ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಕೋಲಾರದಲ್ಲಿ ಒಂದೇ ದಿನ 36 ಸಾವಿರ ಮನೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:47 IST
Last Updated 1 ಅಕ್ಟೋಬರ್ 2025, 7:47 IST
ಕೋಲಾರದಲ್ಲಿ ಮಂಗಳವಾರ ಗಣತಿಕಾರ್ಯ ಪೂರ್ಣಗೊಳಿಸಿದ ಗಣತಿದಾರರನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ ಸನ್ಮಾನಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್‌ಗಳು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಮಂಗಳವಾರ ಗಣತಿಕಾರ್ಯ ಪೂರ್ಣಗೊಳಿಸಿದ ಗಣತಿದಾರರನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ ಸನ್ಮಾನಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್‌ಗಳು ಪಾಲ್ಗೊಂಡಿದ್ದರು    

ಕೋಲಾರ: ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇ 35 ರಷ್ಟು ಪೂರ್ಣಗೊಂಡಿದ್ದು, ಸೋಮವಾರ (ಸೆ.29) ಒಂದೇ ದಿನ 36 ಸಾವಿರ ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಾತಿವಾರು ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಒಳಗೊಂಡ ಗಣತಿದಾರರ ತಂಡಕ್ಕೆ ಪ್ರತಿ ದಿನ 10 ಸಾವಿರ ಮನೆಗಳ ಸಮೀಕ್ಷೆ ನಡೆಸಲು ಗುರಿ ನೀಡಲಾಗಿತ್ತು. ಆದರೆ, ಆ ಗುರಿಯನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಿಲ್ಲ. ಕೆಲವು ಶಿಕ್ಷಕರು ಒಂದೇ ದಿನ 41 ಮನೆಗಳ ಸಮೀಕ್ಷೆ ಮಾಡಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಅ.7 ರ ಒಳಗೆ ಸಮಿಕ್ಷೆ ಕಾರ್ಯ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಯು ವಿಡಿಯೋ ಸಂವಾದ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ ಎಂದರು.

ADVERTISEMENT

ಸಮೀಕ್ಷೆಯಲ್ಲಿ ಕಂಡು ಬರುವ ಲೋಪ, ತಾಂತ್ರಿಕ ಸಮಸ್ಯೆಗಳನ್ನು ತಾಂತ್ರಿಕ ತಜ್ಞರು ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆಯಿರುವ ಗಡಿಭಾಗದ ಪ್ರದೇಶಗಳಲ್ಲಿ ಯಾರೂ ಸಮೀಕ್ಷೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರಿ ಕಟ್ಟಡಗಳಲ್ಲಿ ಶಿಬಿರ ಏರ್ಪಡಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಕ್ರಮವಹಿಸಲಾಗಿದೆ. ಮುಳಬಾಗಿಲು ತಾಲೂಕಿನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಅಲ್ಲೂ ಶಿಬಿರ ಏರ್ಪಡಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಯಾವುದೇ ನೆಪ ಹೇಳದೆ ತಮಗೆ ನಿಯೋಜಿತವಾಗಿರುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿನಿತ್ಯದ ಗುರಿಯನ್ನು ಸಾಧಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ನಗರ ಪ್ರದೇಶ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇಒಗಳು ನಿತ್ಯ ಸಮೀಕ್ಷೆ ಕಾರ್ಯದ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಸಮೀಕ್ಷಾ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದರೆ ತುರ್ತು ಕ್ರಮ ಕೈಗೊಂಡು ಚುರುಕುಗೊಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಗಣತಿ ಕಾರ್ಯಕ್ಕೆ ಹೋದಾಗ ಯಾವುದಾದರೂ ಮನೆಗಳು ಬೀಗ ಹಾಕಿದ್ದರೆ ಅಂತಹ ಮನೆಗಳ ಮುಂಭಾಗದಲ್ಲಿ ಗಣತಿದಾರರು ಬಂದು ಹೋಗಿದ್ದಾರೆ ಎಂಬುದನ್ನು ತಿಳಿಸಿಕೊಡಲು ಸ್ಟಿಕ್ಕರ್‌ ಅಂಟಿಸಿ ತಮ್ಮ ದೂರವಾಣಿ ವಿವರವನ್ನು ಬರೆದು ಸಂಪರ್ಕಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಗಣತಿಕಾರ್ಯವನ್ನು ಮುಗಿಸಿರುವ ಗಣತಿದಾರರಿಗೆ ಜಿಲ್ಲಾಡಳಿದಿಂದ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಪ್ರತಿ ಗಣತಿದಾರರಿಗೂ 125 ಕುಟುಂಬಗಳನ್ನು ನೀಡಿದ್ದು ಅದರಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 9 ಗಣತಿದಾರರು ತಮ್ಮ ಸಮೀಕ್ಷೆಯನ್ನು ಮುಗಿಸಿದ್ದಾರೆ. ಇನ್ನೂ ಹೆಚ್ಚಿನ ಮನೆಗಳನ್ನು ಕೊಟ್ಟರೆ ಸಮೀಕ್ಷೆ ಮಾಡುವುದಾಗಿ ಗಣತಿಗಾರರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಭಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಇದ್ದರು.

ಮನೆಮನೆಗೆ ಸಮೀಕ್ಷೆ ಜೊತೆಗೆ ಸಾರ್ವಜನಿಕರು ನೇರವಾಗಿ ಸ್ವಯಂಪ್ರೇರಿತರಾಗಿ ಭಾಗವಹಿಸಲು ಸಿಟಿಜನ್ ಪೋರ್ಟಲ್ ಸಿದ್ಧಡಿಸಲಾಗಿದೆ. ಪೋರ್ಟಲ್‌ಗೆ ಭೇಟಿ ನೀಡಿ ಮಾಹಿತಿ ನೀಡಬೇಕು
ಎಂ.ಆರ್‌.ರವಿ ಜಿಲ್ಲಾಧಿಕಾರಿ

ನೋಟಿಸ್‌ ಶಿಸ್ತಿನ ಕ್ರಮ

ನಿಯೋಜನೆಯಾಗಿರುವ ಗಣತಿದಾರರು ಈವರೆಗೆ ಸಮೀಕ್ಷೆ ಕಾರ್ಯವನ್ನು ಮಾಡದೇ ಇದ್ದವರ ಮಾಹಿತಿಯನ್ನು ಆನ್‌ಲೈನ್ ಮೂಲಕವೇ ಪಡೆದು ನೋಟಿಸ್‌ ಜಾರಿ ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗಿದೆ. ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಯಾಗಿರುವ ಯಾವುದೇ ಅಧಿಕಾರಿಗಳು ಗಣತಿದಾರರು ಅಥವಾ ಸಿಬ್ಬಂದಿ ಅಸಹಕಾರ ತೋರಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮಕ್ಕೆ ಒಳಪಡಿಸಲು ಸೂಚಿಸಲಾಗಿದೆ ಎಂದು ಎಂ.ಆರ್‌.ರವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.