ADVERTISEMENT

ಕೋಲಾರ | ರಾಜ್ಯಮಟ್ಟದ ಅಥ್ಲೆಟಿಕ್ಸ್‌ಗೆ 70 ಮಕ್ಕಳು

ಕ್ರೀಡಾ ಸಮವಸ್ತ್ರ ವಿತರಿಸಿ ಮಕ್ಕಳನ್ನು ಬೀಳ್ಕೊಟ್ಟ ಶಿಕ್ಷಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 8:30 IST
Last Updated 5 ಡಿಸೆಂಬರ್ 2025, 8:30 IST
ಕೋಲಾರದಲ್ಲಿ ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿದ 17 ವರ್ಷದೊಳಗಿನವರ ಬಾಲಕ, ಬಾಲಕಿಯರು ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ಹೊರಟ್ಟಿದ್ದು, ಶಿಕ್ಷಣಾಧಿಕಾರಿ ವೀಣಾ ಸಮವಸ್ತ್ರ ವಿತರಿಸಿದರು
ಕೋಲಾರದಲ್ಲಿ ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿದ 17 ವರ್ಷದೊಳಗಿನವರ ಬಾಲಕ, ಬಾಲಕಿಯರು ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ಹೊರಟ್ಟಿದ್ದು, ಶಿಕ್ಷಣಾಧಿಕಾರಿ ವೀಣಾ ಸಮವಸ್ತ್ರ ವಿತರಿಸಿದರು   

ಕೋಲಾರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 14 ಹಾಗೂ 17 ವರ್ಷದೊಳಗಿನವರ ಬಾಲಕ, ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ 70 ಮಕ್ಕಳು ಆಯ್ಕೆಯಾಗಿದ್ದಾರೆ.

ಈಚೆಗೆ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಈ ಆಯ್ಕೆ ಮಾಡಲಾಗಿತ್ತು.

ನಗರದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಈ ಮಕ್ಕಳಿಗೆ ಶಿಕ್ಷಣಾಧಿಕಾರಿ ವೀಣಾ ಕ್ರೀಡಾ ಸಮವಸ್ತ್ರ ವಿತರಿಸಿ ಬೀಳ್ಕೊಟ್ಟರು.

ADVERTISEMENT

ಪಠ್ಯದಷ್ಟೇ ಕ್ರೀಡೆಗಳಿಗೂ ಪ್ರಾಮುಖ್ಯವಿದ್ದು, ಸಮಗ್ರ ಶಿಕ್ಷಣದ ಭಾಗವಾಗಿದೆ. ಆಟೋಟಗಳ ಮೂಲಕ ವಿಶ್ವಮಾನ್ಯತೆ ಪಡೆದ ಅನೇಕ ಕ್ರೀಡಾಪಟುಗಳು ನಮಗೆ ಆದರ್ಶವಾಗಿದ್ದು, ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಯೊಂದಿಗೆ ಜಿಲ್ಲೆ ಹಾಗೂ ಶಾಲೆಗೆ ಕೀರ್ತಿ ತನ್ನಿ ಎಂದು ಅವರು ಹೇಳಿದರು.

ಪೋಷಕರು ತಮ್ಮ ಮಕ್ಕಳನ್ನು ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ಸೀಮಿತವಾಗಿಸಲು ಓದಿನ ಕಡೆಗೆ ಆದ್ಯತೆ ನೀಡುತ್ತಾರೆ. ಆದರೆ, ಅನೇಕ ಮಕ್ಕಳಲ್ಲಿ ಓದಿಗಿಂತ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರತಿಭೆ ಮತ್ತು ಆಸಕ್ತಿ ಇರುತ್ತದೆ. ಅಂತಹ ಮಕ್ಕಳು ಪ್ರೋತ್ಸಾಹ ಸಿಗದೆ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಓದಿನಿಂದ ಮಾತ್ರವೇ ಸಾಧನೆ ಮಾಡಬಹುದು ಎಂಬುದು ಸೂಕ್ತ ನಿರ್ಧಾರವಲ್ಲ. ಅದರ ಜತೆಗೆ ಶಿಕ್ಷಣದ ಒಂದು ಭಾಗವಾಗಿರುವ ಕ್ರೀಡೆಗಳಲ್ಲೂ ಜಗತ್ತು ಬೆರಗಾಗಿ ನೋಡುವಂತೆ ಸಾಧನೆ ಮಾಡಬಹುದು, ವಿಶ್ವಮಾನ್ಯತೆ ಗಳಿಸಬಹುದು. ಅನೇಕರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ದೇಶದ ಘನತೆ ಹೆಚ್ಚಿಸಿದ ಸಾಧಕರು ಇದ್ದಾರೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಚಂದ್ರಶೇಖರ್ ಮಾತನಾಡಿ, ‘ಜಿಲ್ಲಾಮಟ್ಟದಲ್ಲಿ ನಡೆದ ಪ್ರೌಢಶಾಲಾ ಹಂತದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಒಟ್ಟು 70 ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ತೆರಳುತ್ತಿದ್ದಾರೆ. ಅವರ ಸುರಕ್ಷತೆಗೆ ಒತ್ತು ನೀಡಲಾಗಿದೆ, ಟ್ರ್ಯಾಕ್ ಸೂಟ್ ಕೊಡಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ಮಾತನಾಡಿ, ‘ರಾಜ್ಯಮಟ್ಟಕ್ಕೆ ಹೋಗುತ್ತಿರುವ ಮಕ್ಕಳಿಗೆ ಅಲ್ಲಿ ಊಟ, ವಸತಿ ಸೌಲಭ್ಯ ಒದಗಿಸಲಾಗಿದೆ, ಯಾವುದೇ ಸಮಸ್ಯೆ ಎದುರಾಗದಂತೆ ಮಕ್ಕಳ ಸುರಕ್ಷತೆಗೂ ಒತ್ತು ನೀಡಲಾಗಿದೆ’ ಎಂದರು.

ಮಕ್ಕಳೊಂದಿಗೆ ತಂಡದ ವ್ಯವಸ್ಥಾಪಕರಾಗಿ ಶಿಕ್ಷಕರಾದ ಅಂಬಿಕಾ, ವೆಂಕಟೇಶ್, ನಾರಾಯಣಸ್ವಾಮಿ ತೆರಳಿದ್ದಾರೆ ಎಂದು ಹೇಳಿದರು.

ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್, ವಿವಿಧ ತಾಲ್ಲೂಕುಗಳ ದೈಹಿಕ ಶಿಕ್ಷಣಾಧಿಕಾರಿಗಳಾದ ರಹೀಂ ಪಾಷಾ, ಮಂಜುನಾರ್ಥ, ವೆಂಕಟೇಶ್, ವೆಂಕಟಸ್ವಾಮಿ, ವಿಷಯ ಪರಿವೀಕ್ಷಕ ಸಮೀವುಲ್ಲಾ, ಶಿಕ್ಷಕಿ ಕೆ.ಲೀಲಾ ಇದ್ದರು.

ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್‌ 17 ವರ್ಷದೊಳಗಿನವರ ಬಾಲಕ, ಬಾಲಕಿಯರು ಆಯ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.