
ಶ್ರೀನಿವಾಸಪುರ: ಹಿಂದಿನ ಚುನಾವಣೆಯಲ್ಲಿ ಕೆಲವರು ನನ್ನ ಬೆನ್ನಿಗೆ ಚೂರಿ ಹಾಕಿದರು. ನಾನು ಅದಕ್ಕೆ ಭಯಪಡುವುದಿಲ್ಲ. ನನಗೆ ನನ್ನ ಮತದಾರರು ಇದ್ದೇ ಇದ್ದಾರೆಂಬ ಅಭಯ ನನ್ನಲ್ಲಿದೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ವಿರೋಧಿಗಳಿಗೆ ಚಾಟಿ ಬೀಸಿದರು.
ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ, 3 ತಿಂಗಳು, 21 ದಿನ ಬಾಕಿ ಇದೆ. ಅಂದು ಯಾರು ಇರುತ್ತಾರೋ ಇಲ್ಲವೋ ದೇವರಿಗೆ ಗೊತ್ತು ಎಂದು ನುಡಿದರು.
ನಾನು ಎಲ್ಲರಂತೆ ಹೊಗಳಿಕೆ ಮಾತುಗಳನ್ನು ಆಡುವುದಿಲ್ಲ. ನುಡಿದಂತೆ ನಡೆಯುತ್ತೇನೆ ಅಷ್ಟೆ. ಗ್ರಾಮವನ್ನು ಉಳಿಸಿಕೊಳ್ಳಲು ತಮ್ಮೊಂದಿಗೆ ಇರುತ್ತೇನೆ ಎಂದು ಆಶ್ವಾಸನೆ ನೀಡಿದರು.
ನನ್ನ ಬಗ್ಗೆ ಕೆಲವರು ಹೊಗಳಿಕೆ ಮಾತುಗಳನ್ನು ಆಡುತ್ತಾರೆ, ಇನ್ನು ಕೆಲವರು ತೆಗಳುತ್ತಾರೆ. ನಾನು ಯಾವ ಮಾತಿಗೂ ಹಿಗ್ಗುವುದಿಲ್ಲ, ಅಂಜುವುದಿಲ್ಲ. ನನಗೆ ಬಡಕುಟುಂಬಗಳು ಮುಖ್ಯ. ಈ ಹಿಂದೆ ಗ್ರಾಮದಲ್ಲಿ 35 ಸ್ತ್ರೀಶಕ್ತಿ ಸಂಘಗಳು ಇದ್ದವು. ಆ ಸಂಘಗಳಲ್ಲಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಸಂಘದಲ್ಲಿನ ಒಬ್ಬ ಮಹಿಳೆಗೆ ₹ 50 ಸಾವಿರವನ್ನು ಶೂನ್ಯ ಬಡ್ಡಿಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಕೊಡಿಸಿದ್ದೆ ಎಂದರು.
ನನ್ನ ಅವಧಿಯಲ್ಲಿ ಸರ್ಕಾರದಿಂದ ವಸತಿ ಯೋಜನೆಯಲ್ಲಿ ಕ್ಷೇತ್ರದ ಬಡಜನತೆಗೆ ಮನೆಗಳನ್ನು ಕೊಡಿಸಿದ್ದೆ. ನಮ್ಮ ತಂದೆ ಸಾಹುಕಾರ ಅಲ್ಲ, ನಾನು ಬಡಕುಟುಂಬದಲ್ಲಿ ಹುಟ್ಟಿ ಬೆಳದಿರುವುದು. ನನಗೆ ಬಡಕುಟುಂಬಗಳ ಕಷ್ಟಗಳ ಬಗ್ಗೆ ಅರಿವು ಇದೆ ಎಂದು ಹೇಳಿದರು.
ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ , ಕೆಪಿಸಿಸಿ ಸದಸ್ಯ ಸಂಜಯ್‌ರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬಿರೆಡ್ಡಿ, ತಾ.ಪಂ ಮಾಜಿ ಅಧ್ಯಕ್ಷ ಗುರಪ್ಪ, ಮುಖಂಡರಾದ ಕೇತುಗಾನಹಳ್ಳಿ ಕೆ.ಎಂ.ನಾಗರಾಜು, ಜೆವಿ ಕಾಲೋನಿ ವೆಂಕಟೇಶ್, ಶಿವಪುರ ಎಸ್. ಜಿ.ವಿ.ವೆಂಕಟೇಶ್, ಜಗದೀಶ್‌ಕುಮಾರ್, ಜಿ.ಗುರಪ್ಪ, ವಿ.ಗುರುಪ್ರಸಾದ್, ವಿ.ಶ್ರೀನಿವಾಸ್, ಮುರಳಿ, ಸಲ್ಲಪ್ಪ, ಎಸ್‌ಜಿವಿ ವೆಂಕಟರಮಣ ಹಾಗೂ ಗ್ರಾಮಸ್ಥರು ಇದ್ದರು.
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಈಗಾಗಲೇ ಸರ್ಕಾರ ಹಾಗೂ ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ. ನೆಮ್ಮದಿಯಿಂದ ನಿದ್ದೆ ಮಾಡಿ ನಾನು ತಮ್ಮೊಂದಿಗೆ ಇದ್ದೇನೆ ಎಂದು ರಮೇಶ್ ಕುಮಾರ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.