ADVERTISEMENT

ಕೋಲಾರ | ಕೃಷ್ಣ ಜನ್ಮಾಷ್ಟಮಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 15:06 IST
Last Updated 11 ಆಗಸ್ಟ್ 2020, 15:06 IST
ಕೋಲಾರದ ಕಿಲಾರಿಪೇಟೆಯ ಶ್ರೀ ರುಕ್ಮಿಣಿ ಸತ್ಯಭಾಮ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಂಗಳವಾರ ನಡೆದ ಪೂಜೆಯಲ್ಲಿ ಭಾಗಿಯಾದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ದೇವರ ದರ್ಶನ ಪಡೆದರು.
ಕೋಲಾರದ ಕಿಲಾರಿಪೇಟೆಯ ಶ್ರೀ ರುಕ್ಮಿಣಿ ಸತ್ಯಭಾಮ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಂಗಳವಾರ ನಡೆದ ಪೂಜೆಯಲ್ಲಿ ಭಾಗಿಯಾದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ದೇವರ ದರ್ಶನ ಪಡೆದರು.   

ಕೋಲಾರ: ಕೋವಿಡ್‌–19 ಆತಂಕದ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಯಿತು.

ಕೊರೊನಾ ಸೋಂಕಿನ ಕಾರಣಕ್ಕೆ ಮನೆಗಳಲ್ಲೇ ಪೋಷಕರು ಮಕ್ಕಳಿಗೆ ಕೃಷ್ಣ, ರುಕ್ಮಿಣಿ ಹಾಗೂ ರಾಧೆಯ ವೇಷಭೂಷಣ ಮಾಡಿ ಸಂಭ್ರಮಿಸಿದರು. ಕೃಷ್ಣ ಹಾಗೂ ರಾಧೆ ವೇಷಧಾರಿಗಳಾಗಿದ್ದ ಪುಟಾಣಿಗಳ ಕಲರವದಿಂದ ಮನೆಗಳು ನಂದಗೋಕುಲದಂತಾದವು.

ಕಿಲಾರಿಪೇಟೆಯ ಶ್ರೀ ರುಕ್ಮಿಣಿ ಸತ್ಯಭಾಮ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ 60ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಇಡೀ ದೇವಾಲಯಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ದೇವರಿಗೆ ಬೆಳಿಗ್ಗೆ ವಿಶೇಷ ಅಭಿಷೇಕ ನಡೆಯಿತು.

ADVERTISEMENT

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಜನಸಂದಣಿಗೆ ಅವಕಾಶ ನೀಡದಿದ್ದರೂ, ಶ್ರದ್ಧಾ ಭಕ್ತಿಯ ವೈಭವದ ಪೂಜೆಗೆ ಅಡ್ಡಿಯಿರಲಿಲ್ಲ. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಇದರಿಂದ ಯಾದವ ಸಮುದಾಯದ ಮುಖಂಡರು ಸಂತಸಗೊಂಡರು.

ಕಲ್ಯಾಣೋತ್ಸವ: ರುಕ್ಮಿಣಿ ಸತ್ಯಭಾಮ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ 3 ದಿನಗಳಿಂದ ಮುತ್ತೈದೆಯರಿಗೆ ಬಳೆ ತೊಡಿಸುವುದು, ದೀಪೋತ್ಸವ ಸೇವೆ ಸೇರಿದಂತೆ ವಿವಿಧ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಕಿಲಾರಿಪೇಟೆ ಭಕ್ತರು ಮಂಗಳವಾರ ದೇವಾಲಯದೊಳಗೆ ಮಂಗಳವಾದ್ಯ, ಮೇಳದೊಂದಿಗೆ ಕಲ್ಯಾಣೋತ್ಸವ ನಡೆಸಿದರು.

ನೂರಾರು ಭಕ್ತರು ದೇವರ ದರ್ಶನ ಪಡೆದರು. ದೇವರ ಪುಷ್ಪಪಲ್ಲಕ್ಕಿ ಮೆರವಣಿಗೆ ಮತ್ತು ಪ್ರಾಕಾರೋತ್ಸವ ದೇವಾಲಯ ಪ್ರಾಂಗಣದಲ್ಲಿ ಸಾಗಿಬಂದು ಮನಸೂರೆಗೊಂಡಿತು. ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.