ADVERTISEMENT

ಸಮಸ್ಯೆಗೆ ಸಿಲುಕಿದ್ದಕ್ಕೆ ರಮೇಶ್‌ ಕುಮಾರ್‌ ರೈತರ ಮೊರೆ: ಎಚ್‌.ಡಿ.ಕುಮಾರಸ್ವಾಮಿ

ಬಿಡದಿಯಲ್ಲಿ ಜಮೀನು ನಾನು ದುಡಿದು ಖರೀದಿಸಿದ್ದು, ಇವರ ರೀತಿ ಹಗಲು ದರೋಡೆ ಮಾಡಿದ್ದಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:50 IST
Last Updated 8 ಫೆಬ್ರುವರಿ 2026, 4:50 IST
ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ನಿಖಿಲ್‌ ಕುಮಾರಸ್ವಾಮಿ, ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ಎಂ.ಮಲ್ಲೇಶ್‌ ಬಾಬು, ಇಂಚರ ಗೋವಿಂದರಾಜು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ನಿಖಿಲ್‌ ಕುಮಾರಸ್ವಾಮಿ, ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ಎಂ.ಮಲ್ಲೇಶ್‌ ಬಾಬು, ಇಂಚರ ಗೋವಿಂದರಾಜು ಪಾಲ್ಗೊಂಡಿದ್ದರು   

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯವರು ಜೆಸಿಬಿ ನುಗ್ಗಿಸಿ ರೈತರ ಭೂಮಿಯಲ್ಲಿದ್ದ ಬೆಳೆ ನಾಶ ಮಾಡಿದಾಗ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ದನಿ ಎಲ್ಲಿ ಹೋಗಿತ್ತು? ನನ್ನ ಭೂಮಿ ವಿಚಾರಕ್ಕೆ ಕಾಂಗ್ರೆಸ್‌ ಎಸ್‌ಐಟಿ ರಚನೆ ಮಾಡಿತು. ಅವರು ಒತ್ತುವರಿ ಮಾಡಿದ್ದಕ್ಕೆ ಏಕೆ ರಚಿಸಿಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನ್ನ ಕೇಂದ್ರ ಸಚಿವ ಸ್ಥಾನಕ್ಕೂ ಅರಣ್ಯ ಇಲಾಖೆಗೂ ಏನು ಸಂಬಂಧ ಇದೆ? ನಾನು ಏಕೆ ಅವರಿಗೆ ನೋಟಿಸ್‌ ಕೊಡಿಸಲಿ? ಅಕಸ್ಮಾತ್‌ ಮುಖ್ಯಮಂತ್ರಿ ಆಗಿದ್ದಾಗ ಅಥವಾ ಈಗ ಕೇಂದ್ರ ಸರ್ಕಾರದಲ್ಲಿ ಸಚಿವನಾಗಿ ನಾನೇ ನೋಟಿಸ್‌ ಕೊಡಿಸಿದ್ದೇನೆ, ತಲೆ ಹಾಕಿದ್ದೇನೆ ಎಂದಿಟ್ಟುಕೊಂಡರೂ ಕಾನೂನು ಇದ್ದು, ಹೋರಾಟ ನಡೆಸಬಹುದು. ಪ್ರಾಮಾಣಿಕವಾಗಿದ್ದರೆ, ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳದಿದ್ದರೆ, ಅದಕ್ಕೆ ಸಂಬಂಧ ದಾಖಲೆಗಳಿದ್ದರೆ ಏಕೆ ಹೆದರಬೇಕು? ನನ್ನ ಮೇಲೆ ಏಕೆ ದೂರುತ್ತೀರಿ? ಎಂದು ಕೇಳಿದರು.

ADVERTISEMENT

ರಾಜಕಾರಣಕ್ಕೆ ಬರುವ ಮುನ್ನ ನಾನು ಸಿನಿಮಾ ವಿತರಕನಾಗಿದ್ದೆ. 1983ರಲ್ಲಿ ನಾನು ಬಿಡದಿಯಲ್ಲಿ ಭೂಮಿ ಖರೀದಿಸಿದ್ದೆ. ಆದರೆ, ಆ ಜಮೀನಿನ್ನು ಒತ್ತುವರಿ ಮಾಡಿಕೊಂಡಿದ್ದೇನೆ ಎಂದು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತು. ಒಡೆದು ಹಾಕಲು ಐದು ಜೆಸಿಬಿ ತಂದಿದ್ದರು. ನಾನು ಖರೀದಿ ಮಾಡಿದ್ದಕ್ಕಿಂತ 4 ಎಕರೆ ಕಡಿಮೆ ಆಗಿದೆ. ನನಗೆ ಎಷ್ಟು ಹಿಂಸೆ ಕೊಟ್ಟರು. ಈಗಲೂ ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ. ಸಿದ್ದರಾಮಯ್ಯ ಅವರಿಗೆ ಹೇಳಿ ರಮೇಶ್‌ ಕುಮಾರ್‌ ಈ ರೀತಿ ಮಾಡಿಸಿದರೆ? ಬೆವರು ಸುರಿಸಿ ದುಡಿದು ಖರೀದಿಸಿದ ಜಮೀನು ಅದು. ಇವರ ರೀತಿ ಹಗಲು ದರೋಡೆ ಮಾಡಿ ಜಮೀನು ಖರೀದಿಸಿದ್ದು ಅಲ್ಲ ಎಂದರು.

ಶ್ರೀನಿವಾಸಪುರದ ಬುದ್ಧಿಜೀವಿ ಮಾಜಿ ಶಾಸಕರಂಥವರನ್ನು ಮತ್ತೆ ರಾಜ್ಯದಲ್ಲಿ ಕಾಣಲು ಸಾಧ್ಯವೇ ಇಲ್ಲ. ವೈಯಕ್ತಿಕ ವಿಚಾರ ಸಂಬಂಧ ರಮೇಶ್‌ ಕುಮಾರ್‌ ರೈತರ ಸಭೆ ನಡೆಸಿದ್ದಾರೆ. ಅರಣ್ಯ ಭೂಮಿ ವಿಚಾರದಲ್ಲಿ ಭಿಕ್ಷೆ ಬೇಡಬೇಡಿ ಎಂಬುದಾಗಿ ರೈತರಿಗೆ ಹೇಳುತ್ತಿದ್ದಾರೆ. ಅವರ ಸಮಸ್ಯೆ ಬಂದಿದ್ದಕ್ಕೆ ಈಗ ರೈತರನ್ನು ಅಡ್ಡ ಇಟ್ಟುಕೊಂಡಿದ್ದಾರೆ. ರಮೇಶ್‌ಕುಮಾರ್‌ ಸ್ವಾರ್ಥಕ್ಕೆ ರೈತರನ್ನು ಬಳಕೆ ಮಾಡಿಕೊಳ್ಳಬಾರದು. ನನಗೆ ಸಮಸ್ಯೆ ಬಂದಾಗ ಜನರನ್ನು ಕರೆದೆನೇ? ಅರಣ್ಯ ಭೂಮಿ ವಿಚಾರದಲ್ಲಿ ರಮೇಶ್‌ ಕುಮಾರ್‌ ಬುದ್ಧಿವಂತಿಕೆ ತೋರುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಮೇಲೂರು ರವಿ, ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ಚೌಡರೆಡ್ಡಿ ತೂಪಲ್ಲಿ, ಎಚ್.ಎಂ.ರಮೇಶ್ ಗೌಡ, ಕೆ.ಅನ್ನದಾನಿ, ವಡಗೂರು ಹರೀಶ್‌, ಕೆ.ಬಿ.ಗೋಪಾಲಕೃಷ್ಣ ಇದ್ದರು.

ರಮೇಶ್‌ ಕುಮಾರ್‌ಗೆ ನಾನ್ಯಾಕೇ ನೋಟಿಸ್ ಕೊಡಿಸಲಿ: ಕುಮಾರಸ್ವಾಮಿ ರೈತರ ಬೆಳೆ ನಾಶವಾದಾಗ ಮಾಜಿ ಶಾಸಕರ ದನಿ ಎಲ್ಲಿ ಹೋಗಿತ್ತು: ಪ್ರಶ್ನೆ ಒತ್ತುವರಿ ಮಾಡಿಕೊಳ್ಳದಿದ್ದರೆ ದಾಖಲೆ ತೋರಿಸಲಿ: ಸವಾಲು

ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ: ಎಚ್‌ಡಿಕೆ

ಏನೇ ಆರೋಪ ಮಾಡಿದರೂ ದಾಖಲೆ ಕೊಡಿ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದವರು ಕೇಳುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಶೇ 40 ಕಮಿಷನ್‌ ಎಂದು ಆರೋಪಿಸಿದಾಗ ಯಾವ ದಾಖಲೆ ಕೊಟ್ಟಿದ್ದರು? ಅಬಕಾರಿ ಇಲಾಖೆಯಲ್ಲಿ ಇವರು ದುಡ್ಡು ತೆಗೆದುಕೊಂಡಿರುವುದಕ್ಕೆ ಈಗ ದಾಖಲೆ ಇದೆ. ₹25 ಲಕ್ಷ ತೆಗೆದುಕೊಂಡು ಸಿಕ್ಕಿಬಿದ್ದಿದ್ದಾರೆ ಮಂತ್ರಿ ಹೆಸರೂ ಬಂದಿದೆ. ಇದಕ್ಕಿಂತ ದಾಖಲೇ ಬೇಕೇ ಎಂದು ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಹೊಸದಾಗಿ 500ಕ್ಕೂ ಅಧಿಕ ಮದ್ಯದಂಗಡಿ ಹರಾಜು ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ ದಿನವೇ ಇದು ದುಡ್ಡು ಹೊಡೆಯುವ ಕಾರ್ಯಕ್ರಮ ಎಂಬುದಾಗಿ ನಾನು ಹೇಳಿದ್ದೆ ಎಂದರು. ಈ ಸರ್ಕಾರದ ಮಂತ್ರಿಗಳು ಎಷ್ಟು ಕೆರೆ ನುಂಗಿದ್ದಾರೆ? ಯಾರು ಯಾರು ಭೂಮಿ ಲಪಟಾಯಿಸಿದ್ದಾರೆ ಎಂಬುದಕ್ಕೆ ಟನ್‌ಗಟ್ಟಲೆ ದಾಖಲೆ ಕೊಡಬಲ್ಲೆ. ಆದರೆ ಅದು ಉಪಯೋಗಕ್ಕೆ ಬರಲ್ಲ. ಹಿಂದೆ ಹೋರಾಟ ನಡೆಸಿ ಹಲವಾರು ದಾಖಲೆ ಕೊಟ್ಟಿದ್ದೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ಪದೇಪದೇ ಎಸಗುವ ತನ್ನ ತಪ್ಪುಗಳು ಹಾಗೂ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ ಎಂದರು. ‘ರಾಜ್ಯದ ಯಾವುದೇ ಸಚಿವರು ನನ್ನನ್ನು ಅಭಿವೃದ್ಧಿ ಕೆಲಸದ ಸಂಬಂಧ ಭೇಟಿ ಮಾಡಿ ಚರ್ಚಿಸಿಲ್ಲ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿಯಾಗಿ ಅವರ ರಾಜ್ಯದ ಬೇಡಿಕೆಗಳ ಮನವಿ ಕೊಟ್ಟು ಹೋಗುತ್ತಿದ್ದಾರೆ. ಆದರೆ ಇವರು ಆ ಪದ್ಧತಿಯನ್ನೇ ಇಟ್ಟುಕೊಂಡಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

ಮೈತ್ರಿ: ಸ್ಥಳೀಯ ಮಾತುಕತೆ ಅಂತಿಮ ಅಲ್ಲ ‌ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಸಂಬಂಧ ಸ್ಥಳೀಯವಾಗಿ ಯಾರೇ ಚರ್ಚೆ ಮಾಡಿದರೂ ಅದು ಅಂತಿಮ ಅಲ್ಲ. ಮಂಡ್ಯ ಹಾಸನ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸೀಟು ಕುರಿತು ಮಾತುಕತೆ ಆಗಿಲ್ಲ. ಚುನಾವಣೆ ಬಂದಾಗ ಹೈಕಮಾಂಡ್‌ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮಾತುಕತೆ ಮೂಲಕ ತೀರ್ಮಾನ ಕೈಗೊಳ್ಳುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ ಸಂಬಂಧ ಎಚ್‌.ಡಿ.ದೇವೇಗೌಡರ ಮಾತಿನ ಅರ್ಥವೇ ಬೇರೆ. ಭ್ರಷ್ಟ ರಾಜ್ಯ ಸರ್ಕಾರ ತೆಗೆದು ಹಾಕುವುದು ನಮ್ಮ ಮೊದಲ ಆದ್ಯತೆ ಆಗಿದೆ. ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಗೆಲ್ಲುವತ್ತ ಹರಿಸುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಮಾಲೂರು ಮೇಲ್ಸೇತುವೆಗೆ ಎಚ್‌ಡಿಕೆ ವಿರೋಧ ₹ 800 ಕೋಟಿ ಖರ್ಚು ಮಾಡಿ ಮಾಲೂರು ನಗರದಲ್ಲಿ ಮೇಲ್ಸೇತುವೆ ಮಾಡಲು ಹೊರಟಿದ್ದಾರೆ. ಅಲ್ಲಿ ಇರುವುದೇ ಒಂದು ಪ್ರಮುಖವಾದ ವಾಣಿಜ್ಯ ರಸ್ತೆ. ಹಲವಾರು ವರ್ಷಗಳಿಂದ ಇರುವ ವ್ಯಾಪಾರಿಗಳ ಮಳಿಗೆ ಹೊಡೆಯಲು ಹೊರಟಿದ್ದಾರೆ. ಅದು ನಿಲ್ಲಬೇಕು. ಮಾಲೂರು ಬಳಿಗೆ ಎಸ್‌ಟಿಆರ್‌ಆರ್‌ ರಸ್ತೆ ಬರಲಿದೆ ಎಕ್ಸ್‌ಪ್ರೆಸ್‌ವೇ ಕೂಡ ಇದೆ. ಊರಿನೊಳಗೆ ಮೇಲ್ಸೇತುವೆ ಏಕೆ? ದುಡ್ಡು ಹೆಚ್ಚಾಗಿದೆಯೇ? ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಕಮಿಷನ್‌ ಹೊಡೆಯುವ ಕೆಲಸ ಆಗಬಾರದು ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.