ಬಂಗಾರಪೇಟೆ: ಕೋಮುಲ್ ಆಡಳಿತ ವ್ಯವಸ್ಥೆಯನ್ನು ಕಲುಷಿತಗೊಳಿಸಿ, ನೂರಾರು ಕೋಟಿ ಹಣವನ್ನು ದುಂದು ವೆಚ್ಚ ಮಾಡಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರದ ಮೂಲಕ ಮನವಿ ಮಾಡಿದ್ದಾರೆ.
‘ಹುತ್ತೂರು ಹೋಬಳಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟವು ಸುಮಾರು 35 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಒಕ್ಕೂಟವು ಲಾಭದಲ್ಲಿದೆ ಎಂದು ಅಧ್ಯಕ್ಷರು ಹೇಳುತ್ತಾರೆ. ಆದರೆ, ಎಕ್ಸಿಸ್ ಬ್ಯಾಂಕಿನಿಂದ ₹100 ಕೋಟಿ ಓವರ್ ಡ್ರಾಫ್ಟ್ ಸಾಲ ಪಡೆದು, ₹1.18 ಕೋಟಿ ಬಡ್ಡಿ ಪಾವತಿಸಲಾಗಿದೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ನಿಗಮದ ಡಿಐಡಿಎಫ್ ಸಂಸ್ಥೆಯಿಂದ ₹87 ಕೋಟಿ ಸಾಲ ಪಡೆದು ಜನವರಿ-2025 ರಿಂದ ಮಾರ್ಚ್-2025 ರವರೆಗೆ ₹1.40 ಕೋಟಿ ಬಡ್ಡಿ ಪಾವತಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಕೋಮುಲ್‌ನಲ್ಲಿ ಸರಿ ಇಲ್ಲ ಎನ್ನುವುದಕ್ಕೆ ಇ.ಡಿ, ಲೋಕಾಯುಕ್ತ ದಾಳಿ ಮತ್ತು ಸಹಕಾರ ಇಲಾಖೆಗಳ ತನಿಖಾ ವರದಿಗಳೇ ಸಾಕ್ಷಿಗಳಾಗಿವೆ. ಕೋಮುಲ್ ಒಕ್ಕೂಟದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎನ್.ಗೋಪಾಲಮೂರ್ತಿ ಮತ್ತು ವ್ಯವಸ್ಥಾಪಕ ನಾಗೇಶ್ ಕೆ.ಎನ್ ಅವರು ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣ ಕಾಮಗಾರಿ ಟೆಂಡರ್, ಸೋಲಾರ್ ಪ್ಲಾಂಟ್ ನಿರ್ಮಾಣ ಮತ್ತು ವಹಿವಾಟಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಖರೀದಿಸಿ ಒಕ್ಕೂಟಕ್ಕೆ 100 ಕೋಟಿಗೂ ಹೆಚ್ಚು ನಷ್ಟವುಂಟು ಮಾಡಿದ್ದಾರೆ’.
‘ಇಷ್ಟೇ ಅಲ್ಲದೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ 2023ರಲ್ಲಿ ನಡೆದ ನೇಮಕಾತಿಯೂ ಅಕ್ರಮವೆಂದು ತನಿಖೆಯಿಂದ ಸಾಬೀತಾಗಿದೆ. ಅಧ್ಯಯನ ಪ್ರವಾಸದ ನೆಪದಲ್ಲಿ ರೈತರ ಪ್ರವಾಸ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಪ್ರವಾಸ ಕೈಗೊಂಡಿದ್ದು ಕಾನೂನುಬಾಹಿರ. ಪ್ರತಿ ತಾಲ್ಲೂಕಿನ ಶಿಬಿರ ಕಚೇರಿಗಳು, ಯಲಹಂಕದ ಬಳಿ ಇರುವ ಬಾಲಕಿಯರ ವಸತಿ ನಿಲಯ ಮತ್ತು ಅದರ ನವೀಕರಣದಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಕೆ.ಎನ್.ಗೋಪಾಲಮೂರ್ತಿ ಮತ್ತು ವ್ಯವಸ್ಥಾಪಕ ನಾಗೇಶ್ ಕೆ.ಎನ್ ಇವರು ನೇರವಾಗಿ ಭಾಗಿಯಾಗಿದ್ದು, ನೂರಾರು ಕೋಟಿ ಹಣದ ದುಂದು ವೆಚ್ಚ ಮಾಡಿದ್ದಾರೆ. ಈ ಬಗ್ಗೆ ಗುರುತರ ಆರೋಪಗಳಿವೆ. ಇವು ಇ.ಡಿ, ಲೋಕಾಯುಕ್ತ ಮೂಲಕ ಸಾಬೀತಾಗಿದೆ’.
‘ಹಾಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಜೊತೆಗೆ ಪಾರದರ್ಶಕ ತನಿಖೆಯಾಗುವವರೆಗೂ, ಕೋಲಾರ ಹಾಲು ಒಕ್ಕೂಟವನ್ನು ಬೇರೆಡೆಗೆ ವರ್ಗಾವಣೆ ಮಾಡಿ, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕೆಂದು’ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.