ADVERTISEMENT

ಕೋಲಾರ: ಎಂವಿಕೆ ಡೇರಿ ಲೆಕ್ಕ ಕೇಳಿದ ಎಸ್‌ಎನ್‌ಎನ್‌!

ಸೆ.25ರ ಕೋಮುಲ್‌ ಸರ್ವಸದಸ್ಯರ ಸಭೆ ಬಳಿಕ ಕಾಮಗಾರಿ ವೀಕ್ಷಣೆಗೆ ದಿನ ನಿಗದಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 3:04 IST
Last Updated 23 ಸೆಪ್ಟೆಂಬರ್ 2025, 3:04 IST
ಕೋಮುಲ್‌ ಮುಖ್ಯ ಕಚೇರಿ
ಕೋಮುಲ್‌ ಮುಖ್ಯ ಕಚೇರಿ   

ಕೋಲಾರ: ತಾಲ್ಲೂಕಿನ ಬೆಳಗಾನಹಳ್ಳಿ ಸಮೀಪ ಕೋಲಾರ ಹಾಲು ಒಕ್ಕೂಟದಿಂದ (ಕೋಮುಲ್‌) ನಿರ್ಮಾಣವಾಗುತ್ತಿರುವ ಎಂವಿಕೆ ಗೋಲ್ಡನ್ ಡೇರಿ ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕೆಂದು ಬಂಗಾರಪೇಟೆ ಶಾಸಕ ಹಾಗೂ ಒಕ್ಕೂಟದ ನಿರ್ದೇಶಕ ಎಸ್‌.ಎನ್‌.ನಾರಾಯಣಸ್ವಾಮಿ ಪಟ್ಟು ಹಿಡಿದಿದ್ದಾರೆ.

ಸೋಮವಾರ ಕೋಮುಲ್‌ ಮುಖ್ಯ ಕಚೇರಿಯಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಅವರು ಲೆಕ್ಕಾಚಾರ ಕೊಡುವಂತೆ ಕೇಳಿದರು ಎಂದು ಮೂಲಗಳು ತಿಳಿಸಿವೆ.

ಕೋಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಸಮ್ಮುಖದಲ್ಲಿ ಈ ಸಂಬಂಧ ಮಾಹಿತಿ ಒದಗಿಸಬೇಕೆಂದು ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ಗೋಪಾಲಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ಅವರು ಸೂಚಿಸಿದರು.

ADVERTISEMENT

ಸೆ.25ರಂದು ನಡೆಯಲಿರುವ ಕೋಮುಲ್‌ನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಬಳಿಕ ಒಂದು ದಿನ ನಿಗದಿಪಡಿಸಿ ಗೋಲ್ಡನ್‌ ಡೇರಿ ಕಟ್ಟಡ ವೀಕ್ಷಿಸಲು ಹೋಗುತ್ತೇನೆ. ಆ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಅಡ್ಮಿನ್‌ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿದ್ದು ಮಾಹಿತಿ ನೀಡಬೇಕು. ಎಷ್ಟು ಅನುದಾನ ಬಂದಿದೆ, ಎಷ್ಟು ಕೆಲಸ ನಡೆದಿದೆ, ಎಷ್ಟು ಜಾಗವಿದೆ, ಏನೆಲ್ಲಾ ಸಾಮಗ್ರಿ ಖರೀದಿಸಲಾಗಿದೆ ಎಂಬುದನ್ನು ವಿವರಿಸಬೇಕು ಎಂದು ನಾರಾಯಣಸ್ವಾಮಿ ಹೇಳಿದರು.

ಇದಕ್ಕೆ ನಂಜೇಗೌಡ ಕೂಡ ಸಮ್ಮತಿ ಸೂಚಿಸಿ, ಅಧಿಕಾರಿಗಳಿಂದ ಅಗತ್ಯವಾಗಿ ಮಾಹಿತಿ ಪಡೆದುಕೊಳ್ಳಬಹುದು ಎಂದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಮೊದಲು ಸೆ.23ಕ್ಕೆ ಸ್ಥಳಕ್ಕೆ ಭೇಟಿ ನೀಡಲು ನಾರಾಯಣಸ್ವಾಮಿ ನಿರ್ಧರಿಸಿದ್ದರು. ಆದರೆ, 25ಕ್ಕೆ ಸರ್ವ ಸದಸ್ಯರ ವಾರ್ಷಿಕ ಸಭೆ ಇರುವುದರಿಂದ ಮುಂದಿನ ದಿನಗಳಲ್ಲಿ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೇ, ಸರ್ವಸದಸ್ಯರ ವಾರ್ಷಿಕ ಮಹಾಸಭೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಕೆಲ ಸದಸ್ಯರು ಈಗಾಗಲೇ ಒಕ್ಕೂಟಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ಪ್ರಶ್ನೆ ಕೇಳಿದ್ದು, ಯಾವ ರೀತಿ ಉತ್ತರ ಒದಗಿಸಬೇಕೆಂಬ ಚರ್ಚೆ ನಡೆಯಿತು.

ಆಡಳಿತಾಧಿಕಾರಿ ಅವಧಿಯಲ್ಲಿ ಹಣ ದುರುಪಯೋಗವಾಗಿದೆ ಎಂಬ ಆರೋಪದ ಸಂಬಂಧ ತನಿಖೆಗೆ ರಚಿಸಿರುವ ಒಕ್ಕೂಟದ ನಿರ್ದೇಶಕರ ವರದಿಯನ್ನು ಸೆ.25ರ ನಂತರ ಆಡಳಿತ ಮಂಡಳಿ ಸಭೆಗೆ ಸಲ್ಲಿಸಲಾಗುತ್ತದೆ ಎಂಬುದು ಗೊತ್ತಾಗಿದೆ. ಈ ಸಮಿತಿಯಲ್ಲಿ ನಾರಾಯಣಸ್ವಾಮಿ ಕೂಡ ಇದ್ದಾರೆ.

ನಂಜೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಮುಲ್‌ನ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ಇದ್ದರು.

ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಶಾಸಕ ಎಂವಿಕೆ

ಗೋಲ್ಡನ್ ಡೇರಿ ಹಾಗೂ 12 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕಗಳ ನಿರ್ಮಾಣ ಹೆಸರಿನಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದ್ದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಪದೇಪದೇ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸುಮಾರು ₹ 220 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎಂವಿಕೆ ಗೋಲ್ಡನ್‌ ಡೇರಿಯ ಶೇ 85ರಷ್ಟು ಸಿವಿಲ್‌ ಕಾಮಗಾರಿ ಮುಗಿದಿದೆ. ಶೇ 15 ರಷ್ಟು ಕಾಮಗಾರಿ ಬಾಕಿ ಇದ್ದು ಮೂರ್ನಾಲ್ಕು ತಿಂಗಳಲ್ಲಿ ಎಂವಿಕೆ ಗೋಲ್ಡನ್ ಡೇರಿ ಹಾಗೂ ಸುಮಾರು ₹ 60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೋಲಾರ್ ಘಟಕ ಉದ್ಘಾಟನೆಗೊಳ್ಳಲಿದೆ ಎಂಬುದಾಗಿ ಒಕ್ಕೂಟದ ಅಧ್ಯಕ್ಷ ನಂಜೇಗೌಡ ಈಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.