ADVERTISEMENT

ಕೋಲಾರ: ಒತ್ತುವರಿ ತೆರವಿಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 13:08 IST
Last Updated 31 ಆಗಸ್ಟ್ 2018, 13:08 IST

ಕೋಲಾರ: ‘ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿಗೆ ಒತ್ತಾಯಿಸಿ ಸೆ.6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯ ನಾಗೇಶ್‌ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೆರೆ, ಕಾಲುವೆ ಹಾಗೂ ಸರ್ಕಾರಿ ಜಮೀನುಗಳನ್ನು ವ್ಯಾಪಕವಾಗಿ ಒತ್ತುವರಿ ಮಾಡಲಾಗುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿವೆ’ ಎಂದು ದೂರಿದರು.

‘ತಾಲ್ಲೂಕಿನ ಚಲುವನಹಳ್ಳಿ ಕೆರೆ ಅಂಗಳದ 43 ಎಕರೆ ಜಮೀನನ್ನು ರಮೇಶ್‌ಬಾಬು ಎಂಬುವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದೇ ರೀತಿ ಲಕ್ಷ್ಮಣರಾಜು ಎಂಬುವರು ಕೋಡಿಕಣ್ಣೂರು ಕೆರೆ ಅಂಗಳದಲ್ಲಿ 2 ಎಕರೆ ಜಾಗ ಒತ್ತುವರಿ ಮಾಡಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳಿಗೆ ದಾಖಲೆಪತ್ರ ನೀಡಿದ್ದರೂ ಒತ್ತುವರಿ ತೆರವುಗೊಳಿಸಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಕಸಬಾ ಗ್ರಾಮದ ಸರ್ವೆ ನಂಬರ್‌ 27ರಲ್ಲಿನ ನಿವೇಶಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಕೋಡಿಕಣ್ಣೂರು ಗ್ರಾಮದಲ್ಲಿನ ಸರ್ಕಾರಿ ಬಾವಿ ಜಾಗವನ್ನು ಕೈಗಾರಿಕಾ ಪ್ರದೇಶವಾಗಿ ಪರಿವರ್ತಿಸಲಾಗಿದೆ. ಮಾಲೂರು ತಾಲ್ಲೂಕಿನ ಊರುಗುರ್ಕಿ ಗ್ರಾಮದ 25 ಎಕರೆ ಗೋಮಾಳದ ಜಾಗ ಸರ್ಕಾರಿ ದಾಖಲೆಪತ್ರಗಳಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದ ಆಸ್ತಿ ಉಳುವಿಗಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸುತ್ತಿದ್ದೇವೆ. ಸಾರ್ವಜನಿಕರು ಹಾಗೂ ಸಂಘಟನೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಎಂ.ರವಿಕುಮಾರ್, ಹನುಮಪ್ಪ, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.