ADVERTISEMENT

ಕೋಲಾರ ಜಿಲ್ಲೆಯಲ್ಲಿ ಮಳೆ ಅವಾಂತರ: ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ, ವ್ಯಕ್ತಿ ಸಾವು

ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:08 IST
Last Updated 10 ಆಗಸ್ಟ್ 2025, 3:08 IST
ಕೋಲಾರ ತಾಲ್ಲೂಕಿನ ತಲಗುಂದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಬೈಕ್‌ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾರೆ
ಕೋಲಾರ ತಾಲ್ಲೂಕಿನ ತಲಗುಂದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಬೈಕ್‌ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾರೆ   

ಕೋಲಾರ: ಜಿಲ್ಲೆಯಲ್ಲಿ ಶನಿವಾರ ನಸುಕಿನಲ್ಲಿ ಮಳೆ ಆರ್ಭಟಿಸಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದು, ಸವಾರ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ವೇಮಗಲ್ ಬಳಿಯ ಕರೇನಹಳ್ಳಿ ಗ್ರಾಮದ ಸುಬ್ರಮಣಿ (34) ಎಂದು ಗುರುತಿಸಲಾಗಿದೆ. ಕೋಲಾರ ತಾಲ್ಲೂಕಿನ ತಲಗುಂದ ಬಳಿ ಮುಂಜಾನೆ ಈ ಅವಘಡ ನಡೆದಿದೆ. ವೇಮಗಲ್‌ನಿಂದ ಕೋಲಾರ ಮೂಲಕ ಮುಳಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಂಪತಿ ಹಾಗೂ ಮಗು ಪಲ್ಸರ್‌ ಬೈಕ್‌ನಲ್ಲಿ ತೆರಳುತ್ತಿದ್ದರು.

ಹುಣಸೆ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿತ್ತು. ಈ ಮರಕ್ಕೆ ದಂಪತಿ ಇದ್ದ ಬೈಕ್‌ ಡಿಕ್ಕಿ ಹೊಡೆದಿದೆ. ಸವಾರ ಸುಬ್ರಮಣಿ ಅವರ ತಲೆಗೆ ತೀವ್ರ ಏಟು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಪತ್ನಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಸು ತಿರುವಿನಲ್ಲಿ ಮರವಿದ್ದ ಕಾರಣ ನಸುಕಿನಲ್ಲಿ ಸರಿಯಾಗಿ ಕಂಡಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ, ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಲ್ಲಿ ಸುರಿದ ಜೋರು ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಅಂತರಗಂಗೆ ರಸ್ತೆಯ ದರ್ಗಾ ಬಳಿ ಬೃಹತ್‌ ಮರ ಧರೆಗುರುಳಿತು. ಕೋಲಾರ–ಟೇಕಲ್‌ ರಸ್ತೆಯಲ್ಲೂ ಮರಗಳು ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಯಿತು. ವಿದ್ಯುತ್‌ ಕಂಬಗಳ ಮೇಲೂ ಕೊಂಬೆಗಳು ಬಿದ್ದು, ವಿದ್ಯುತ್‌ ವ್ಯತ್ಯಯ ಉಂಟಾಯಿತು. ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಬಂದು ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಿದರು.

ಇನ್ನು ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಮುಳಬಾಗಿಲಿನ ಹಲವೆಡೆ ಬಡಾವಣೆಗಳು ಜಲಾವೃತಗೊಂಡು ಜನರು ಪರದಾಡಿದರು. ಬಂಗಾರಪೇಟೆ ಪಟ್ಟಣದ ಸೇಟ್ ಕಾಂಪೌಂಡ್ ಹಾಗೂ ಗಂಗಮ್ಮನ ಪಾಳ್ಯ ಬಡಾವಣೆ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಶ್ರೀನಿವಾಸಪುರದ ಅಂಬೇಡ್ಕರ್‌ ಪಾಳ್ಯ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ರೈಲ್ವೆ ಸೇತುವೆ ಕೆಳಗೆ ನಿಂತ ನೀರನ್ನು ತೆರವುಗೊಳಿಸಲು ಅಗ್ನಿಶಾಮಕ ವಾಹನ ತರಬೇಕಾಯಿತು.

ಕೋಲಾರ ನಗರದ ಹಲವು ಬಡಾವಣೆಗಳಲ್ಲಿ ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದೆ. ನಗರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ರ ಸೂಚನೆ ನೀಡಿದರು.

ಅಂತರಗಂಗೆ ರಸ್ತೆಯ ಪಕ್ಕದಲ್ಲಿರುವ ಕುವೆಂಪು ಉದ್ಯಾನ ಕೂಡ ಜಲಾವೃತಗೊಂಡಿತು. ಆಟವಾಡಲು ಬಂದ ಮಕ್ಕಳು ನೀರಿನಲ್ಲಿ ಆಟವಾಡುವ ಸ್ಥಿತಿ ನಿರ್ಮಾಣವಾಯಿತು.

ಶನಿವಾರ ಮಧ್ಯಾಹ್ನ ಮೋಡಗಟ್ಟಿದ ವಾತಾವರಣವಿತ್ತು. ಸಂಜೆ ಮತ್ತೆ ಮಳೆಯಾಯಿತು.

ಕೋಲಾರ ತಾಲ್ಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಶೆಡ್‌ ಮೇಲೆ ಅರಳಿ ಮರ ಬಿದ್ದು ಹಸು ಮೃತಪಟ್ಟಿದೆ
ಕೋಲಾರ ಹೊರವಲಯದ ಅಂತರಗಂಗೆ ರಸ್ತೆಗೆ ಮರ ಉರುಳಿ ಬಿದ್ದಿತ್ತು
ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಯಿತು

ಮರಬಿದ್ದು ಹಸು ಸಾವು ಶೆಡ್‌ಗೆ ಹಾನಿ

ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಶೆಡ್‌ ಮೇಲೆ ಬೃಹತ್ ಅರಳಿ ಮರ ಬಿದ್ದು ಹಸು ಮೃತಪಟ್ಟಿದೆ. ನಾಲ್ಕು ಹಸುಗಳು ಗಾಯಗೊಂಡಿವೆ. ಗ್ರಾಮದ ರೈತ ರಾಮ ರೆಡ್ಡಿ ಎಂಬುವರಿಗೆ ಸೇರಿದ ಸೀಮೆಹಸು ಇದಾಗಿದ್ದು ₹ 75 ಸಾವಿರ ಹಾಗೂ ಶೆಡ್ ಸೇರಿ ಸುಮಾರು ₹ 1.5 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 400 ವರ್ಷಗಳ ಅರಳಿ ಮರ ಇದಾಗಿದ್ದು ಜೋರು ಮಳೆ ಗಾಳಿಯಿಂದ ರಾತ್ರಿ ನೆಲಕ್ಕರುಳಿದೆ. ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಸೊಸೈಟಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ವಲ್ಪದರಲ್ಲಿ ಬಚಾವ್‌ ಆಗಿವೆ.

ಹೊದಲಿಯಲ್ಲಿ 110 ಮಿ.ಮೀ. ಮಳೆ

ಶ್ರೀನಿವಾಸಪುರ ತಾಲ್ಲೂಕಿನ ಹೊದಲಿಯಲ್ಲಿ 110 ಮಿ.ಮೀ (11 ಸೆಂ.ಮೀ.) ಮಳೆಯಾಗಿದ್ದು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಕೂಡ. ‌ಬಂಗಾರಪೇಟೆ ತಾಲ್ಲೂಕಿನ ಸುಂದರಪಾಳ್ಯದಲ್ಲಿ 76 ಮಿ.ಮೀ.‌ ಬಂಗಾರಪೇಟೆ ಪಟ್ಟಣದಲ್ಲಿ 67.5 ಮಿ.ಮೀ ಮಾವಳ್ಳಿಯಲ್ಲಿ 51 ಮಿ.ಮೀ. ದೊಡ್ಡಕುರುಪನಹಳ್ಳಿಯಲ್ಲಿ 48.5 ಮಿ.ಮೀ. ಹಾಗೂ ಸೂಲಿಕುಂಟೆಯಲ್ಲಿ 38.8 ಮಿ.ಮೀ. ಮಳೆಯಾಗಿದೆ. ಕೋಲಾರದಲ್ಲಿ 73 ಮಿ.ಮೀ. ತಾಲ್ಲೂಕಿನ ಐತರಾಸನಹಳ್ಳಿ 50.5 ಮಿ.ಮೀ. ಉರುಗಲಿಯಲ್ಲಿ 61 ಮಿ.ಮೀ. ಅಮ್ಮನಲ್ಲೂರಿನಲ್ಲಿ 63 ಮಿ.ಮೀ. ಹರಟಿಯಲ್ಲಿ 36.5 ಮಿ.ಮೀ. ಮಣಿಘಟ್ಟದಲ್ಲಿ 25 ಮಿ.ಮೀ. ವಡಗೂರಿನಲ್ಲಿ 20 ಮಿ.ಮೀ. ನರಸಾಪುರದಲ್ಲಿ 24 ಬೆಳ್ಳೂರಿನಲ್ಲಿ 26 ಸೂಲೂರಿನಲ್ಲಿ 30 ಮಿ.ಮೀ ಮಳೆ ಬಿದ್ದಿದೆ. ಮಾಲೂರು ತಾಲ್ಲೂಕಿನ ಕಾವಲಗಿರಿಯನಹಳ್ಳಿಯಲ್ಲಿ 64 ಮಿ.ಮೀ ಮಳೆಯಾಗಿದೆ. ಮುಳಬಾಗಿಲು ತಾಲ್ಲೂಕಿನ ಸೊಣ್ಣೇವಾಡಿಯಲ್ಲಿ 77 ಮಿ.ಮೀ. ಊರುಕುಂಟೆ ಮಿಟ್ಟೂರಿನಲ್ಲಿ 47 ಮಿ.ಮೀ. ಗುಮ್ಮಕಲ್ಲಿನಲ್ಲಿ 35 ಮಿ.ಮೀ. ಮುಳಬಾಗಿಲಿನಲ್ಲಿ 33 ಮಿ.ಮೀ ಮಳೆಯಾಗಿದೆ. ಶ್ರೀನಿವಾಸಪು ತಾಲ್ಲೂಕಿನ ನಂಬಿಹಳ್ಳಿಯಲ್ಲಿ 85.5 ಮಿ.ಮೀ. ಶ್ರೀನಿವಾಸಪುರ ಪಟ್ಟಣದಲ್ಲಿ 71.5 ಮಿ.ಮೀ. ಲಕ್ಷ್ಮಿಪುರದಲ್ಲಿ 48 ಮಿ.ಮೀ. ಯರ್ರಾಂಪಲ್ಲಿಯಲ್ಲಿ 43 ಮಿ.ಮೀ.‌ ಚಲ್ಡಿಗಾನಹಳ್ಳಿಯಲ್ಲಿ 40 ಮಿ.ಮೀ. ಮುದಿಮಡುಗುದಲ್ಲಿ 23 ಮಿ.ಮೀ. ಗೌನಿಪಲ್ಲಿಯಲ್ಲಿ 21.5 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.