
ಕೋಲಾರ: ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಾರಾಟ ನಿಷೇಧಿಸುವಂತೆ ಕೋಲಾರ ಜಿಲ್ಲಾ ಜನಪರ ವೇದಿಕೆ ಆಗ್ರಹಿಸಿದೆ. ಈ ಸಂಬಂಧ ವೇದಿಕೆ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಅವರಿಗೆ ಶನಿವಾರ ಮನವಿ ಪತ್ರ ನೀಡಿದರು.
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಏನು ಕ್ರಮ ತೆಗೆದುಕೊಳ್ಳುತ್ತವೆಯೋ ಕಾದು ನೋಡುತ್ತೇವೆ. ಕ್ರಮ ವಹಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಳೆದ ನಾಲ್ಕೈದು ವರ್ಷಗಳಿಂದ ಶ್ರೀನಿವಾಸಪುರ ತಾಲ್ಲೂಕಿನ ರೈತರು, ಸಂಘ-ಸಂಸ್ಥೆಗಳು, ಪಟ್ಟಣದ ಸಾರ್ವಜನಿಕರು ತಹಶೀಲ್ದಾರ್, ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡುತ್ತಿದ್ದು, ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ. ಆದರೆ, ಪ್ರತಿ ವರ್ಷ ಸುಮಾರು 50 ದಿನ ಪಟ್ಟಣದ ಜನನಿಬಿಡ ಹಳೇ ಮಾರುಕಟ್ಟೆಯ ರಸ್ತೆಯ ಮೇಲೆ, ಬದಿಗಳಲ್ಲಿ, ಯಾವುದೇ ನೀರು, ನೆರಳು, ಅಂಗಡಿ ಇಲ್ಲದೆ, ಎಪಿಎಂಸಿ ಕಾಯ್ದೆ ಉಲ್ಲಂಘನೆ ಮಾಡುತ್ತಾ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಾ ವ್ಯಾಪಾರ ನಡೆಸಲಾಗುತ್ತಿದೆ ಎಂದರು.
ಇದರಿಂದ ನಿತ್ಯ ಅಲ್ಲಿನ ನಿವಾಸಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಇದುವರೆಗೆ ಯಾವುದೇ ಪರಿಹಾರ ಕೂಡ ಕಂಡುಕೊಂಡಿಲ್ಲ. ಇತ್ತೀಚೆಗೆ ರೈತರು, ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿದ್ದಾಗ ಬಂದ ಕೆಲವ ಗೂಂಡಾ ವ್ಯಕ್ತಿಗಳು, ಹೋರಾಟಗಾರರು ಮತ್ತು ರೈತರನ್ನು ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಶ್ರೀನಿವಾಸಪುರ ಪಟ್ಟಣದಲ್ಲಿ ಎಪಿಎಂಸಿ ಆವರಣದಲ್ಲಿ ಜಾಗ ಇದ್ದರೂ ಇಲ್ಲೇ ವ್ಯಾಪಾರ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡುತ್ತಿದ್ದಾರೆ. ರೈತರಿಂದ ಶೇ 10 ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಿರುವ, ರೈತರ ಶೋಷಣೆ ಮಾಡುತ್ತಿರುವ ವ್ಯಾಪಾರಿಗಳಿಗೆ ಈ ಕೂಡಲೇ ಎಪಿಎಂಸಿ ಸ್ಥಳಾಂತರಿಸಲು ಸೂಚಿಸಬೇಕು. ಇಕ್ಕಟ್ಟಾದ ರಸ್ತೆಯಲ್ಲಿ ಅವರೆಕಾಯಿ ವ್ಯಾಪಾರ ವಹಿವಾಟು ನಡೆಸಿ ಸಾರ್ವಜನಿಕ ಸಂಚಾರ ದಟ್ಟಣೆ ಮಾಡುವ ಬದಲು ವಿಶಾಲ ಎಪಿಎಂಸಿ ಆವರಣದಲ್ಲಿ ನಡೆಸಲಿ ಎಂದು ಒತ್ತಾಯಿಸಿದರು.
ನಿತ್ಯ ಸುಮಾರು 12 ರಿಂದ 15 ಟನ್ ಅವರೆಕಾಯಿ ಮಾರಾಟ ಮಾಡಲಾಗುತ್ತದೆ. ಸುಮಾರು ₹ 25 ಲಕ್ಷ ವಹಿವಾಟು ನಡೆಯುತ್ತಿದೆ. ಈ ಮಾರುಕಟ್ಟೆ ಪಕ್ಕದ ಚಿಂತಾಮಣಿ ಮತ್ತು ಕೋಲಾರ ಎಪಿಎಂಸಿಗಿಂತ ಇಲ್ಲೇ ಅತ್ಯಧಿಕ ಮಾರಾಟ ನಡೆಯುತ್ತದೆ. ಕೂಡಲೇ ಎಪಿಎಂಸಿಗೆ ಸ್ಥಳಾಂತರ ಮಾಡಬೇಕು. ಈ ಸಂಬಂಧ ಆದೇಶ ಹೊರಡಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ನಾಗರಾಜ್ ಗೂಳಿಗಾನಹಳ್ಳಿ, ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ವಿ., ಖಜಾಂಚಿ ಹಾಗೂ ವಕೀಲ ಕೆ.ಪಿ.ವೆಂಕಟಾಚಲಪತಿ, ಅಜಯ್, ಮಂಜುನಾಥ್ ರೆಡ್ಡಿ, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.