ADVERTISEMENT

20 ವರ್ಷದ ಬಳಿಕ ಕೋಲಾರಮ್ಮ ಕೆರೆ ಭರ್ತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 6:47 IST
Last Updated 24 ಸೆಪ್ಟೆಂಬರ್ 2021, 6:47 IST
ಕೋಲಾರದ ಕೋಲಾರಮ್ಮ ಕೆರೆ ಕೋಡಿ ಬಿದ್ದಿರುವುದು
ಕೋಲಾರದ ಕೋಲಾರಮ್ಮ ಕೆರೆ ಕೋಡಿ ಬಿದ್ದಿರುವುದು   

ಕೋಲಾರ: ಸುಮಾರು ಎರಡು ದಶಕಗಳ ನಂತರ ಕೋಲಾರಮ್ಮ ಕೆರೆ ಗುರುವಾರ ಕೋಡಿ ಬಿದ್ದಿದೆ. 750 ಎಕರೆ ವಿಸ್ತೀರ್ಣದ ಕೆರೆ ಮೈ ತುಂಬಿಕೊಂಡಿದ್ದು, ಜನಾಕರ್ಷಣೆಯ ಕೇಂದ್ರವಾಗಿದೆ.

ಕೆರೆ ಕೋಡಿ ಹರಿಯುತ್ತಿರುವುದನ್ನು ವೀಕ್ಷಿಸಲು ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದುದು ಕಂಡು ಬಂತು. ಮಕ್ಕಳು ನೀರಲ್ಲಿ ಆಟವಾಡಿ ಸಂತಸಪಡುತ್ತಿದ್ದ ದೃಶ್ಯಗಳು ಕಾಣುತ್ತಿತ್ತು. ಕಾಲೇಜು ಯುವಕ, ಯುವತಿಯರು ಕೆರೆಕೋಡಿ ಮೇಲೆ ನಿಂತು ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದರು. ಕೆರೆ ತುಂಬಿರುವುದಕ್ಕೆ ಖುಷಿ ಪಟ್ಟಿರುವ ಕೆರೆಯ ಅಂಚಿನಲ್ಲಿರುವ ಗಾಂಧಿನಗರದ ನಿವಾಸಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಕೋಲಾರದಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ಮಳೆಯಾಗುತ್ತಿದೆ. ಜೊತೆಗೆ ಕೆ.ಸಿ ವ್ಯಾಲಿ ನೀರು ನಿರಂತರವಾಗಿ ಹರಿಯುತ್ತಿರುವ ಕಾರಣ, ಎರಡೂ ಕಡೆಯ ಕೋಡಿಯಲ್ಲೂ ನೀರು ಹರಿದು ಮುಂದೆ ಸಾಗುತ್ತಿದೆ.

ADVERTISEMENT

ಕೋಲಾರಮ್ಮನ ಕೆರೆ ತುಂಬಿರುವುದರಿಂದ ಸುತ್ತ ಮುತ್ತ ಸುಮಾರು ಎರಡು ಕಿಲೋಮೀಟರ್ ದೂರ ಅಂತರ್ಜಲ ವೃದ್ಧಿಯಾಗುವುದರಿಂದ ರೈತರು ಖುಷಿಗೊಂಡಿದ್ದಾರೆ. ಹಿಂದೆ ಕಳೆದ ಕೆಲವು ವರ್ಷಗಳಿಂದ ಮಳೆಯಿಲ್ಲದೆ ಕೆರೆ ಬತ್ತಿ ಹೋಗಿತ್ತು. ಕೆರೆಯಲ್ಲಿ ನೀರಿಲ್ಲದೆ ಅಂತರ್ಜಲವೂ ಪಾತಾಳಕ್ಕೆ ಹೋಗಿತ್ತು. ಜಮೀನುಗಳು ಬೀಳು ಬಿದ್ದಿದ್ದವು. 1,500 ಅಡಿ ಆಳಕ್ಕೆ ಕೊಳವೆಬಾವಿ ತೋಡಿದರೂ ನೀರು ಸಿಗುತ್ತಿರಲಿಲ್ಲ. ಹೀಗಾಗಿ ಅಲ್ಲಿನ ಸುತ್ತಮುತ್ತ ರೈತರು ಕೃಷಿ ಚಟುವಟಿಕೆಗಳನ್ನೇ ನಿಲ್ಲಿಸಿದ್ದರು.

ಜನತೆಗಾಗಿ ತೋಡಿದ್ದ ಕೊಳವೆಬಾವಿಗಳಲ್ಲೂ ನೀರಿಲ್ಲದೆ ಬತ್ತಿ ಹೋಗಿದ್ದವು. ಆದರೆ, ಕಳೆದ ನಾಲ್ಕೈದು ತಿಂಗಳಿನಿಂದ ಕೆ.ಸಿ ವ್ಯಾಲಿ ನೀರು ಕೆರೆಗೆ ಹರಿದು ಬರುತ್ತಿದ್ದರಿಂದ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲೂ ನೀರು ಕಾಣಿಸಿಕೊಂಡಿತು. ಕೋಲಾರ ನಗರಸಭೆಯಿಂದ ತೋಡಿಸಲಾಗಿದ್ದ ಕೊಳವೆಬಾವಿಗಳಲ್ಲೂ ನೀರು ಬರಲು ಆರಂಭಿಸಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿದ್ದ ನೀರಿನ ಸಮಸ್ಯೆಯೂ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.