ADVERTISEMENT

ಕೋಚಿಮುಲ್‌ ರೈತರ ಹಿತರಕ್ಷಣೆಗೆ ಬದ್ಧ

ಹೈನೋದ್ಯಮ ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆ: ನಿರ್ದೇಶಕ ಹರೀಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 13:09 IST
Last Updated 6 ಏಪ್ರಿಲ್ 2022, 13:09 IST
ಕೋಲಾರ ತಾಲ್ಲೂಕಿನ ವಿಟ್ಟಪನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಬಿಎಂಸಿ ಕೇಂದ್ರವನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಬುಧವಾರ ಉದ್ಘಾಟಿಸಿದರು
ಕೋಲಾರ ತಾಲ್ಲೂಕಿನ ವಿಟ್ಟಪನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಬಿಎಂಸಿ ಕೇಂದ್ರವನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಬುಧವಾರ ಉದ್ಘಾಟಿಸಿದರು   

ಕೋಲಾರ: ‘ಕೋವಿಡ್‌, ಬರಗಾಲ ಸೇರಿದಂತೆ ಹಲವು ಸಂಕಷ್ಟದ ಸಂದರ್ಭಗಳಲ್ಲಿ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

ತಾಲ್ಲೂಕಿನ ವಿಟ್ಟಪನಹಳ್ಳಿಯಲ್ಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಬಿಎಂಸಿ ಕೇಂದ್ರ ಮತ್ತು ಸಮೂಹ ಹಾಲು ಕರೆಯುವ ಯಂತ್ರಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ‘ಕೋಚಿಮುಲ್ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ. ಹಸು ವಿಮೆ ಮೂಲಕ ಹೈನುಗಾರರನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಒಕ್ಕೂಟ ನೆರವಾಗಲಿದೆ’ ಎಂದು ಭರವಸೆ ನೀಡಿದರು.

‘ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದು. ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ಅನೇಕ ಸೌಲಭ್ಯ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು. ಹಾಲು ಉತ್ಪಾದನೆ ಮತ್ತು ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೈನುಗಾರಿಕೆಯನ್ನು ಜೀವಂತವಾಗಿ ಉಳಿಸಿ’ ಎಂದು ಮನವಿ ಮಾಡಿದರು.

ADVERTISEMENT

‘ವಿಟ್ಟಪನಹಳ್ಳಿ ಹಾಲಿನ ಸಂಘ ಇತಿಹಾಸ ಹೊಂದಿದೆ. ಒಕ್ಕೂಟದಿಂದ ಸೌಕರ್ಯ ಪಡೆಯುವ ಸಂಘಗಳ ಪಟ್ಟಿಗೆ ಸೇರಿದ್ದು ₹ 3.50 ಲಕ್ಷ ವೆಚ್ಚದಲ್ಲಿ ಹಾಲು ಕರೆಯುವ ಯಂತ್ರ ಹಾಗೂ 3 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರ ಆರಂಭಿಸಲಾಗಿದೆ. ಹಾಲಿನ ಜಿಡ್ಡಿನಾಂಶದ ಆಧಾರದ ಮೇಲೆ ದರ ನಿಗದಿ ಮಾಡುವುದರಿಂದ ರೈತರು ಗುಣಮಟ್ಟಕ್ಕೆ ಒತ್ತು ನೀಡಬೇಕು. ಕಾಲಮಿತಿಯೊಳಗೆ ಸಂಘದಿಂದ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಬೇಕು’ ಎಂದರು.

ಹೋರಾಟದ ಎಚ್ಚರಿಕೆ: ‘ರೈತರು ಉತ್ಪಾದನೆ ಮಾಡುವ ವಸ್ತುಗಳಿಗೆ ಸರ್ಕಾರ ಬೆಲೆ ನಿಗದಿ ಮಾಡುವುದಿಲ್ಲ. ತೈಲೋತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಹಾಲಿನ ದರ ಏರಿಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮಣಿಯದಿದ್ದರೆ ಮುಳಬಾಗಿಲು ಬಳಿ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುತ್ತೇವೆ’ ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಎಚ್ಚರಿಕೆ ನೀಡಿದರು.

‘ಹಾಲು ಉತ್ಪಾದಕರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ರಾಸುಗಳಿಗೆ ಆಕಸ್ಮಿಕವಾಗಿ ಮೃತಪಟ್ಟರೆ ಪ್ರತಿ ರಾಸಿಗೆ ₹ 70 ಸಾವಿರ ಪರಿಹಾರ ಸಿಗಲಿದೆ. ಹಾಲು ಉತ್ಪಾದಕರು ಇದರ ಸದುಪಯೋಗ ಪಡೆಯಬೇಕು. ಒಕ್ಕೂಟದಿಂದ ಸೌಲಭ್ಯಗಳು ಸಿಗದಿದ್ದರೆ ಆ ಬಗ್ಗೆ ಮಾಹಿತಿ ನೀಡಬೇಕು’ ಎಂದು ಕೋಚಿಮುಲ್‌ ನಿರ್ದೇಶಕ ಎನ್.ಹನುಮೇಶ್ ತಿಳಿಸಿದರು.

‘ಸಂಘವು ಲಾಭದಲ್ಲಿ ನಡೆಯುತ್ತಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದ ಕೋವಿಡ್ ಕಾಲಘಟ್ಟದಲ್ಲಿ 10 ತಿಂಗಳು ರಾಸುಗಳಿಗೆ ಉಚಿತವಾಗಿ ಜೋಳ ವಿತರಿಸಲಾಗಿದೆ. ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ’ ಎಂದು ವಿಟ್ಟಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವೆಂಕಟೇಶ್ ವಿವರಿಸಿದರು.

ವಿಟ್ಟಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಆರ್.ಮಂಜುನಾಥ್, ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಎಚ್.ಮಹೇಶ್, ಶಿಬಿರ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಉಪ ವ್ಯವಸ್ಥಾಪಕ ಶ್ರೀಧರ್‌ ಮೂರ್ತಿ, ಸಹಾಯಕ ವ್ಯವಸ್ಥಾಪಕ ಮೋಹನ್‌ಬಾಬು, ಹುತ್ತೂರು ಗ್ರಾ.ಪಂ ಅಧ್ಯಕ್ಷ ನಾರಾಯಣಸ್ವಾಮಿ, ವಿಟ್ಟಪನಹಳ್ಳಿ ಗ್ರಾ.ಪಂ ಸದಸ್ಯೆ ‌ಮಂಜುಳಮ್ಮ, ಸಂಘದ ನಿರ್ದೇಶಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.