ADVERTISEMENT

ಕೋಮುಲ್‌: ಶಾಸಕರ ಕಿತ್ತಾಟದಲ್ಲಿ ಮಹಿಳೆ ಹೆಸರು ಮುಂಚೂಣಿಗೆ!

ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಬಿಕ್ಕಟ್ಟು ಮುಂದುವರಿಕೆ–ಸಿ.ಎಂ ಮಟ್ಟದಲ್ಲಿ ಲಾಬಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 8:33 IST
Last Updated 3 ಜುಲೈ 2025, 8:33 IST
ಮಹಾಲಕ್ಷ್ಮಿ
ಮಹಾಲಕ್ಷ್ಮಿ   

ಕೋಲಾರ: ಕೋಲಾರ ಹಾಲು ಒಕ್ಕೂಟದ (ಕೋಮುಲ್‌) ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಎಸ್‌.ಎನ್‌.ನಾರಾಯಣಸ್ವಾಮಿ ಕಿತ್ತಾಟ ಬೆನ್ನಲೇ ಮೂರನೇ ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ.

ಒಕ್ಕೂಟಕ್ಕೆ ಮಹಿಳಾ ಮೀಸಲು ಕ್ಷೇತ್ರಗಳಿಂದ ಗೆದ್ದು ನಿರ್ದೇಶಕರಾಗಿರುವ ಮಹಾಲಕ್ಷ್ಮಿ ಪ್ರಸಾದ್‌ ಬಾಬು (ಕೋಲಾರ ಉತ್ತರ ಕ್ಷೇತ್ರ) ಹಾಗೂ ಆರ್‌.ಕಾಂತಮ್ಮ ಸೋಮಣ್ಣ (ಕೋಲಾರ ದಕ್ಷಿಣ ಕ್ಷೇತ್ರ) ಹೆಸರನ್ನು ಅಧ್ಯಕ್ಷರ ಸ್ಥಾನಕ್ಕೆ ಹರಿಬಿಡಲಾಗಿದೆ. ಮಹಿಳೆಯರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ. ಈ ಮಹಿಳಾ ನಿರ್ದೇಶಕರಿಬ್ಬರೂ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಜುಲೈ 5ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮಹಾಲಕ್ಷ್ಮಿ ಅವರು ಕೆ.ಎಚ್‌.ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಗೆದ್ದಿದ್ದು ಘಟಬಂಧನ್‌ ಬೆಂಬಲಿತ ಅಭ್ಯರ್ಥಿ ಕೆ.ಆರ್‌.ರೇಣುಕಾ ವಿರುದ್ಧ. ನಗರಸಭೆ ಮಾಜಿ ಅಧ್ಯಕ್ಷೆಯೂ ಆಗಿರುವ ಮಹಾಲಕ್ಷ್ಮಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಸಾದ್‌ ಬಾಬು ಪತ್ನಿ. ಇನ್ನು ಕಾಂತಮ್ಮ ಅವರು ಘಟಬಂಧನ್‌ನಲ್ಲಿ ಗುರುತಿಸಿಕೊಂಡಿದ್ದು, ನಂಜೇಗೌಡ ಬೆಂಬಲಿತರು. ಅವರು ಎಸ್‌.ಎನ್‌.ನಾರಾಯಣಸ್ವಾಮಿ ಬೆಂಬಲಿತ ಪ್ರತಿಭಾ ಎದುರು ಗೆದ್ದಿದ್ದಾರೆ. ಹಿಂದಿನ ಅವಧಿಯಲ್ಲೂ ಕಾಂತಮ್ಮ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ADVERTISEMENT

ಇವರಿಬ್ಬರ ಹೆಸರು ಹರಿದು ಬಿಡಲು ಇನ್ನೊಂದು ಕಾರಣವಿದೆ. ನಂಜೇಗೌಡ ಹಾಗೂ ನಾರಾಯಣಸ್ವಾಮಿ ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದು ಕುಳಿತಿರುವುದರಿಂದ ‘ಕೈ’ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಇಬ್ಬರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಪರಿಗಣಿಸಿದರೂ ಮತ್ತೊಬ್ಬರು ಅಸಮಾಧಾನಗೊಳ್ಳುವುದು ನಿಶ್ಚಿತ. ಈಗಾಗಲೇ ಮಾತಿನಲ್ಲೇ ಇಬ್ಬರೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಚುನಾಯಿತ 13 ನಿರ್ದೇಶಕರ ಪೈಕಿ ಘಟಬಂಧನ್ (ಕೆ.ಆರ್‌.ರಮೇಶ್‌ ಕುಮಾರ್‌ ಬಣ) ಬೆಂಬಲಿತ ಏಳು ನಿರ್ದೇಶಕರು ಇದ್ದಾರೆ. ಮುನಿಯಪ್ಪ ಬಣದ ಇಬ್ಬರು ನಿರ್ದೇಶಕರು ಗೆದ್ದಿದ್ದಾರೆ. ಜೆಡಿಎಸ್‌–ಬಿಜೆಪಿ ಬೆಂಬಲಿತ ನಾಲ್ವರು ನಿರ್ದೇಶಕರಿದ್ದಾರೆ. ಇನ್ನು ಸರ್ಕಾರದ ಪ್ರತಿನಿಧಿಗಳು ಐವರು ಇದ್ದಾರೆ. ಒಟ್ಟು 18 ನಿರ್ದೇಶಕರಿದ್ದು, ಅಧ್ಯಕ್ಷ ಸ್ಥಾನ ಗೆಲ್ಲಲು 10 ನಿರ್ದೇಶಕರ ಬೆಂಬಲ ಬೇಕಿದೆ.

ಹೀಗಾಗಿ, ‘ಕೈ’ ವರಿಷ್ಠರು ಇಬ್ಬರು ಶಾಸಕರನ್ನು ಕೋಪ ತಣಿಸಲು ಹೊಸ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಆಕಸ್ಮಾತ್‌ ನಂಜೇಗೌಡರಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಭರವಸೆ ಖಚಿತವಾದರೆ ನಾರಾಯಣಸ್ವಾಮಿ ಅವರ ಕೋಮುಲ್‌ ಅಧ್ಯಕ್ಷ ಸ್ಥಾನದ ಹಾದಿ ಸುಗಮವಾಗುತ್ತದೆ. ಆದರೆ, ಕೆಎಂಎಫ್‌ ಸ್ಥಾನಕ್ಕೆ ಡಿಕೆಶಿ ಸಹೋದರ ಡಿ.ಕೆ.ಸುರೇಶ್‌ ಕೂಡ ಕಣ್ಣು ನೆಟ್ಟಿರುವುದರಿಂದ ಭರವಸೆ ಸಿಗುವುದು ಅನುಮಾನ.

ಹೀಗಾಗಿ, ಇಬ್ಬರು ಶಾಸಕರಿಗೂ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಮುಂದೆ ಉತ್ತಮ ಸ್ಥಾನಮಾನದ ಭರವಸೆ ನೀಡಿ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದ್ದಾರೆ. ಹಾಗೇನಾದರೂ ಸಂಧಾನ ನಡೆದು ಉತ್ತಮ ಸ್ಥಾನಮಾನದ ಭರವಸೆ ಸಿಕ್ಕಿ ಸ್ಪರ್ದೆಯಿಂದ ಹಿಂದೆ ಸರಿದರೂ ಕಾಂತಮ್ಮ ಅವರ ಪರವಾಗಿ ನಂಜೇಗೌಡರು ಹಾಗೂ ಮಹಾಲಕ್ಷ್ಮಿ ಪರವಾಗಿ ನಾರಾಯಣಸ್ವಾಮಿ ನಿಲ್ಲುವ ಸಾಧ್ಯತೆ ಇದೆ. ಆಗಲೂ ಕಗ್ಗಂಟು ಉಂಟಾಗುವುದು ನಿಶ್ಚಿತ. 

ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಬೈರತಿ ಸುರೇಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಬಲಿತ ಎಲ್ಲಾ 9 ನಿರ್ದೇಶಕರ ಸಭೆ ನಡೆಸಿ ಮನವೊಲಿಸುವ ಸಾಧ್ಯತೆ ಇದೆ. ಕೈ ವರಿಷ್ಠರ ಸೂತ್ರಕ್ಕೆ ನಂಜೇಗೌಡ ಹಾಗೂ ನಾರಾಯಣಸ್ವಾಮಿ ಸ್ಪಂದಿಸುತ್ತಾರೋ ಅಥವಾ ತಾವೇ ಅಧ್ಯಕ್ಷರಾಗಲು ಬಿಗಿಪಟ್ಟು ಮುಂದುವರಿಸುತ್ತಾರೋ ಎಂಬುದು ಕುತೂಹಲ ಮೂಡಿಸಿದೆ. 

ಆರ್‌.ಕಾಂತಮ್ಮ
ಸಿ.ಲಕ್ಷ್ಮಿನಾರಾಯಣ

ಯಾರ ಪರನೂ ಬ್ಯಾಟಿಂಗ್‌ ಮಾಡಿಲ್ಲ

ಕೋಮುಲ್‌ ಅಧ್ಯಕ್ಷ ಸ್ಥಾನಕ್ಕೆ ನಾನು ಯಾರ ಪರವೂ ಬ್ಯಾಟಿಂಗ್‌ ಮಾಡಿಲ್ಲ. ನೂತನ ನಿರ್ದೇಶಕಿ ಮಹಾಲಕ್ಷ್ಮಿ ಅವರನ್ನು ಕರೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಭೇಟಿ ಮಾಡಿದ್ದು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಈ ಸಂದರ್ಭದಲ್ಲಿ ಬೈರತಿ ಸುರೇಶ್‌ ಕೂಡ ಅಲ್ಲಿದ್ದರು. ಅಹಿಂದ ವರ್ಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಲಾಗಿದೆ. ಅಧ್ಯಕ್ಷ ಸ್ಥಾನದ ಬಗ್ಗೆ ನಮ್ಮ ಬಳಿ ಯಾರೂ ಇಂಗಿತ ವ್ಯಕ್ತಪಡಿಸಿಲ್ಲ. ಅದು ಹೈಕಮಾಂಡ್‌ ಅಂಗಳದಲ್ಲಿದೆ ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.