ADVERTISEMENT

ಕೆಜಿಎಫ್‌: ಕುಪ್ಪಂ–ಮಾರಿಕುಪ್ಪಂ ರೈಲ್ವೆ ಮಾರ್ಗ ವಿಳಂಬ

ಕೇಂದ್ರದ ವಿರುದ್ಧ ಕೆ.ಎಚ್. ಮುನಿಯಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 4:04 IST
Last Updated 19 ಫೆಬ್ರುವರಿ 2023, 4:04 IST

ಕೆಜಿಎಫ್‌: ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಮಾರಿಕುಪ್ಪ– ಕುಪ್ಪಂ ರೈಲು ಮಾರ್ಗವನ್ನು ಪೂರ್ಣಗೊಳಿಸಲು ಈಗಿನ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಆರೋಪಿಸಿದರು.

ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಅಧಿಕಾರದಲ್ಲಿದ್ದಾಗ ₹ 270 ಕೋಟಿಗೂ ಹೆಚ್ಚು ಅನುದಾನ ತಂದಿದ್ದೆ. ಬಿಸಾನತ್ತಂನಿಂದ ಮಾರಿಕುಪ್ಪಂ ಮಾರ್ಗ ಎಂದು ಮೊದಲು ಇತ್ತು. ನಂತರ ಅದನ್ನು ಕುಪ್ಪಂನಿಂದ ಮಾರಿಕುಪ್ಪಂ ಎಂದು ಬದಲಾಯಿಸಲಾಯಿತು. ಇಷ್ಟರೊಳಗೆ ಅದನ್ನು ಪೂರ್ಣಗೊಳಿಸಬೇಕಿತ್ತು’ ಎಂದರು.

‘ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ದೇಶದಲ್ಲಿ ಹಣ ಎಲ್ಲಿ ಸಿಗುತ್ತದೆ ಎಂಬುದನ್ನು ನೋಡುತ್ತಿದೆ. ಲಂಚಕ್ಕೆ ಹೆಸರುವಾಸಿಯಾಗಿದೆ. ನಾನೇ ರೈಲು ಮಾರ್ಗಕ್ಕೆ ದುಡ್ಡು ಕೊಟ್ಟಿದ್ದೇನೆ. ದಾಖಲೆ ತೆಗೆದು ನೋಡಲಿ. ಬಿಲ್‌ ಪುಸ್ತಕಗಳನ್ನು ಪರಿಶೀಲಿಸಲಿ. ನಾಲ್ಕು ವರ್ಷವಾದರೂ ರೈಲು ಮಾರ್ಗ ಮಾಡಲು ಅವರಿಗೆ ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

ADVERTISEMENT

ರೈಲು ಮಾರ್ಗಕ್ಕೆ ಬೇಕಾದ ಹಣವನ್ನು ಬಜೆಟ್‌ನಲ್ಲಿ ಸೇರಿಸಲಾಗಿತ್ತು. ಈಗಲಾದರೂ ಮಾಡಲು ಅವರು ಮನಸ್ಸು ಮಾಡಿದ್ದರೆ ಮಾಡಲಿ. ರೈಲು ಮಾರ್ಗಕ್ಕೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರದ ಸಹಕಾರ ಬೇಕಾಗುತ್ತದೆ. ರಾಜಶೇಖರರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗಲೇ ಮಾತುಕತೆ ನಡೆಸಿತ್ತು. ಈಗಿನ ಸರ್ಕಾರ ಸಂಬಂಧಿಸಿದವರ ಜೊತೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀನಿವಾಸಪುರದಿಂದ ಮದನಪಲ್ಲಿ, ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ಹೊಸ ರೈಲು ಮಾರ್ಗಕ್ಕೆ ಕೂಡ ಅನುಮೋದನೆ ಸಿಕ್ಕಿತ್ತು. ಆದರೆ, ಯೋಜನೆಗೆ ಹಣ ಕೊಡುವುದು ಸರ್ಕಾರದ ಜವಾಬ್ದಾರಿ. ಹಣ ನೀಡದೆ ಇದ್ದರೆ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಈಗಿನ ಸರ್ಕಾರದ ಬಳಿ ದುಡ್ಡೇ ಇಲ್ಲ. ಬಜೆಟ್‌ನಲ್ಲಿ ಘೋಷಿಸಿರುವುದನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕೈಗಾರಿಕೆ ವಲಯ ಮಾಡಲು ನಾವು ಅಧಿಕಾರದಲ್ಲಿದ್ದಾಗ ಸಿದ್ಧತೆ ನಡೆಸಿದ್ದೆವು. ಅವರು ಅಧಿಕಾರಕ್ಕೆ ಬಂದ ನಂತರ ಮಾಡಲಿಲ್ಲ. ಕೊನೆ ಪಕ್ಷ ಒಂದು ಸಾವಿರ ಎಕರೆಯಲ್ಲಿ ಮಾಡಿ ಎಂದು ಶಾಸಕಿ ಕೇಳಿದ್ದರು. ಅದನ್ನು ಮಾಡಲಿಲ್ಲ ಎಂದು ದೂರಿದರು.

ರಾಜಕೀಯ ನಿರ್ಣಯ ತೆಗೆದುಕೊಳ್ಳಲಿಲ್ಲ. ಮೂರು ತಿಂಗಳಲ್ಲಿ ಇನ್ನೇನು ಮಾಡಲು ಸಾಧ್ಯವಾಗುತ್ತದೆ. ಮೂರು ತಿಂಗಳು ಕಾಯಿರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕೆಜಿಎಫ್‌ನಲ್ಲಿ ಕೈಗಾರಿಕೆ ಸೇರಿದಂತೆ ಎಲ್ಲಾ ಯೋಜನೆಗಳು ಜಾರಿಗೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕಿ ಎಂ. ರೂಪಕಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.