ADVERTISEMENT

ಕೋಲಾರ: ಹಳ್ಳಿ, ಕೆರೆ, ಬಯಲು ಪ್ರದೇಶಕ್ಕೆ ನಗರದ ತ್ಯಾಜ್ಯ!

ನಗರಸಭೆ ಸಿಬ್ಬಂದಿ ಎಡವಟ್ಟು; ಅವೈಜ್ಞಾನಿಕ, ಅನಧಿಕೃತ–ಕೆಂದಟ್ಟಿ ಘಟಕಕ್ಕೆ ಸಾಗಿಸುತ್ತಿಲ್ಲ ಏಕೆ?

ಕೆ.ಓಂಕಾರ ಮೂರ್ತಿ
Published 24 ಜೂನ್ 2025, 6:24 IST
Last Updated 24 ಜೂನ್ 2025, 6:24 IST
ಕೋಲಾರ ನಗರದ ತ್ಯಾಜ್ಯವನ್ನು ಹೊರವಲಯ ಪ್ರದೇಶಕ್ಕೆ ಕೊಂಡೊಯ್ದು ಹಾಕಿ ಬೆಂಕಿ ಹಚ್ಚಿರುವ ದೃಶ್ಯ
ಕೋಲಾರ ನಗರದ ತ್ಯಾಜ್ಯವನ್ನು ಹೊರವಲಯ ಪ್ರದೇಶಕ್ಕೆ ಕೊಂಡೊಯ್ದು ಹಾಕಿ ಬೆಂಕಿ ಹಚ್ಚಿರುವ ದೃಶ್ಯ   

ಕೋಲಾರ: ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸುತ್ತಿರುವ ತ್ಯಾಜ್ಯವನ್ನು ಅವೈಜ್ಞಾನಿಕ ಹಾಗೂ ಅನಧಿಕೃತವಾಗಿ ನಗರದ ಸುತ್ತಮುತ್ತ ಹಳ್ಳಿಗಳು, ಅರಣ್ಯ ಪ್ರದೇಶ, ಕೆರೆ ಸುತ್ತಮುತ್ತಲಿನ ಪ್ರದೇಶ, ರಸ್ತೆ ಬದಿ, ರೈತರ ಜಮೀನು, ಬಯಲು ಪ್ರದೇಶಕ್ಕೆ ಕೊಂಡೊಯ್ದು ಎಸೆಯುತ್ತಿರುವುದು ಪತ್ತೆ ಆಗಿದೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲೆಂದೇ ಕೋಲಾರ ತಾಲ್ಲೂಕಿನ ಕೆಂದಟ್ಟಿಯಲ್ಲಿ 10 ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಆದರೆ, 10 ಕಿ.ಮೀ ದೂರದಲ್ಲಿರುವ ಅಲ್ಲಿಗೆ ನಗರಸಭೆಯ ಕೆಲ ಕಸದ ವಾಹನಗಳು ಹೋಗುವುದೇ ಇಲ್ಲ. ಬದಲಾಗಿ ಸುತ್ತಲಿನ ಪ್ರದೇಶದ ಕೆರೆ, ಕಾಲುವೆ, ತಗ್ಗಿನ ಪ್ರದೇಶಕ್ಕೆ ತ್ಯಾಜ್ಯ ಸುರಿದು ಬಿಲ್‌ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಟ್ರ್ಯಾಕ್ಟರ್‌, ಟಿಪ್ಪರ್‌ಗಳಲ್ಲಿ ತ್ಯಾಜ್ಯ ಕೊಂಡೊಯ್ದು ನಗರ ಹೊರವಲಯದ ಮೂರಂಡಹಳ್ಳಿಯ ಪೌರಕಾರ್ಮಿಕರ ವಸತಿಗೃಹ ಬಳಿ ಪಾಳುಬಿದ್ದ ಬಾವಿ ಬಳಿ ಎಸೆಯುತ್ತಿದ್ದಾರೆ. ಹಾಗೆಯೇ ಶ್ರೀನಿವಾಸಪುರ ರಸ್ತೆಯ ಸೋಲಾರ್‌ ಸಿಟಿ ಹಿಂಭಾಗ ನೀಲಗಿರಿ ತೋಪು ಬಳಿ ಗುಂಡಿಗೆ ಹಾಕುತ್ತಿದ್ದಾರೆ. ನಂತರ ಕಸಕ್ಕೆ ಬೆಂಕಿ ಹಾಕಿ ಸುಡುತ್ತಿದ್ದು, ಸುತ್ತಮುತ್ತಲಿನ ವಾತಾವರಣ ಕಲುಷಿತವಾಗುತ್ತಿದೆ. ಕೋಡಿ ಕಣ್ಣೂರು ಕೆರೆ, ಕೋಲಾರಮ್ಮ ಕೆರೆ ಏರಿ, ರಾಜಕಾಲುವೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ –75ರ ಸುತ್ತಮುತ್ತ ಕಸ ಎಸೆಯಲಾಗುತ್ತಿದೆ. ಸುತ್ತಮುತ್ತಲಿನ ನಿವಾಸಿಗಳು ಕಸ ಸಮಸ್ಯೆಯಿಂದ ನಲುಗುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಘನತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಹಾಕುತ್ತಿರುವುದರಿಂದ ನೊಣ, ಸೊಳ್ಳೆ, ನಾಯಿ ಹಾವಳಿ ಜೊತೆಗೆ ದುರ್ವಾಸನೆ ಬೀರುತ್ತಿದೆ. ಕೆರೆಗಳು ಕಲುಷಿತಗೊಳ್ಳುತ್ತಿದ್ದು, ಬಹಳ ತೊಂದರೆ ಉಂಟಾಗುತ್ತಿದೆ’ ಎಂದು ನಿವಾಸಿಗಳು ದೂರಿದ್ದಾರೆ.

ಈ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ನೋಟಿಸ್‌ ನೀಡಿ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಜಿಲ್ಲಾಧಿಕಾರಿಯೂ ಎಚ್ಚರಿಕೆ ನೀಡಿದ್ದಾರೆ. ಇಷ್ಟಾಗಿಯೂ ನಗರಸಭೆಯ ಆರೋಗ್ಯ ನಿರೀಕ್ಷಕರು ಮಾತ್ರ ತಮಗೇನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅವರು ಕಚೇರಿಯಲ್ಲೂ ಕಾಣಲ್ಲ, ಎಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ ಎಂಬುದನ್ನೂ ಗಮನಿಸುತ್ತಿಲ್ಲ. ಕೆಂದಟ್ಟಿ ಘಟಕಕ್ಕೆ ಹಸಿ ಕಸ ಮಾತ್ರ ಸಾಗಿಸುತ್ತಿದ್ದಾರೆ. ಉಳಿದ ಕಸ ಬಯಲು ಪಾಲಾಗುತ್ತಿದೆ. ಕೋಲಾರ ನಗರದಲ್ಲೂ ಕಸ ವಿಂಗಡಣೆ ಸರಿಯಾಗಿ ನಡೆಯುತ್ತಿಲ್ಲ. ಮುಖ್ಯ ರಸ್ತೆಗಳು, ಬಡಾವಣೆಗಳು ಕಸಮಯವಾಗಿವೆ.

‘ಕೆಂದಟ್ಟಿ ಘಟಕ ಇದ್ದರೂ ನಗರ ಹೊರವಲಯದ ಪ್ರದೇಶಗಳಿಗೆ ಕಸ ಎಸೆಯುತ್ತಿದ್ದಾರೆ. ನಗರಕ್ಕೆ ಯಾರಾದರೂ ಸಚಿವರು ಬರುತ್ತಾರೆ ಎಂದಾಗ ಮಾತ್ರ ಕಸ ತೆಗೆದು ಬ್ಲೀಚಿಂಗ್‌ ಪೌಡರ್‌ ಹಾಕುತ್ತಾರೆ. ಇನ್ನುಳಿದಂತೆ ಕಸವನ್ನು ನಾಯಿಗಳು ಎಳೆದಾಡಿ ರಸ್ತೆಗೆ ತಂದು ಹಾಕಿದರೂ ನಗರಸಭೆಯ ಯಾರೊಬ್ಬರೂ ಗಮನಿಸುವುದಿಲ್ಲ. ಪೌರಕಾರ್ಮಿಕರ ಕೊರತೆ ಇದೆ. ಕೆಲ ಪೌರಕಾರ್ಮಿಕರನ್ನು ಕಸದ ಗಾಡಿ ಚಲಾಯಿಸಲು ನಿಯೋಜಿಸುತ್ತಿದ್ದಾರೆ’ ಎಂದು ಟಮಕ ನಿವಾಸಿ, ಸಾಮಾಜಿಕ ಕಾರ್ಯಕರ್ತ ಸುರೇಶ್‌ ಕುಮಾರ್‌ ಆರೋಪಿಸಿದ್ದಾರೆ.

ಇನ್ನು ಮಾಂಸದಂಗಡಿಗಳು ತ್ಯಾಜ್ಯವನ್ನು ಚರಂಡಿ, ರಾಜ್ಯಕಾಲುವೆ ಸೇರಿದಂತೆ ಎಲ್ಲೆ ಬೇಕೆಂದರಲ್ಲಿ ಎಸೆಯುತ್ತಿದ್ದಾರೆ. ಪೌರಕಾರ್ಮಿಕರು ಇಲ್ಲಿ ಸರಿಯಾಗಿ ತ್ಯಾಜ್ಯ ಸಂಗ್ರಹ ಮಾಡದಿರುವುದೇ ಇದಕ್ಕೆ ಕಾರಣ.

ಬಡಾವಣೆಗಳಲ್ಲಿ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸುವವರು, ಕಂಟ್ರ್ಯಾಕ್ಟರ್‌ಗಳು, ಬಿಲ್ಡರ್‌ಗಳು ಕಟ್ಟಡ ಅವಶೇಷಗಳನ್ನು ಟ್ರ್ಯಾಕ್ಟರ್‌, ಲಾರಿಗಳಲ್ಲಿ ತುಂಬಿಕೊಂಡು ಬಂದು ರಸ್ತೆ ಬದಿಗೆ ಸುರಿದು ಹೋಗುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಇಷ್ಟೊಂದು ಕಟ್ಟಡ ತ್ಯಾಜ್ಯ ತಂದು ಹಾಕುತ್ತಿದ್ದರೂ ನಗರಸಭೆ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು ಶೋಚನೀಯ.

ನಗರಕ್ಕೆ ಹೊಂದಿಕೊಂಡಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿವೆ.‌ ಇಲ್ಲೂ ಕಟ್ಟಡ ತಾಜ್ಯದ ರಾಶಿ ಬಿದ್ದಿದೆ. ವಿವಿಧ ಕಾರ್ಖಾನೆಗಳ ಕಸದ ರಾಶಿಯನ್ನೂ ರಸ್ತೆ ಬದಿಯಲ್ಲಿಯೋ, ಗುಂಡಿಗಳಲ್ಲೂ ಎಸೆದು ಹೋಗುತ್ತಿರುವುದನ್ನು ಕಾಣಬಹುದು.

ಕೋಲಾರ ನಗರದ ಹೊರವಲಯದ ಕೋಡಿ ಕಣ್ಣೂರು ಕೆರೆ ಸುತ್ತಲಿನ ಪ್ರದೇಶದಲ್ಲಿ ತ್ಯಾಜ್ಯ ಸುರಿದಿರುವುದು 
ರಸ್ತೆ ಬದಿ ಕಟ್ಟಡ ತ್ಯಾಜ್ಯದ ವಿಲೇವಾರಿ
ಕೋಲಾರ ಹೊರವಲಯದ ಹಳ್ಳಿ ಬಳಿ ತ್ಯಾಜ್ಯ ಕೊಂಡೊಯ್ದು ಸುರಿದಿರುವುದು
ಕೋಲಾರ ಸುತ್ತಮುತ್ತ ಎಲ್ಲಿ ಬೇಕೆಂದರಲ್ಲಿ ತ್ಯಾಜ್ಯ ವಿಲೇವಾರಿ
ಕಸ ಸುರಿದು ಬೆಂಕಿ ಹಚ್ಚುತ್ತಿರುವುದು ಪತ್ತೆ ನಗರಸಭೆ ಆರೋಗ್ಯ ನಿರೀಕ್ಷಕರ ದಿವ್ಯ ನಿರ್ಲಕ್ಷ್ಯ ಎಲ್ಲೆಂದರಲ್ಲಿ ಕಸ; ಗ್ರಾಮಾಂತರದ ಪರಿಸರ ಹಾಳು

ತಿಂಗಳಿಗೆ ಮೂರ್ನಾಲ್ಕು ನೋಟಿಸ್‌

ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ಸಂಬಂಧ ಕೋಲಾರ ನಗರಸಭೆಗೆ ನೋಟಿಸ್‌ ಮೂಲಕ ಕಾನೂನು ಕ್ರಮದ ಎಚ್ಚರಿಕೆ ಕೊಡಲಾಗಿದೆ. ತಿಂಗಳಿಗೆ ಮೂರ್ನಾಲ್ಕು ನೋಟಿಸ್‌ ನೀಡಲಾಗಿದೆ. ವೈಜ್ಞಾನಿಕ ವಿಲೇವಾರಿ ಮಾಡಲು ಸೂಚನೆ ನೀಡುತ್ತಲೇ ಇದ್ದೇವೆ. ಈ ವಿಚಾರವನ್ನು ಹಲವು ಬಾರಿ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಇನ್ನು ಜಿಲ್ಲಾಧಿಕಾರಿಯೇ ಕ್ರಮ ಕೈಗೊಳ್ಳಬೇಕು ರಾಜು ಪರಿಸರ ಅಧಿಕಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ದಂಡ ವಿಧಿಸಿ ಮೊಕದ್ದಮೆ ದಾಖಲು

ಕಸವನ್ನು ಎಲ್ಲಿ ಬೇಕೆಂದರಲ್ಲಿ ಎಸೆಯುವುದು ನಮ್ಮ ಗಮನಕ್ಕೂ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೂ ತಂದು ಸಂಬಂಧಪಟ್ಟವರ ಎಚ್ಚರಿಕೆ ನೀಡಲಾಗಿದೆ. ದಂಡ ವಿಧಿಸಿ ಮೊಕದ್ದಮೆ ದಾಖಲಿಸಲು ಮುಂದಾಗುತ್ತೇವೆ. ಮೂಲದಲ್ಲಿಯೇ ಕಸ ವಿಂಗಡಣೆಗೆ ಕ್ರಮ ವಹಿಸಿದ್ದು ಮಂಗಳವಾರದಿಂದಲೇ ಪ್ರತಿ ವಾರ್ಡ್‌ನಲ್ಲಿ ‘ಕಮ್ಯೂನಿಟಿ ಮೊಬಿಲೈಸರ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಗರದ 28ನೇ ವಾರ್ಡ್‌ನಿಂದಲೇ ಅರಿವು ಕಾರ್ಯಕ್ರಮ ಆರಂಭವಾಗಲಿದೆ. 30 ಜನರು ತಂಡ ರಚಿಸಿ ಜನಾಂದೋಲನ ಹಮ್ಮಿಕೊಳ್ಳಲಾಗುವುದು. ಎಲ್ಲಾ ವಾರ್ಡ್‌ಗಳಲ್ಲಿ ಪ್ರತಿದಿನ ಈ ಕಾರ್ಯಕ್ರಮ ನಡೆಯಲಿದೆ. ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ವಾರ್ಡ್ ಸದಸ್ಯರು ಆರೋಗ್ಯ ನಿರೀಕ್ಷರು ಎಂಜಿನಿಯರ್‌ ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ. ನಿವಾಸಿಗಳು ಕಸ ವಿಂಗಡಿಸಿ ಕೊಡಬೇಕು ನವೀನ್‌ ಚಂದ್ರ ಆಯುಕ್ತ ಕೋಲಾರ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.