ಕೋಲಾರ: ನಗರದಲ್ಲಿ ಗುರುವಾರ ಸ್ಫೋಟದ ರೀತಿಯ ಬಾರಿ ಪ್ರಮಾಣದ ಶಬ್ದ ಹೊರಹೊಮ್ಮಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.
ಬೆಳಿಗ್ಗೆ 10.30ರ ಸುಮಾರಿಗೆ ನಿಗೂಢ ಸದ್ದು ಕೇಳಿಬಂದಿದ್ದು, ಕೋಲಾರ ಅಲ್ಲದೇ, ಬಂಗಾರಪೇಟೆ, ಕೆಜಿಎಫ್ ವರೆಗೆ ಕೇಳಿಸಿದೆ. ಭಾರಿ ಸದ್ದಿಗೆ ಕೆಲವರ ಮನೆಗಳಲ್ಲಿ ಪಾತ್ರೆಗಳು ಬಿದ್ದಿವೆ. ಜನರು ಕುತೂಹಲದಿಂದ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದಾರೆ.
ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸದ್ದಿನ ಮೂಲ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಂ.ಆರ್.ರವಿ, ‘ನಮಗೂ ಸದ್ದಿನ ವಿಚಾರ ಗೊತ್ತಾಗಿದೆ. ಮೂಲ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಜೊತೆ ಕೂಡ ಚರ್ಚಿಸಿದ್ದು, ತಹಶೀಲ್ದಾರ್, ಅಗ್ನಿಶಾಮಕದಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದರು.
ಮುಳಬಾಗಿಲು ತಾಲ್ಲೂಕಿನಲ್ಲಿ ದೇವಸ್ಥಾನವೊಂದರ ನಿರ್ಮಾಣಕ್ಕೆ ಕಲ್ಲು ಒಡೆಯಲಾಗುತ್ತಿದ್ದು, ಅದರಿಂದ ಹೊರಹೊಮ್ಮಿದ ಸದ್ದೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕಲ್ಲು ಗಣಿ ಪ್ರದೇಶದಲ್ಲಿ ಸ್ಫೋಟಕ ಬಳಸಿ ಕಲ್ಲು ಸಿಡಿಸಿರುವ ಸದ್ದೇ ಅಥವಾ ರಕ್ಷಣಾ ಇಲಾಖೆಯವರು ಎಲ್ಲಾದರೂ ಅಣಕು ಕಾರ್ಯಾಚರಣೆ ನಡೆಸಿರಬಹುದೇ, ಆಗಸದಲ್ಲಿ ಜೆಟ್ ಅಥವಾ ವಿಮಾನದ ಸದ್ದು ಇರಬಹುದೇ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತವು ದಾಳಿ ನಡೆಸುತ್ತಿರುವ ಹಾಗೂ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಈ ಸನ್ನಿವೇಶದಲ್ಲಿ ಭಾರಿ ಪ್ರಮಾಣದ ಸದ್ದು ಕೇಳಿಬಂದಿರುವುದು ಹಲವು ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.