ಕೋಲಾರ: ಮತ ಕಳ್ಳತನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಯೂತ್ ಕಾಂಗ್ರೆಸ್‌ನಿಂದ ನಗರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಬಣ ಜಗಳ ನಡೆದಿದೆ.
ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ ಹಾಗೂ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರಿದ್ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ಕೋಲಾರ ಹಾಗೂ ಮಾಲೂರು ಕಾಂಗ್ರೆಸ್ ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ್ದರು. ಕೋಲಾರದವರು ಪುಟಗೋಸಿ ಎಂದು ಸುನಿಲ್ ನಂಜೇಗೌಡ ಬಣದವರು ಹೇಳಿದ್ದು ಮತ್ತೊಂದು ಬಣಕ್ಕೆ ಸಿಟ್ಟು ತರಿಸಿದೆ. ಶಾಸಕರ ಪುತ್ರನೆಂದು ಧಮ್ಕಿ ಹಾಕಬಹುದೇ ಎಂದು ಪ್ರಶ್ನಿಸಿದರು. ‘ಶಿಷ್ಟಾಚಾರ ಉಲ್ಲಂಘಿಸಿದ್ದಾರೆ, ಶಾಸಕರ ಮಗ ಎಂದುಕೊಂಡು ಬಂದರೆ ಕೋಲಾದಲ್ಲಿ ನಡೆಯುವುದಿಲ್ಲ. ಶಿಷ್ಟಾಚಾರದಂತೆ ಅಧ್ಯಕ್ಷರನ್ನು ಸ್ವಾಗತಿಸಬೇಕಿರುವುದು ಜಿಲ್ಲಾ ಯೂತ್ ಅಧ್ಯಕ್ಷರು, ಕಾಸು ಖರ್ಚು ಮಾಡಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಾವು’ ಎಂದು ಸೈಯದ್ ಅಫ್ರಿದ್ ವಾಗ್ದಾಳಿ ನಡೆಸಿದರು.
ಎರಡೂ ಬಣಗಳು ಮೆರವಣಿಗೆಯ ಶ್ರೇಯ ಪಡೆಯಲು ಕಿತ್ತಾಡಿದರು. ಮೆರವಣಿಗೆ ತಮ್ಮ ನೇತೃತ್ವದಲ್ಲಿ ನಡೆಯಬೇಕೆಂದು ಸುನಿಲ್ ನಂಜೇಗೌಡ ಬಣದ ವಾದವಾದರೆ, ತಮ್ಮ ಬಣದಲ್ಲಿ ನಡೆಯಬೇಕೆಂದು ಅಫ್ರಿನ್ ಬಣದವರು ವಾದ ಮುಂದಿಟ್ಟರು.
ಸುನಿಲ್ ನಂಜೇಗೌಡ ಬಣದವರು ಬೈರೇಗೌಡ ನಗರದಿಂದ ಬಂಗಾರಪೇಟೆ ವೃತ್ತದವರೆಗೆ ಮೆರವಣಿಗೆ ನಡೆಸಲು ಪೊಲೀಸರ ಅನುಮತಿ ಪಡೆದಿದ್ದರು. ಆದರೆ, ಪೊಲೀಸರ ಅನುಮತಿ ಉಲ್ಲಂಘಿಸಿ ಇಟಿಸಿಎಂ ವೃತ್ತದ ಕಡೆ ತೆರಳಿದರು. ಇತ್ತ ಅಫ್ರಿನ್ ಬಣದವರು ಇಟಿಸಿಎಂ ವೃತ್ತದಿಂದ ಪದವಿ ಕಾಲೇಜು ವೃತ್ತಕ್ಕೆ ಮೆರವಣಿಗೆ ನಡೆಸಲು ಅನುಮತಿ ಪಡೆದಿದ್ದರು.
ಹೀಗಾಗಿ, ಇಟಿಸಿಎಂ ವೃತ್ತದಲ್ಲಿ ಎರಡೂ ಬಣದವರು ಮುಖಾಮುಖಿಯಾದರು. ಸುನಿಲ್ ನಂಜೇಗೌಡ ಬಣದಲ್ಲಿ ಹೆಚ್ಚು ಜನರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತು. ಪೊಲೀಸರು ಮಧ್ಯಪ್ರವೇಶ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು.
ವೇದಿಕೆ ಕಾರ್ಯಕ್ರಮದತ್ತ ಹೋಗದಂತೆ ಸುನಿಲ್ ನಂಜೇಗೌಡ ಬಣದವರನ್ನು ಪೊಲೀಸರು ತಡೆದರು. ಬಣದ ಮುಖಂಡರು, ‘ಸುನಿಲ್ ಗೌಡ ಅವರನ್ನು ನಿರ್ಲಕ್ಷಿಸಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ ಹೋಗುವುದು ಬೇಡ’ ಎಂದು ಪಟ್ಟು ಹಿಡಿದರು. ಸುನಿಲ್ ಮುಂದೆ ಹೆಜ್ಜೆ ಇಡಲು ಮುಂದಾದರು, ಆದರೆ ಬೆಂಬಲಿಗರು ಬಿಡಲಿಲ್ಲ. ಹೀಗಾಗಿ, ಈ ಬಣದವರು ಸುನಿಲ್ ಅವರಿಗೆ ಜೈಘೋಷ ಹಾಕುತ್ತಾ ವಾಪಸ್ ಹೋದರು.
ಇತ್ತ ಸೈಯದ್ ಆಫ್ರಿದ್ ಬಣದವರು ಘೋಷಣೆ ವಾಕ್ಯದೊಂದಿಗೆ ಫುಡ್ ಕೋರ್ಟ್ ಬಳಿ ವೇದಿಕೆ ಕಾರ್ಯಕ್ರಮ ನಡೆಸಿದರು. ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರ ಉದಯ ಬಾನು ಅವರನ್ನು ಸುನಿಲ್ ನಂಜೇಗೌಡ ಬಣದವರು ಅದ್ದೂರಿಯಾಗಿ ಸ್ವಾಗತಿಸಿದರು. ಪಟಾಕಿ ಹೊಡೆದು ಹೂಮಾಲೆ ಹಾಕಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರ ಉದಯ ಬಾನು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಪಾಲ್ಗೊಂಡಿದ್ದರು.
‘ಬ್ಯಾನರ್ ವಿಚಾರಕ್ಕಾಗಿ ಸಮಸ್ಯೆ ಉಂಟಾಗಿದೆ. ನಾವೆಲ್ಲಾ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳುತ್ತೇವೆ’ ಎಂದು ಸುನಿಲ್ ನಂಜೇಗೌಡ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಗಲ್‌ಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್, ನಗರ ಠಾಣೆ ಇನ್‌ಸ್ಪೆಕ್ಟರ್ ಸದಾನಂದ ನೇತೃತ್ವದಲ್ಲಿ ಪೊಲೀಸರು ಬಣಗಳ ಜಗಳ ನಿಲ್ಲಿಸಲು ಹರಸಾಹಸಪಟ್ಟರು.
ಸುನಿಲ್ ನಂಜೇಗೌಡ ಹಾಸನದ ಯುವ ಕಾಂಗ್ರೆಸ್ ಉಸ್ತುವಾರಿ. ಇಲ್ಲೇಕೆ ಬ್ಯಾನರ್ ಹಾಕಿದ್ದಾರೆ? ಶಿಷ್ಟಾಚಾರದ ಬಗ್ಗೆ ಅವರಿಗೆ ಗೊತ್ತಿಲ್ಲ. ರಾಜ್ಯ ರಾಷ್ಟ್ರೀಯ ಅಧ್ಯಕ್ಷರಿಗೆ ಈ ಘಟನೆ ಗೊತ್ತಿಲ್ಲಸೈಯದ್ ಅಫ್ರಿದ್ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ
ಯುವ ಕಾಂಗ್ರೆಸ್ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿದೆ. ಇದೊಂದು ಕೆಟ್ಟ ಗಳಿಗೆ ಅಷ್ಟೆ. ಏನೇ ಸಮಸ್ಯೆ ಇದ್ದರೂ ಸರಿಪಡಿಸಿಕೊಳ್ಳುತ್ತೇವೆಸುನಿಲ್ ನಂಜೇಗೌಡ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.