ADVERTISEMENT

ಕೋಚಿಮುಲ್ ಅಧ್ಯಕ್ಷರಾಗಿ ಕೆ.ವೈನಂಜೇಗೌಡ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 13:58 IST
Last Updated 25 ಮೇ 2019, 13:58 IST
ಕೋಲಾರದಲ್ಲಿ ಶನಿವಾರ ಕೋಚಿಮುಲ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಕೆ.ವೈ.ನಂಜೇಗೌಡ ಅವರಿಗೆ ಸಚಿವರು, ಒಕ್ಕೂಟದ ನಿರ್ದೇಶಕರು ಹೂವಿನ ಹಾರ ಹಾಕಿ ಅಭಿನಂದಿಸಿದರು.
ಕೋಲಾರದಲ್ಲಿ ಶನಿವಾರ ಕೋಚಿಮುಲ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಕೆ.ವೈ.ನಂಜೇಗೌಡ ಅವರಿಗೆ ಸಚಿವರು, ಒಕ್ಕೂಟದ ನಿರ್ದೇಶಕರು ಹೂವಿನ ಹಾರ ಹಾಕಿ ಅಭಿನಂದಿಸಿದರು.   

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಸ್ಥಾನಕ್ಕೆ ನಗರದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಮಾಲೂರು ಶಾಸಕ ಹಾಗೂ ಒಕ್ಕೂಟದ ನಿರ್ದೇಶಕ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳಿಗ್ಗೆ 9ರಿಂದ 11ರತನಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು, ಮಾಲೂರು ತಾಲ್ಲೂಕು ನಿರ್ದೇಶಕ ಕೆ.ವೈ.ನಂಜೇಗೌಡರು ಮಾತ್ರ ನಾಮಪತ್ರ ಸಲ್ಲಿಸಿದ್ದರು, ಎದುರಾಳಿಯಾಗಿ ಯಾರೋಬ್ಬರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸೋಮಶೇಖರ್ ಘೋಷಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವೈ.ನಂಜೇಗೌಡ, ‘ಒಕ್ಕೂಟದ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಜವಬ್ದಾರಿ ಹೆಚ್ಚಿಸಿದ್ದಾರೆ. ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವುದರ ಜತೆಗೆ ಹೊಸ ಕಾರ್ಯಕ್ರಮಗಳನ್ನು ರೂಪಿಸಲು ನಿರ್ದೇಶಕರು ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ಎರಡೂ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ನಿರ್ದೇಶಕರ ಸಹಕಾರದಿಂದ 2ನೇ ಭಾರಿ ಅಧ್ಯಕ್ಷನಾಗಿ ಆವಿರೋಧವಾಗಿ ಆಯ್ಕೆ ಮಾಡಿದ್ದಾರೆ. ರೈತರ ಹಾಗೂ ಒಕ್ಕೂಟದ ಆರ್ಥಿಕ ಸುಧಾರಣೆಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ, ಗುಣಮಟ್ಟದ ಹಾಲು ಉತ್ಪಾದನೆಗೆ ಅಗತ್ಯವಿರುವ ಸೌಕರ್ಯ ರೈತರಿಗೆ ಹೆಚ್ಚಿಗೆ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಹಿಂದೆ ನನ್ನ ಆಡಳಿತದ ಅವಧಿಯಲ್ಲಿ ₹ 165 ಕೋಟಿ ವೆಚ್ಚದಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಹಾಲು ಉತ್ಪಾದಕರ ಮಕ್ಕಳ ಉನ್ನತ ಶಿಕ್ಷಣ ಅಭ್ಯಾಸಕ್ಕೆ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯ ನಿರ್ಮಿಸಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವೇಶನ ಕಲ್ಪಿಸಿಕೊಟ್ಟಿದ್ದು, 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಹೇಳಿರು.

‘ಶಿಡ್ಲಘಟ್ಟದಲ್ಲಿ ಪಶು ಆಹಾರ ಘಟಕ, ಶ್ರೀನಿವಾಸಪುರ ಬಳಿ ಕಾಟನ್ ಬಕ್ಸ್ ನಿರ್ಮಾಣ ಘಟಕ ನಿರ್ಮಿಸಲು ಜಾಗ ಮತ್ತು ₹ 35 ಕೋಟಿ ಮಂಜೂರಾಗಿದೆ. ಇವೆಲ್ಲವನ್ನು 2 ವರ್ಷದಲ್ಲಿ ಪೂರ್ಣಗೊಳಿಸಲು ಗುರಿಹೊಂದಲಾಗಿದೆ. ಈ ಕಾರ್ಯಗಳನ್ನು ಪೂರ್ಣಗೊಳಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ’ ಎಂದರು.

‘ನಾನು ಶಾಸಕನಾಗಿರುವ ಹಿನ್ನಲೆಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಸರ್ಕಾರದ ಮಟ್ಟದಲ್ಲಿ ಮಾಡಿಸಲು ಸುಲಭವಾಗುತ್ತದೆ ಎಂಬ ಉದ್ದೇಶದಿಂದ ಎಲ್ಲಾ ನಿರ್ದೇಶಕರು ಎರಡನೇ ಭಾರಿಯೂ ಅಧ್ಯಕ್ಷನಾಗಿ ನೇಮಕ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಅಧ್ಯಕ್ಷ ಸ್ಥಾನ ನೀಡದಿದ್ದರೆ ಪಕ್ಷಾಂತರ ಮಾಡುತ್ತೇನೆ ಎಂದು ಆರೋಪ ನಿಮ್ಮ ಮೇಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ವೈ.ನಂಜೇಗೌಡ, ‘ನಾನು ಎಂದಿಗೂ ಅನೈತಿಕ ರಾಜಕಾರಣ ಮಾಡಲ್ಲ. ಗ್ರಾಮ ಪಂಚಾಯಿತಿ ಸದಸ್ಯನಿಂದ ಶಾಸಕನಾಗಿದ್ದೇನೆ, ನನಗೆ ಬ್ಲಾಕ್ ಮೈಲ್ ರಾಜಕಾರಣ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಬೆಳೆದು ಬಂದವನು, ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸಚಿವರಾದ ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ನಿರ್ದೇಶಕರಾದ ಜಯಸಿಂಹ ಕೃಷ್ಭಪ್ಪ, ಕಾಡೇನಹಳ್ಳಿ ನಾಗರಾಜ್, ಡಿ.ವಿ.ಹರೀಶ್, ಊಲವಾಡಿ ಬಾಬು, ಕಾಂತರಾಜ್, ಅಶ್ವಥರೆಡ್ಡಿ, ಹನುಮೇಶ್, ಶ್ರೀನಿವಾಸ್, ಮಂಜುನಾಥ್ ರೆಡ್ಡಿ, ಅಶ್ವಥ್ ನಾರಾಯನರೆಡ್ಡಿ, ಸುನಂದಮ್ಮ, ಕಾಂತಮ್ಮ, ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.