ಕೋಲಾರ: ‘ಕೋಲಾರ ಹಾಲು ಒಕ್ಕೂಟದ (ಕೋಮುಲ್) ಹಿಂದಿನ ಆಡಳಿತ ಮಂಡಳಿ ಹಾಗೂ ಆಡಳಿತಾಧಿಕಾರಿ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸದನದಲ್ಲಿ ಪ್ರಸ್ತಾಪಿಸಿದ್ದು, ಸರ್ಕಾರದಿಂದ ಆಂತರಿಕ ತನಿಖೆ ನಡೆಸೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಮುಲ್‌ನಿಂದ ನಿರ್ಮಿಸಿರುವ ಸೌರ ಘಟಕದಿಂದ ಹೆಚ್ಚಿನ ಅನುಕೂಲವಿದೆ. ಮೇವೂ ಬೆಳೆಸಬೇಕು, ವಿದ್ಯುತ್ ಉತ್ಪಾದನೆಯನ್ನೂ ಮಾಡಬೇಕು. ತಿಂಗಳಿಗೆ ₹2ಕೋಟಿ ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ. ಏನಾದರೂ ಲೋಪವಿದ್ದರೆ ಸರಿಪಡಿಸೋಣ’ ಎಂದರು.
‘ಎತ್ತಿನಹೊಳೆ ಯೋಜನೆ ಮಾಡಿರುವುದೇ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ನೀರು ನೀಡಲು. ಹಾಸನ ಜಿಲ್ಲೆಯ ನಂತರ ಸಿಗುವ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಸಹ ಯೋಜನೆ ರೂಪಿಸಲಾಗಿತ್ತು. ಅದಕ್ಕೆ ನಾವೆಲ್ಲರೂ ವಿರೋಧ ವ್ಯಕ್ತಪಡಿಸಿದೆವು. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕೆಂದು ಕೋರಿದ್ದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.
ಕೋಮುಲ್ ಸಂಬಂಧ ಏನಾದರೂ ಲೋಪದೋಷಗಳು ಆಗಿದ್ದಲ್ಲಿ ಸರಿಪಡಿಸಲಾಗುವುದು. ನಾರಾಯಣಸ್ವಾಮಿ ಹಾಗೂ ನಂಜೇಗೌಡರ ಇಬ್ಬರ ಮಾತನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದುಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ
‘ಕೆ.ಎನ್.ರಾಜಣ್ಣ ಅವರನ್ನು ವಾಪಸ್ ಸಚಿವ ಸಂಪುಟಕ್ಕೆ ಪಡೆಯುವುದು ಅಥವಾ ಪಡೆಯದಿರುವುದು ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು. ರಾಜಣ್ಣ ಪರವಾಗಿ ಮಾತನಾಡಿರುವ ಶ್ರೀರಾಮುಲು ಅವರಿಗೆ ಮೊದಲು ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿ. ನಂತರ ನಮ್ಮ ಪಕ್ಷದ ರಾಜಣ್ಣ ಅವರನ್ನು ಅವರ ಪಕ್ಷಕ್ಕೆ ಕರೆಯಲಿ’ ಎಂದು ಬೈರತಿ ಸುರೇಶ್ ತಿರುಗೇಟು ನೀಡಿದರು. ರಾಜಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿರುವ ಶ್ರೀರಾಮುಲು ವಿಚಾರಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.