ADVERTISEMENT

ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ವಿಚಾರ: ಸಂಸದ ಮುನಿಸ್ವಾಮಿ ವಿರುದ್ಧ ಆಕ್ರೋಶ

ಪ್ರತಿಭಟನೆ– ಧಿಕ್ಕಾರ ಕೂಗಿದ ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 4:27 IST
Last Updated 10 ಮಾರ್ಚ್ 2023, 4:27 IST
ಕೋಲಾರದಲ್ಲಿ ಗುರುವಾರ ಸಂಸದ ಎಸ್‌.ಮುನಿಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು
ಕೋಲಾರದಲ್ಲಿ ಗುರುವಾರ ಸಂಸದ ಎಸ್‌.ಮುನಿಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು   

ಕೋಲಾರ: ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲವೆಂದು ಮಹಿಳೆಯನ್ನು ನಿಂದಿಸಿದ್ದ ಸಂಸದ ಎಸ್. ಮುನಿಸ್ವಾಮಿ ಅವರ ವರ್ತನೆ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಡಿ ಗುರುವಾರ ಮಹಿಳೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹೊಸ ಬಸ್ ನಿಲ್ದಾಣ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದರ ವಿರುದ್ಧ ಧಿಕ್ಕಾರ ಕೂಗಿ ರಾಜೀನಾಮೆಗೆ ಆಗ್ರಹಿಸಿದರು.

‘ನನ್ನ ದೇಹ; ನನ್ನ ಹಕ್ಕು’ ಎಂದು ಘೋಷಣೆ ಕೂಗಿದರು. ಆಗ ಸ್ಥಳಕ್ಕೆ ಆಗಮಿಸಿದ ಕೋಲಾರ ನಗರ‌ ಪೊಲೀಸರು ಮಹಿಳೆಯರನ್ನು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕರೆದೊಯ್ದರು. ಸಂಚಾರ ಠಾಣೆಯಲ್ಲಿ ಸುಮಾರು ಗಂಟೆ ಇರಿಸಿಕೊಂಡು ಬಳಿಕ
ಬಿಡುಗಡೆಗೊಳಿಸಿದರು.

ADVERTISEMENT

ಜನವಾದಿ ಮಹಿಳಾ ಸಂಘಟನೆಯ ವಿ. ಗೀತಾ ಮಾತನಾಡಿ, ‘ಹೆಣ್ಣು ಮಕ್ಕಳನ್ನು ಹೀಯಾಳಿಸಿ ಸಂವಿಧಾನ ವಿರೋಧಿ ವರ್ತನೆ ತೋರಿರುವ ಮುನಿಸ್ವಾಮಿ ಅವರ ಸಂಸತ್ ಸದಸ್ಯತ್ವವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘ಇದು ಮುನಿಸ್ವಾಮಿ ಮಾತಲ್ಲ; ಆರ್‌ಎಸ್‌ಎಸ್‌ನ ಅಜೆಂಡಾ. ಮಹಿಳೆಯು ಬಳೆ ತೊಟ್ಟು, ಕುಂಕುಮ ಇಟ್ಟುಕೊಂಡು ಗಂಡನ ಸೇವೆ ಮಾಡಿಕೊಂಡು ಮನೆಯಲ್ಲಿರಬೇಕು ಎಂಬುದು ಅವರ ಸಿದ್ಧಾಂತ. ಸತಿ ಸಹಗಮನ ಪದ್ಧತಿಯ ಇನ್ನೊಂದು ರೂಪ’ ಎಂದು ಟೀಕಿಸಿದರು.

‘ಕುಂಕುಮಕ್ಕೂ ಗಂಡನಿಗೂ ಏನು ಸಂಬಂಧ? ಮಹಿಳೆಯದ್ದು ದೇಹ. ಅವಳ ಮುಖ, ಅವಳ ಹಕ್ಕು. ಇದನ್ನೆಲ್ಲಾ ಕೇಳಲು ಇವರು ಯಾರು’ ಎಂದು ಪ್ರಶ್ನಿಸಿದರು.

ರೈತ ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಎ. ನಳಿನಿಗೌಡ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ಮಮ್ಮ, ಗಮನ ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಂತಮ್ಮ, ಸಿಐಟಿಯು ಮುಖಂಡರಾದ ಆಶಾ, ಜನಾಧಿಕಾರ ಸಂಘಟನೆಯ ಮಂಜುಳಾ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಅಂತರರಾಷ್ಟ್ರೀಯ ಮಹಿಳೆ ದಿನಾಚರಣೆ ವೇಳೆ ಬುಧವಾರ ನಗರದ ರಂಗಮಂದಿರ ಆವರಣದಲ್ಲಿ ಕುಂಕುಮ ಇಟ್ಟುಕೊಳ್ಳದ ಮಹಿಳೆಯೊಬ್ಬರನ್ನು ಮುನಿಸ್ವಾಮಿ ನಿಂದಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಸಂಸದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.