ADVERTISEMENT

ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸೌಲಭ್ಯಗಳ ಅರಿವು: ಕ್ಷೌರಿಕರ ಮನೆಗಳಲ್ಲಿ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:34 IST
Last Updated 19 ಫೆಬ್ರುವರಿ 2026, 6:34 IST
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್ ಮುತ್ತುರಾಜ್ ಮಾತನಾಡಿದರು. ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ಮಂಜುನಾಥ್, ಓಬಿಸಿ ಮಂಜುನಾಥ್‌, ಶಿವಕುಮಾರ್ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್ ಮುತ್ತುರಾಜ್ ಮಾತನಾಡಿದರು. ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ಮಂಜುನಾಥ್, ಓಬಿಸಿ ಮಂಜುನಾಥ್‌, ಶಿವಕುಮಾರ್ ಪಾಲ್ಗೊಂಡಿದ್ದರು    

ಕೋಲಾರ: ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶದ ಕ್ಷೌರಿಕರ ಮನೆಗಳಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ ತಾಲ್ಲೂಕಿನ ದೊಡ್ಡಹಸಾಳ ಗ್ರಾಮದ ಎಂ.ರಾಮಮೂರ್ತಿ ಮನೆಯಲ್ಲಿ ಬುಧವಾರ ಪ್ರಾರಂಭವಾಗಿದ್ದು, ಗುರುವಾರ ಶಿಲ್ಲಂಗೆರೆ, ಶುಕ್ರವಾರ ಯಲವಾರ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದರು.

ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ನಿಗಮದಿಂದ ಪೋತ್ಸಾಹಧನ, ಕನಿಷ್ಠ ಎರಡು ಎಕರೆ ಜಮೀನು ಇದ್ದರೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಸ್ವಯಂ ಉದ್ಯೋಗಕ್ಕಾಗಿ ₹ 1 ಲಕ್ಷ, ಜೊತೆಗೆ ಸ್ವಾವಲಂಬಿ ಸಾರಥಿ ಇತ್ಯಾದಿ ಯೋಜನೆಗಳು ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ನಿಗಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ₹ 18 ಕೋಟಿ ಅನುದಾನ ನೀಡಿದ್ದಾರೆ. ಮುಂದೆ ಹೆಚ್ಚಿನ ಬೇಡಿಕೆ ಇಡಲಾಗುತ್ತದೆ. ನಮಗೆ ಜಾತಿಯ ಶಕ್ತಿ ಇಲ್ಲ. ಕೆಲವರು ಜಾತಿ ಹಾಗೂ ವೃತ್ತಿಯ ಬಗ್ಗೆ ಅವಹೇಳನಕಾರಿಯ ಪದ ಬಳಸಿ ನಿಂದಿಸುತ್ತಿರುವುದು ಬೇಸರ ತರಿಸಿದೆ. ಮುಂದೆ ಇದಕ್ಕೆ ಕಾನೂನು ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು‌.

ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ‘ನಿಗಮ ಅಧ್ಯಕ್ಷ ಮುತ್ತುರಾಜ್ ಕ್ಷೌರಿಕರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದು, ಇದು ಹೊಸ ಪ್ರಯೋಗವಾಗಿದೆ. ಸಮುದಾಯದ ಬಗ್ಗೆ ಸಮಾಜದಲ್ಲಿ ಕಾಡುತ್ತಿರುವ ಕೀಳರಿಮೆ ಹೋಗಲಾಡಿಸಲು, ಆತ್ಮವಿಶ್ವಾಸ ತುಂಬಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋಲಾರದಿಂದ ಪ್ರಾರಂಭವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ನಡೆಯಲಿದೆ’ ಎಂದರು.

ಕಾಂಗ್ರೆಸ್‌ ಮುಖಂಡ ಓಬಿಸಿ ಮಂಜುನಾಥ್ ಮಾತನಾಡಿ, ‘ಹಿಂದುಳಿದ ವರ್ಗಗಳ ಒಕ್ಕೂಟದಿಂದ ಸವಿತಾ‌ ಸಮಾಜ, ಬೆಸ್ತರು ಹಾಗೂ ಮಡಿವಾಳ ಸಮುದಾಯವನ್ನು ಎಸ್‌ಸಿಗೆ ಸೇರಿಸಲು ಮನವಿ ‌ಮಾಡಿದ್ದೇವೆ. ಮುಂಬರುವ ಬಜೆಟ್‌ನಲ್ಲಿ ಸಮಾಜದ ಏಳಿಗೆಗಾಗಿ ಕನಿಷ್ಠ ₹ 100 ಕೋಟಿ ವಿಶೇಷ ಅನುದಾನಕ್ಕೆ ಕೋರಿದ್ದೇವೆ. ಸಮಾಜದಲ್ಲಿನ ಕಟ್ಟಕಡೆಯ ‌ಬಡವರನ್ನು ಗುರುತಿಸಿ ಸೌಲಭ್ಯವನ್ನು ಸಿಗುವಂತೆ ಮಾಡಬೇಕಾಗಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುತ್ತುರಾಜ್‌ ಅವರನ್ನು ಎಸ್‌.ಮಂಜುನಾಥ್‌ ಸನ್ಮಾನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜದ ಮುಖಂಡರಾದ ಶಿವಕುಮಾರ್, ಕೆಂಪರಾಜು, ದೀಪು, ಕೋಟೆ ರಾಜೇಶ್, ಗುರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.