ಮಾಲೂರು: ‘ಕೋಮುಲ್‌ಗೆ ನಿರ್ದೇಶಕರಾಗಿ ಬಂದಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೇಲೆ ನಾವೆಲ್ಲಾ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಆ ರೀತಿ ಆಗುತ್ತಿಲ್ಲ ಎಂಬ ನೋವಾಗುತ್ತಿದೆ. ಕೋಮುಲ್ ಸಭೆಯ ಕುರಿತು ಮಾಧ್ಯಮದವರಿಗೆ ಹೇಳಿಕೆ ಕೊಡುತ್ತಾ ಒಕ್ಕೂಟದ ಗೌರವ ಕಳೆಯುವುದು ಸರಿ ಅಲ್ಲ’ ಎಂದು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಮಾತನಾಡಿದ ಅವರು, ‘ನಾರಾಯಣಸ್ವಾಮಿಯವರು ಕೋಮುಲ್ ಹಿಂದಿನ ಆಡಳಿತ ಮಂಡಳಿ ಹಾಗೂ ಆಡಳಿತಾಧಿಕಾರಿ ಬಗ್ಗೆ ಅನುಮಾನಪಡುವುದು ಮಾಡುತ್ತಿದ್ದಾರೆ. ಈಗಾಗಲೇ ಸಮಿತಿ ರಚಿಸಿದ್ದು, ಆಡಳಿತಾಧಿಕಾರಿ ಅವಧಿಯಲ್ಲಿನ ತನಿಖಾ ವರದಿ ಬರಲಿ, ಆಗ ಏನು ಆಗಿದೆ ಎಂಬುದು ಗೊತ್ತಾಗುತ್ತದೆ’ ಎಂದರು.
‘ನಾರಾಯಣಸ್ವಾಮಿ ಒಬ್ಬರನ್ನು ಬಿಟ್ಟರೆ ಎಲ್ಲಾ ನಿರ್ದೇಶಕರು ಕೋಮುಲ್ ಕೆಲಸಗಳಿಗೆ ಸರ್ವಸಮ್ಮತಿ ಸೂಚಿಸುತ್ತಿದ್ದಾರೆ. ಆದರೆ, ನಾರಾಯಣಸ್ವಾಮಿ ಒಕ್ಕೂಟದ ಸಭೆಯಲ್ಲಿನ ಕೆಲ ತಿರ್ಮಾನಗಳ ವಿರುದ್ಧವಾಗಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.
‘ಕೋಮುಲ್ ಆಡಳಿತ ಮಂಡಳಿ ಸಭೆ ಆ.25ಕ್ಕೆ ನಡೆಯಿತು. ಅಂದು ನಾರಾಯಣಸ್ವಾಮಿ ಬಂದಿರಲಿಲ್ಲ. ಪ್ರತಿ ವರ್ಷ 25ರೊಳಗೆ ಸಭೆ ನಡೆಸಬೇಕೆಂಬ ನಿಯಮವಿದೆ. ಹೀಗಾಗಿ, ಸಭೆ ನಡೆಸಬೇಕಾಯಿತು. ನಂತರ ಶನಿವಾರ (ಆ.30) ತುರ್ತುಸಭೆ ನಡೆಸಿದೆವು. ನಮ್ಮ ಆಡಳಿತ ಮಂಡಳಿಯ ಕೊನೆಯ ಒಂದು ವರ್ಷದ ಕಾರ್ಯಕ್ರಮ ಹಾಗೂ ಆಡಳಿತಾಧಿಕಾರಿ ಇದ್ದ ಅವಧಿಯಲ್ಲಿನ ಕಾರ್ಯಕ್ರಮಗಳ ತೀರ್ಮಾನದ ಅಜೆಂಡಾವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಕಳಿಸಿದ್ದೆವು’ ಎಂದರು.
‘ಅಧ್ಯಕ್ಷರ ತೀರ್ಮಾನದಂತೆ ತುರ್ತುಸಭೆ ನಡೆಸಲು ಅವಕಾಶವಿದೆ. 16 ನಿರ್ದೇಶಕರು ಇದ್ದರು. ಹಲವಾರು ವಿಚಾರ ಚರ್ಚೆಯಾಯಿತು. ಆದರೆ, ಒಂದು ವರ್ಷದ ಹಣಕಾಸು ವಿಚಾರದಲ್ಲಿ ಹೊಸದಾಗಿ ತೀರ್ಮಾನ ಕೈಗೊಳ್ಳುತ್ತಿದ್ದೀರಿ ಎಂದು ನಾರಾಯಣಸ್ವಾಮಿ ತಕರಾರು ಎತ್ತಿದರು. ಇದು ಆರ್ಥಿಕವಾಗಿ ಈ ಸಭೆಯಲ್ಲಿ ಕೈಗೊಂಡ ತೀರ್ಮಾನ ಅಲ್ಲ ಎಂದು ಹೇಳಿದರೂ ಒಪ್ಪದೆ ಸಭೆ ಮುಂದೂಡಿ ಎಂದು ಪಟ್ಟು ಹಿಡಿದರು. ಇನ್ನುಳಿದ ನಿರ್ದೇಶಕರು ಸಭೆ ಮುಂದೂಡಬಾರದು ಎಂದು ನುಡಿದರು. ಹೀಗಾಗಿ, ಸಭೆಯಲ್ಲಿ ತೀರ್ಮಾನವಾಯಿತು. ನಾರಾಯಣಸ್ವಾಮಿ ಡಿಸೆಂಟ್ ನೋಟ್ ಬರೆದುಕೊಟ್ಟರು’ ಎಂದು ಹೇಳಿದರು.
‘ವಿಶೇಷ ಸಭೆಯಲ್ಲಿ ಸುಮಾರು 32 ಅಜೆಂಡಾ ಮಂಡಿಸಿದ್ದಾರೆ, ₹ 60 ಕೋಟಿಯಷ್ಟು ಆರ್ಥಿಕವಾಗಿ ಅನುಮೋದನೆ ಇಟ್ಟರು ಎಂಬುದಾಗಿ ನಾರಾಯಣಸ್ವಾಮಿ ಮಾಧ್ಯಮದವರಿಗೆ ಹೇಳಿದ್ದಾರೆ. ಈ ರೀತಿ ನಾವು ತೀರ್ಮಾನ ಕೈಗೊಂಡಿಲ್ಲ. ಆಡಳಿತಾಧಿಕಾರಿ ಕಾಲದ ವಿಚಾರ ಮಾತನಾಡಿದ್ದಾರೆ, ಅಕ್ರಮ ನಡೆದಿದೆ ಎಂದಿದ್ದಾರೆ. ಆದರೆ, ಆಡಳಿತಾಧಿಕಾರಿ ಅವಧಿಯಲ್ಲಿ ಒಕ್ಕೂಟಕ್ಕೆ ಬೇಕಾದ ತೀರ್ಮಾನ ಆಗಿದೆ. ಯಾವುದೇ ಅವ್ಯವಹಾರ ನಡೆದಿಲ್ಲ. ತನಿಖೆ ಆಗಬೇಕೆಂದು ನಾರಾಯಣಸ್ವಾಮಿ ಪಟ್ಟು ಹಿಡಿದಿದ್ದರಿಂದ ಸಮಿತಿ ಮಾಡಿದ್ದು, ನಾರಾಯಣಸ್ವಾಮಿ ಅವರೂ ಸದಸ್ಯರಾಗಿದ್ದಾರೆ. ಸದ್ಯದಲ್ಲೇ ತನಿಖಾ ವರದಿ ಆಡಳಿತ ಮಂಡಳಿ ಸಭೆ ಮುಂದೆ ಬರಲಿದೆ’ ಎಂದರು.
‘ಒಕ್ಕೂಟದಿಂದ ಹಲವಾರು ಅಭಿವೃದ್ಧಿ ಕೆಲಸಗಳು, ಕಾರ್ಯಕ್ರಮಗಳು ನಡೆದಿವೆ. ಎಂವಿಕೆ ಗೋಲ್ಡನ್ ಡೇರಿ ತಲೆಎತ್ತುತ್ತಿದೆ. 12 ಮೆಗಾ ವ್ಯಾಟ್ ಸೌರ ಘಟಕದಿಂದ ಹಲವಾರು ಲಾಭಗಳಿವೆ. ₹ 350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ’ ಎಂದರು.
‘ಕೋಮುಲ್ ಆಡಳಿತ ಮಂಡಳಿ ಮೇಲೆ ಯಾವುದೇ ಅನುಮಾನ ಬರಬಾರದು. ಗೌರವಯುತವಾಗಿ ತೆಗೆದುಕೊಂಡ ಹೋಗಬೇಕು. ತಪ್ಪು ಮಾಡಿದರೆ ಯಾರೂ ಬಿಡುವುದಿಲ್ಲ. ಸಾಮಾನ್ಯ ಸಭೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಆಕ್ಷೇಪ ಎತ್ತುತ್ತಾರೆ’ ಎಂದು ನುಡಿದರು.
ಒಕ್ಕೂಟಕ್ಕೆ ವಿರುದ್ಧವಾಗಿ ಮಾತು
‘ಕೋಮುಲ್‌ಗೆ ಒಂದು ಇತಿಹಾಸವಿದೆ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ನಿರ್ದೇಶಕರಾದ ಮೇಲೆ ಪಕ್ಷಭೇದ ಮರೆತು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಕ್ಕೂಟಕ್ಕೆ ಯಾರೂ ವಿರುದ್ಧವಾಗಿ ಮಾತನಾಡಿಲ್ಲ. ಆದರೆ ಈಗ ಆ ರೀತಿ ನಡೆಯುತ್ತಿಲ್ಲ. ನಿತ್ಯ ಮಾಧ್ಯಮಗಳಲ್ಲಿ ಒಕ್ಕೂಟದ ಸಭೆಯ ವಿಚಾರ ಬರುವಂತಾಗಿದೆ. ಇದು ಬದಲಾವಣೆ ಆಗಬೇಕು’ ಎಂದು ನಂಜೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.