಿದ್ದ ರಾಮಮಂದಿರದ ಪ್ರತಿಕೃತಿ ವಿಶಿಷ್ಟವಾಗಿತ್ತು. ಸುಮಂಗಲಿಯರು ಪೂರ್ಣಕುಂಭ ಕಳಶಗಳೊಂದಿಗೆ ಮೆರವಣಿಗೆಯಲ್ಲಿ ಗಮನ ಸೆಳೆದರು.
ಮಕ್ಕಳು ಶ್ರೀರಾಮನ ಭಜನೆಯೊಂದಿಗೆ ಶೋಭಾಯಾತ್ರೆಯಲ್ಲಿ ಮುಂದೆ ಸಾಗಿದರು. ಚಂಡಿವಾದ್ಯ, ವೀರಗಾಸೆ, ಕೋಲಾಟ, ತಮಟೆ ವ್ಯಾದದ ಕಲಾ ತಂಡಗಳು ಹಾಗೂ ನಗರದೇವತೆ ಕೋಲಾರಮ್ಮ ದೇವಿ ಉತ್ಸವ ಮೂರ್ತಿ ಹಾಗೂ ಅಯೋಧ್ಯೆಯ ಶ್ರೀರಾಮನ ಮೂರ್ತಿ ಶೋಭಾಯಾತ್ರೆಗೆ ಮೆರಗು ತಂದವು.
ದಾರಿಯುದ್ದಕ್ಕೂ ಹಲವಾರು ಮಂದಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಅಲ್ಲಲ್ಲಿ ನಿಂಬೆ ರಸ, ಜ್ಯೂಸ್ ವಿತರಿಸಿದರು. ಇದರ ನಡುವೆ ಆಯೋಜಕರೇ ನಗರದ ಸರ್ವಜ್ಞ ಪಾರ್ಕ್‌ನ ಫುಡ್ ಕೋರ್ಟ್ ಮುಂಭಾಗ ರೈಸ್ ಬಾತ್ ಮಾಡಿಸಿದ್ದು, ಹಸಿದವರ ಹಸಿವು ನೀಗಿಸಲು ನೆರವಾದರು.
ಶೋಭಾಯಾತ್ರೆಯಲ್ಲಿ ಸಂಸದ ಮಲ್ಲೇಶಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್, ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ವೆಂಕಟೇಶ್, ಡಿ.ವಿ.ಹರೀಶ್, ಆರ್ ಎಸ್ ಎಸ್‌ನ ಪ್ರಶಾಂತ್, ಡಾ.ಶಂಕರ್‌ನಾಯಕ್, ಡಾ.ಜನಾರ್ಧನ್, ಬಜರಂಗದಳದ ಬಾಲಾಜಿ, ಬಾಬು, ಅಪ್ಪಿ, ವಿಜಯಕುಮಾರ್, ತಿಮ್ಮರಾಯಪ್ಪ, ಮಮತಾ, ಕುರ್ಕೆ ರಾಜೇಶ್ವರಿ, ಬಾಲಾಜಿ, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಜೊತೆಗೆ ನಗರದ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.