ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತಗಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ಮಂಜುನಾಥ್ ಅವರಿಗೆ ಈ ಬಾರಿ ರಾಜ್ಯ ಮಟ್ಟದ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಲಭಿಸಿದೆ.
ಈ ಶಾಲೆಯು ಕರ್ನಾಟಕ–ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು, ಸೌಲಭ್ಯಗಳ ಕೊರತೆ ನಡುವೆಯೇ ಮಕ್ಕಳನ್ನು ಆಕರ್ಷಿಸುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಶಾಲೆಯ ಇತರ ಶಿಕ್ಷಕರೊಂದಿಗೆ ಸೇರಿ ಹಲವು ಬದಲಾವಣೆಗಳನ್ನು ತಂದಿದ್ದಾರೆ.
ಎಲ್‌ಕೆಜೆಯಿಂದ 7ನೇ ತರಗತಿವರೆಗೆ 226 ಮಕ್ಕಳು ಇದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಆರು ಕಾಯಂ ಶಿಕ್ಷಕರು ಹಾಗೂ ಮೂವರು ಅತಿಥಿ ಶಿಕ್ಷಕರು ಇದ್ದಾರೆ.
ಇಲ್ಲಿ ಎಲ್‌ಕೆಜಿ ಆರಂಭಿಸಲು ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೆ, ದಾನಿಗಳ ನೆರವು ಹಾಗೂ ಸ್ವಂತ ಖರ್ಚಿನಿಂದ ಎಲ್‌ಕೆಜಿ ಶುರು ಮಾಡಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು 23 ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಮಂಜುನಾಥ್ ಪ್ರತಿ ತಿಂಗಳ ತಮ್ಮ ವೇತನದಲ್ಲಿ ಶಾಲೆ ವಿಚಾರಗಳಿಗೆ ಒಂದಿಷ್ಟು ಹಣ ತೆಗೆದಿಡುತ್ತಿದ್ದಾರೆ.
ಎರಡು ಎಕರೆ ಪ್ರದೇಶದಲ್ಲಿ ಶಾಲೆ ಇದೆ. ಅಡುಗೆ ಕೋಣೆ, ನೀರಿನ ಸಮಸ್ಯೆ, ಕಾಂಪೌಂಡ್ ಕೊರತೆ ನಡುವೆ ಈ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ನ್ಯಾಷನಲ್ ಸೈನ್ಸ್ ಇನ್‌ಸ್ಪೈರ್ ಪ್ರಶಸ್ತಿಗೆ ಈ ಶಾಲೆಯ ವಿದ್ಯಾರ್ಥಿ ಆಯ್ಕೆ ಆಗಿದ್ದರು. ಕ್ರೀಡೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಮಕ್ಕಳು ಆಯ್ಕೆಯಾಗಿದ್ದಾರೆ. ಮಂಜುನಾಥ್ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಆಶುಭಾಷಣ ಸ್ಪರ್ಧೆಯಲ್ಲಿ 4 ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದರ ಪರಿಣಾಮವಾಗಿ ಸರ್ಕಾರ ಅವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇವರದ್ದು ಶ್ರೀನಿವಾಸಪುರ ತಾಲ್ಲೂಕಿನ ಗೊರವಿಮಾಕಲಹಳ್ಳಿ ಗ್ರಾಮ. 23 ವರ್ಷದಿಂದ ಶಿಕ್ಷಕ ವೃತ್ತಿಯಲ್ಲಿದ್ದಾರೆ. ಇವರು ಕೆಲಸ ಮಾಡುತ್ತಿರುವ ಎರಡನೇ ಶಾಲೆ ಇದಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ನೇತೃತ್ವದಲ್ಲಿ ಡಿಡಿಪಿಐ ಒಳಗೊಂಡಂತೆ 11 ಮಂದಿ ಸಮಿತಿಯು ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಶಿಫಾರಸು ಮಾಡಿತ್ತು. ಒಟ್ಟು 12 ಅರ್ಜಿಗಳನ್ನು ಪರಿಶೀಲಿಸಿತ್ತು.
ಶ್ರೀನಿವಾಸಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಿಗೆ ಮನ್ನಣೆ ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚು ಮಕ್ಕಳಿರುವ ಶಾಲೆ ಕೊರತೆಗಳ ನಡುವೆ ಶಾಲೆಯಲ್ಲಿ ಬದಲಾವಣೆಗೆ ಯತ್ನ
ಭರವಸೆ ಇಟ್ಟು ಪ್ರಶಸ್ತಿ ಕೊಟ್ಟಿದ್ದು ಅದನ್ನು ಉಳಿಸಿಕೊಳ್ಳಬೇಕು. ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಣ ಇಲಾಖೆಯವರು ನನ್ನನ್ನು ಗುರುತಿಸಿರುವುದು ಖುಷಿ ಉಂಟು ಮಾಡಿದೆಜಿ.ಮಂಜುನಾಥ್ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡತಾತಗಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.