
ವೇಮಗಲ್: ವೇಮಗಲ್ ಹೋಬಳಿಯಾದ್ಯಂತ ಕಳೆದ ಎರಡು–ಮೂರು ದಿನಗಳಿಂದ ಭಾರಿ ಚಳಿಯ ನಡುವೆಯೇ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದಾಗಿ ಜನರು ಬೆಚ್ಚನೆಯ ಹೊದಿಕೆಗಳಾದ ಸ್ವೆಟರ್, ಕಂಬಳಿ, ಮಫ್ಲರ್ ಮತ್ತು ಬೆಚ್ಚಗಿನ ಕೈಗವಸುಗಳ ಮೊರೆ ಹೋಗಿದ್ದಾರೆ. ಜೊತೆಗೆ ಜನಸಾಮಾನ್ಯರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಸದಾ ಜನಜಂಗುಳಿಯಿಂದ ಇರುತ್ತಿದ್ದ ರಸ್ತೆಗಳು ಬಿಕೊ ಎನ್ನುತ್ತಿವೆ.
ವ್ಯಾಪಾರ-ವಹಿವಾಟು ಸಂಪೂರ್ಣ ಕುಂಠಿತಗೊಂಡಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಶುಷ್ಕ ಹವಾಮಾನ ಇರಬೇಕಿತ್ತು. ಆದರೆ, ವೇಮಗಲ್ ಪಟ್ಟಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಮೋಡ ಕಾರ್ಮೋಡ ಕವಿದ ವಾತಾವರಣವಿತ್ತು. ಸೂರ್ಯನ ದರ್ಶನವೇ ಆಗಲಿಲ್ಲ. ಮುಂಜಾನೆಯಿಂದ ಆರಂಭವಾದ ಜಿಟಿಜಿಟಿ ಮಳೆಯು ಮಲೆನಾಡಿನ ವಾತಾವರಣ ನೆನಪಿಸುತ್ತಿದೆ.
ದ್ವಿಚಕ್ರ ವಾಹನ ಸವಾರರು ಮಳೆ ಮತ್ತು ಚಳಿಯ ಹೊಡೆತಕ್ಕೆ ಸಿಲುಕಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆ ಪ್ರದೇಶಗಳು, ಬಸ್ ನಿಲ್ದಾಣ ಹಾಗೂ ಪ್ರಮುಖ ವೃತ್ತಗಳಲ್ಲಿ ಜನಸಂಚಾರ ವಿರಳವಾಗಿದೆ. ವ್ಯಾಪಾರಸ್ಥರು ಗಿರಾಕಿಗಳಿಲ್ಲದೆ ಕಾಯುವಂತಾಗಿದೆ.
ಹೋಬಳಿಯಾದ್ಯಂತ ರಾಗಿ ಮತ್ತು ಹುರುಳಿ ಕಟಾವಿನ ಕೆಲಸ ಚುರುಕಿನಿಂದ ಸಾಗಿತ್ತು. ಆದರೆ ಈ ಮಳೆ ರೈತರ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಹಲವು ರೈತರು ರಾಗಿ ತೆನೆಯನ್ನು ಕಟಾವು ಮಾಡಿ ಕಣಗಳಲ್ಲಿ ರಾಶಿ ಹಾಕಿದ್ದಾರೆ. ಕಾಳುಗಳು ಚೆನ್ನಾಗಿ ಒಣಗಲಿ ಎಂಬ ಉದ್ದೇಶಕ್ಕೆ ಪ್ರತಿದಿನ ಬೆಳಗ್ಗೆ ತೆನೆಯನ್ನು ಕಣದಲ್ಲಿ ಹರಡಿ ಬಿಸಿಲಿಗೆ ಹಾಕುತ್ತಿದ್ದರು. ಆದರೆ, ದಿಢೀರ್ ಮಳೆ ಆರಂಭವಾಗಿದ್ದರಿಂದ ಹರಡಿರುವ ತೆನೆಯನ್ನು ಧಾವಂತದಿಂದ ಒಂದೆಡೆ ಸೇರಿಸಿ, ಟಾರ್ಪಾಲಿನ್ ಮುಚ್ಚುವುದೇ ರೈತರಿಗೆ ನಿತ್ಯದ ಕಾಯಕವಾಗಿದೆ.
ಮಳೆ ನಿಂತು ಮೋಡ ಸರಿದು ಬಿಸಿಲು ಬಾರದಿದ್ದರೆ, ಈ ವರ್ಷ ಕೃಷಿ ಮಾಡಲು ಹಾಕಿದ ಬಂಡವಾಳವೂ ಮಣ್ಣು ಪಾಲಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತರು.
ಕಳೆದ ವಾರ ರಾಗಿ ಕಟಾವು ಮಾಡಿ ಕಣಕ್ಕೆ ತಂದಿದ್ದೇವೆ. ಕಾಳು ಚೆನ್ನಾಗಿ ಒಣಗಲಿ ಎಂದು ಬೆಳಗ್ಗೆ ಕಣದಲ್ಲಿ ಹರಡಿ ಹಾಕುತ್ತೇವೆ. ಆದರೆ, ಪ್ರತಿ ಅರ್ಧ ಗಂಟೆಗೊಮ್ಮೆ ಮಳೆ ಶುರುವಾಗುತ್ತಿದೆ. ದಿನಕ್ಕೆ ನಾಲ್ಕೈದು ಬಾರಿ ರಾಗಿ ಗುಡ್ಡೆ ಹಾಕಿ ಪ್ಲಾಸ್ಟಿಕ್ ಮುಚ್ಚುವುದೇ ಕೆಲಸವಾಗಿದೆ. ಮಳೆಯಿಂದ ರಾಗಿ ನೆನೆದರೆ ಬಣ್ಣ ಕೆಡುತ್ತದೆ. ವ್ಯಾಪಾರಿಗಳು ಕಡಿಮೆ ಬೆಲೆಗೆ ಕೇಳುತ್ತಾರೆ ಎಂದು ರೈತ ಬೈರೇಗೌಡ ಅಲವತ್ತುಕೊಂಡರು.
ಈ ಬಾರಿ ಹುರುಳಿ ಇಳುವರಿ ಚೆನ್ನಾಗಿ ಬಂದಿತ್ತು. ಆದರೆ ಈ ಅಕಾಲಿಕ ಸೋನೆ ಮಳೆಯು ಹುರುಳಿ ಗಿಡಕ್ಕೆ ಶಾಪವಾಗಿ ಪರಿಣಮಿಸಿದೆ. ತೇವಾಂಶ ಹೆಚ್ಚಾದರೆ ಕಾಯಿಗಳು ಕಪ್ಪಾಗಿ ಕೊಳೆಯುತ್ತವೆ. ಚಳಿ ಜೊತೆಗೆ ಸುರಿಯುವ ಈ ಮಳೆ ನಮ್ಮ ವರ್ಷದ ಶ್ರಮವನ್ನು ಮಣ್ಣು ಪಾಲು ಮಾಡುತ್ತಿದೆ ಎಂದು ಬೆಳಮಾರನಹಳ್ಳಿಯ ರೈತ ಮಹಿಳೆ ಮುನಿಯಮ್ಮ ತಿಳಿಸುತ್ತಾರೆ.
ಒಣಗಲು ಬಿಟ್ಟರೆ ಮಳೆ ಮುಚ್ಚಿಟ್ಟರೆ ಬೂಸ್ಟು ರಸ್ತೆ ಮೇಲೆ ಹರಡಲಾಗಿರುವ ರಾಗಿ ಬೆಳೆಯನ್ನು ಮಳೆಯಿಂದ ರಕ್ಷಿಸಲು ಟಾರ್ಪಲಿನ್ ಹಾಕಿ ಮುಚ್ಚಿಟ್ಟರೆತೇವಾಂಶದಿಂದ ರಾಗಿ ಮೆದೆಗೆ ಬೂಸ್ಟು ಬರುವ ಆತಂಕ ರೈತರಲ್ಲಿ ಎದುರಾಗಿದೆ. ಇನ್ನು ಹಾಗೆಯೇ ಬಿಟ್ಟರೆ ಮಳೆಯಲ್ಲಿ ನೆನೆದು ಕಾಳುಗಳು ಕಪ್ಪಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು. ಒಟ್ಟಾರೆ ಮಳೆ ನಿಂತಾಗ ರಾಗಿ ಫಸಲಿನ ಮೇಲೆ ಹೊದಿಸಿದ ಟಾರ್ಪಲಿನ್ ತೆಗೆಯುವುದು ಮತ್ತೆ ಮಳೆ ಬರುವಂತಾದರೆ ಟಾರ್ಪಲಿನ್ ಹೊದಿಸುವುದು ರೈತರಿಗೆ ಚೌಕಾಬಾರ ಆಟಂದಂತಾಗಿದೆ. ರಾಗಿ ಜೊತೆಗೆ ಹುರುಳಿ ಬೆಳೆಯೂ ಕಟಾವಿಗೆ ಬಂದಿದ್ದು ಈ ಸೋನೆ ಮಳೆಯಿಂದ ಹುರುಳಿ ಕಾಯಿಗಳು ಗಿಡದಲ್ಲೇ ಕೊಳೆಯುವ ಅಥವಾ ಕಪ್ಪಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ರೈತರು. ಹೊಲಗಳಲ್ಲಿ ರಾಗಿ ಒಣಗಿ ನಿಂತಿದ್ದು ಯಂತ್ರಗಳ ಸಹಾಯದಿಂದ ಕಟಾವು ಮಾಡಲು ರೈತರು ಕಾದು ಕುಳಿತಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ಯಂತ್ರಗಳ ಮಾಲೀಕರೂ ಬರಲು ಒಪ್ಪುತ್ತಿಲ್ಲ. ಇತ್ತ ಮಳೆಯೂ ಬಿಡುತ್ತಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.