ADVERTISEMENT

ಕೋಲಾರ: ಒಳಮೀಸಲಾತಿ ವರದಿ ಜಾರಿಗೆ ಆಗ್ರಹ

35 ವರ್ಷಗಳ ದಲಿತ ಸಮುದಾಯದ ಹೋರಾಟಕ್ಕೆ ನ್ಯಾಯ ದೊರಕಿಸಿ: ಕೋಟಿಗಾನಹಳ್ಳಿ ರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:57 IST
Last Updated 14 ಆಗಸ್ಟ್ 2025, 7:57 IST
ಕೋಲಾರದಲ್ಲಿ ಬುಧವಾರ ಪತ್ರಿಗೋಷ್ಠಿಯಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ, ಮುಖಂಡರಾದ ರಾಜೇಂದ್ರ, ಎಸ್‌.ಚಿನ್ನ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಬುಧವಾರ ಪತ್ರಿಗೋಷ್ಠಿಯಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ, ಮುಖಂಡರಾದ ರಾಜೇಂದ್ರ, ಎಸ್‌.ಚಿನ್ನ ಪಾಲ್ಗೊಂಡಿದ್ದರು   

ಕೋಲಾರ: ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳ ನೈಜ ದತ್ತಾಂಶಕ್ಕಾಗಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಏಕಸದಸ್ಯ ಆಯೋಗ ಸಿದ್ಧಪಡಿಸಿ ಸಲ್ಲಿಸಿರುವ ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಬೇಗನೇ ಜಾರಿ ಮಾಡಬೇಕು ಎಂದು ಸಾಹಿತಿ, ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಆಗ್ರಹಿಸಿದರು.

ನಗರದ ಪತ್ರಕರ್ತ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾಗಮೋಹನದಾಸ್‌ ಅವರು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದರೂ ವಿಳಂಬ ಮಾಡುವ ಸರ್ಕಾರದ ಧೋರಣೆ ಸರಿ ಅಲ್ಲ. ಆ.16 ರಂದು ನಡೆಯಲಿರುವ ಒಳಮೀಸಲಾತಿ ಸಂಬಂಧಿಸಿದ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು. ಈ ಮೂಲಕ 35 ವರ್ಷಗಳ ದಲಿತ ಸಮುದಾಯದ ಹೋರಾಟಕ್ಕೆ ನ್ಯಾಯ ದೊರಕಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.

‘16ರಂದು ತೆಗೆದುಕೊಳ್ಳುವ ನಿರ್ಣಯಕ್ಕೆ ಜನಪ್ರತಿನಿಧಿಗಳು ನೊಂದವರ ಪರವಾಗಿ ಮಾತನಾಡಬೇಕು. ಒಳಮೀಸಲಾತಿಗೆ ಸಂಬಂಧಿಸಿದಂತೆ 35 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಕೇವಲ 15 ನಿಮಿಷಗಳ ಚರ್ಚೆಯಲ್ಲಿ ಮುಗಿಸುವುದ ಸರಿ ಅಲ್ಲ’ ಎಂದರು.

ADVERTISEMENT

‘ನಾಗಮೋಹನದಾಸ್ ಸಂವಿಧಾನ ಅಧ್ಯಯನ ಮಾಡಿರುವ ಪರಿಣಿತರಾಗಿದ್ದು, ಅವರು ನೀಡಿರುವ ವರದಿ ಶೇ 99 ರಷ್ಟು ಪ್ರಾಮಾಣಿಕವಾಗಿದೆ, ನ್ಯಾಯಯುತವಾಗಿದೆ ಎಂಬುದು ಪ್ರಜ್ಞಾವಂತರ ಬಳಗದ ನಿರೀಕ್ಷೆ. ಏನಾದರೂ ನ್ಯೂನತೆಗಳು ಇದ್ದರೆ ಜಾರಿ ಬಳಿಕ ಸರಿಪಡಿಸಿಕೊಳ್ಳಬಹುದು. ಆದರೆ, ಉಪಸಮಿತಿ ರಚನೆ ಎಂಬ ವಿಳಂಬ ಧೋರಣೆ ತಂತ್ರ ಅನುಸರಿಸಬಾರದು’ ಎಂದು ಮನವಿ ಮಾಡಿದರು.

‘ಇನ್ನೂ ವರದಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಸೋರಿಕೆ ಆಗಿದೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಈಗ ಕಾಣಿಸಿಕೊಳ್ಳುತ್ತಿರುವ ವಿರೋಧ ಕೇವಲ ಒಂದು ಜಾತಿಯ ಬಲಗೈ ಪಂಗಡದಿಂದ ಬರುತ್ತಿದೆ, ‘ಯಾರು ಇಲ್ಲಿಯವರೆಗೆ ಚೆನ್ನಾಗಿ ಊಟ ಮಾಡಿದ್ದಾರೋ ಅವರ ತಟ್ಟೆಯಿಂದ ಏನೂ ಇಲ್ಲದಿರುವ ಮತ್ತೊಬ್ಬರಿಗೆ ಒಂದು ತುತ್ತು ಅನ್ನದ ಪಾಲು ಕೊಡಿ’ ಎಂಬುದು ಅಂಬೇಡ್ಕರ್ ಅವರ ಆಶಯ. ಚಾರಿತ್ರಿಕವಾಗಿ ವಂಚಿತರಾದವರಿಗೆ ಅವರ ಪಾಲು ಅವರಿಗೆ ತಲುಪಬೇಕು. ಮೀಸಲಾತಿ ಕಲ್ಪಿಸಲು ಸಂಖ್ಯೆಯೊಂದೇ ಮಾನದಂಡವಾಗಬಾರದು, ಅದಕ್ಕೂ ಮೇಲಿನ ಬೇರೆ ಮಾನದಂಡಗಳನ್ನು ಅನುಸರಿಸಬೇಕೆಂದು ಅಂಬೇಡ್ಕರ್ ಹೇಳಿದ್ದನ್ನು ಅವರ ಅನುಯಾಯಿಗಳು ಸ್ವಲ್ಪ ಯೋಚನೆ ಮಾಡಬೇಕು. ಶೋಷಿತರಿಗೆ ನ್ಯಾಯ ಸಿಗಬೇಕು’ ಎಂದು ಹೇಳಿದರು.

‘ವರದಿ ಜಾರಿಗೆ ವಿಳಂಬ ನೀತಿ ಅನುಸರಿಸಿದರೆ ಅದು ವಂಚನೆಯಾಗುತ್ತದೆ. ಆಗ ಮತ್ತೆ ಹೊಸ ಮಾದರಿಯ ಹೋರಾಟಕ್ಕೆ ಈ ಸಮುದಾಯಗಳು ಅಣಿಯಾಗುತ್ತವೆ’ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಮಾತನಾಡಿ, ‘ನಾಗಮೋಹನದಾಸ್‌ ಅವರ ವರದಿಯನ್ನು ಸರ್ಕಾರ ಬೇಗನೇ ಜಾರಿಗೊಳಿಸಬೇಕು. ಕಾನೂನು ತಜ್ಞರಾಗಿರುವ ಅವರು ಅಧ್ಯಯನ ಮಾಡಿಯೇ ವರದಿ ಸಲ್ಲಿಸಿದ್ದಾರೆ’ ಎಂದರು.

‘ಈಗಾಗಲೇ ಸುಪ್ರಿಂ ಕೋರ್ಟ್ ಸರ್ಕಾರಕ್ಕೆ ಒಳಮೀಸಲಾತಿ ಜಾರಿ ಮಾಡಲು ನಿರ್ದೇಶನ ನೀಡಿದ್ದು, ವಿಳಂಬ ಧೋರಣೆ ಸಲ್ಲದು. ಇಲ್ಲದಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತಾಗುತ್ತದೆ. ಮೊದಲು ವರದಿ ಬಿಡುಗಡೆ ಮಾಡಬೇಕು, ವಿಂಗಡಣೆ ಅವೈಜ್ಞಾನಿಕವಾಗಿದ್ದಲ್ಲಿ ಅಥವಾ ಏನಾದರೂ ಲೋಪ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ’ ಎಂದು ಹೇಳಿದರು.

ನಾನು 50 ವರ್ಷಗಳಿಂದ ದಲಿತ ಸಮುದಾಯದ ನೋವಿಗೆ ಧ್ವನಿಯಾಗಿ ನಿಂತ ಒಬ್ಬ ಬರಹಗಾರ. ಇಂದು ಒಳಮೀಸಲಾತಿ ಬೇಗುದಿಯ ಕುರಿತು ಅನಿವಾರ್ಯವಾಗಿ ಮಾತನಾಡಬೇಕಾಗಿದೆ
ಕೋಟಿಗಾನಹಳ್ಳಿ ರಾಮಯ್ಯ ಸಾಹಿತಿ ರಂಗಕರ್ಮಿ

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ರಾಜೇಂದ್ರ, ಬಹುಜನ ವಿಚಾರ ವೇದಿಕೆ ಎಸ್‌.ಚಿನ್ನ ಇದ್ದರು.

ಚೋದ್ಯವೋ ಅಥವಾ ವ್ಯಂಗ್ಯವೋ?

‘ಶೇ 3ರಷ್ಟು ಇರುವ ಜಾತಿಗಳಿಗೆ (ಇಡಬ್ಲ್ಯುಎಸ್‌) ಸಾಮಾಜಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿ ಶೇ 10 ಮೀಸಲಾತಿಯನ್ನು ಸಂಸತ್ತಿನಲ್ಲಿ ಕೆಲವೇ ಗಂಟೆಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಚಾರಿತ್ರಿಕ ಚಿತ್ರಣ ನಮ್ಮ ಮುಂದಿರುವುದು ಚೋದ್ಯವೋ ಅಥವಾ ವ್ಯಂಗ್ಯವೋ ಗೊತ್ತಾಗುತ್ತಿಲ್ಲ’ ಎಂದು ಕೋಟಿಗಾನಹಳ್ಳಿ ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.