ADVERTISEMENT

5 ವರ್ಷದ ಶ್ರಮಕ್ಕೆ ಫಲ ಸಿಕ್ಕಿದೆ: ಕೆ.ಆರ್‌.ಭರತ್‌

ಯುಪಿಎಸ್‌ಸಿ ಪರೀಕ್ಷೆಯಲ್ಲಿ 545ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 13:01 IST
Last Updated 4 ಆಗಸ್ಟ್ 2020, 13:01 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ 545ನೇ ರ್‌್ಯಾಂಕ್‌ ಗಳಿಸಿದ ಕೋಲಾರ ಜಿಲ್ಲೆಯ ಕಪ್ಪಲಮಡಗು ಗ್ರಾಮದ ಕೆ.ಆರ್‌.ಭರತ್‌ ಅವರಿಗೆ ಪೋಷಕರು ಮಂಗಳವಾರ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ 545ನೇ ರ್‌್ಯಾಂಕ್‌ ಗಳಿಸಿದ ಕೋಲಾರ ಜಿಲ್ಲೆಯ ಕಪ್ಪಲಮಡಗು ಗ್ರಾಮದ ಕೆ.ಆರ್‌.ಭರತ್‌ ಅವರಿಗೆ ಪೋಷಕರು ಮಂಗಳವಾರ ಸಿಹಿ ತಿನ್ನಿಸಿ ಸಂಭ್ರಮಿಸಿದರು.   

ಕೋಲಾರ: ‘5 ವರ್ಷದ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಬಾಲ್ಯದ ಕನಸು ನನಸಾಗಿದೆ’ ಎಂದು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 545ನೇ ರ‍್ಯಾಂಕ್‌ ಗಳಿಸಿರುವ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದ ಕೆ.ಆರ್‌.ಭರತ್‌ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

ರಘುನಾಥ್‌ರಾವ್‌ ಮತ್ತು ವಾಸವಿ ದಂಪತಿಯ ಪುತ್ರ ಭರತ್‌ ಬಿ.ಇ ಪದವೀಧರರು. 2015ರಿಂದ 4 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಇವರಿಗೆ ಯಶಸ್ಸು ಸಿಕ್ಕಿರಲಿಲ್ಲ. ಇದೀಗ 5ನೇ ಬಾರಿಯ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ.

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ 4 ಬಾರಿ ಯಶಸ್ಸು ಸಿಗದಿದ್ದಾಗ ನಿರಾಶನಾಗದೆ ಪ್ರಯತ್ನ ಮುಂದುವರಿಸಿದೆ. ಜೀವನದಲ್ಲಿ ಸೋಲು ಸಹಜ. ಆದರೆ, ಸೋಲಿಗೆ ಕುಗ್ಗದೆ ಗುರಿ ಸಾಧನೆಯತ್ತ ಗಮನ ಹರಿಸಿದೆ. ಸತತ ಪ್ರಯತ್ನ ಮತ್ತು ಸಾಧಿಸುವ ಛಲವಿದ್ದರೆ ಏನೂ ಬೇಕಾದರೂ ಸಾಧಿಸಬಹುದು’ ಎಂದು ಭರತ್‌ ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

ADVERTISEMENT

‘ಬೆಂಗಳೂರಿನ ವಿಜಯನಗರದಲ್ಲಿ ಸ್ನೇಹಿತರ ಜತೆ ಸೇರಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ದಿನಕ್ಕೆ ಸುಮಾರು 10 ತಾಸು ಓದುತ್ತಿದ್ದೆ. ಪ್ರತಿನಿತ್ಯ ತಪ್ಪದೇ ಪ್ರಜಾವಾಣಿ ಪತ್ರಿಕೆ ಓದುತ್ತಿದ್ದೆ. ಈ ಬಾರಿ ಪರೀಕ್ಷೆ ಚೆನ್ನಾಗಿ ಬರೆದಿದ್ದರಿಂದ ರ್‌್ಯಾಂಕ್‌ ನಿರೀಕ್ಷಿಸಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.